ಶರಣ್ ಈ ಹಿಂದೆ “ಜಯಲಲಿತಾ’ ಚಿತ್ರದಲ್ಲಿ ಲೇಡಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು. ಆ ಗೆಟಪ್‌ನಲ್ಲಿ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದರು ಶರಣ್. ಈಗ ಮತ್ತೂಮ್ಮೆ ಲೇಡಿ ಗೆಟಪ್‌ನಲ್ಲಿ ನಗಿಸಲು ಶರಣ್ ರೆಡಿಯಾಗಿದ್ದಾರೆ. ಅದು “ವಿಕ್ಟರಿ-2′ ಚಿತ್ರಕ್ಕಾಗಿ. ಹೌದು, ಶರಣ್ “ವಿಕ್ಟರಿ-2′ ಚಿತ್ರಕ್ಕಾಗಿ ಮತ್ತೆ ಲೇಡಿ ಗೆಟಪ್ ಹಾಕಿದ್ದಾರೆ. ಈಗಾಗಲೇ ಅವರ ಗೆಟಪ್‌ನ ಫೋಟೋಗಳು ಬಿಡುಗಡೆಯಾಗಿದ್ದು, ಎಲ್ಲಾ ಕಡೆ ಓಡಾಡುತ್ತಿದೆ.
ಈ ಬಾರಿ ಕೇವಲ ಶರಣ್ ಅಷ್ಟೇ ಅಲ್ಲ, ಅವರ ಜೊತೆ ರವಿಶಂಕರ್ ಕೂಡಾ ಲೇಡಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಫೋಟೋಗಳನ್ನು ನೋಡಿದವರು ಸಿನಿಮಾ ಮಸ್ತ್ ಮಜಾ ಕೊಡೋದು ಗ್ಯಾರಂಟಿ ಎಂಬ ಲೆಕ್ಕಾಚಾರದಲ್ಲಿದ್ದಾರೆ. “ವಿಕ್ಟರಿ’ ಚಿತ್ರದಲ್ಲಿ ರವಿಶಂಕರ್ ಪ್ರಮುಖ ಪಾತ್ರ ಮಾಡಿದ್ದು, ಪ್ರೇಕ್ಷಕರು ಇಷ್ಟಪಟ್ಟಿದ್ದರು. ಈಗ “ವಿಕ್ಟರಿ-2’ನಲ್ಲೂ ಆ ಜೋಡಿ ಮುಂದುವರೆದಿದೆ.
ಇಬ್ಬರ ಲೇಡಿ ಗೆಟಪ್ ಚಿತ್ರದ ಪ್ರಮುಖ ಸನ್ನಿವೇಶವಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ. ಅಂದಹಾಗೆ, ಈ ದೃಶ್ಯ ಕೇವಲ ಒಂದೆರಡು ನಿಮಿಷ ಬಂದು ಹೋಗುವುದಿಲ್ಲ. ಬರೋಬ್ಬರಿ 40 ನಿಮಿಷಗಳ ಕಾಲ ಬರಲಿದೆ. ಕಥೆಯನ್ನು ಮುನ್ನಡೆಸುವಲ್ಲಿ ಈ ದೃಶ್ಯ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದು ನಿರ್ದೇಶಕ ಸಂತು ಮಾತು. ಶರಣ್ ಈ ಗೆಟಪ್‌ಗಾಗಿ ತೂಕ ಇಳಿಸಿಕೊಂಡು ತಯಾರಾಗಿದ್ದು, ರವಿಶಂಕರ್ ಕೂಡಾ ಸಾಕಷ್ಟು ಪೂರ್ವತಯಾರಿ ಮಾಡಿಯೇ ಮೇಕಪ್ ಹಚ್ಚಿದ್ದಾಗಿ ಹೇಳುತ್ತಾರೆ ಸಂತು.
ಸುಮಾರು 25 ದಿನಗಳ ಕಾಲ ಈ ದೃಶ್ಯಗಳ ಚಿತ್ರೀಕರಣ ಮಾಡಲಾಗಿದೆಯಂತೆ. ಸೋಮವಾರವಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಆಡಿಯೋ ಬಿಡುಗಡೆಯನ್ನು ಅದ್ಧೂರಿಯಾಗಿ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ. ಈಗಾಗಲೇ ರಷ್ಯಾದ ಸುಂದರ ತಾಣಗಳಲ್ಲಿ ಹಾಡೊಂದನ್ನು ಚಿತ್ರೀಕರಿಸಿಕೊಂಡು ಬಂದಿದೆ ಚಿತ್ರತಂಡ. ಹಾಡಿನಲ್ಲಿ ಯಕ್ಷಗಾನ, ಹುಲಿ ಕುಣಿತ ಸೇರಿದಂತೆ ಕರುನಾಡಿನ ಹಲವು ಕಲಾಪ್ರಾಕಾರಗಳನ್ನು ಈ ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ.
ವಿ.ನಾಗೇಂದ್ರ ಪ್ರಸಾದ್ ಬರೆದಿರುವ “ಪ್ಲೀಸು ಟ್ರಸ್ಟು .. ನಾನು ಚೀಪ್ ಅಂಡ್ ಬೆಸ್ಟು …’ ಹಾಡನ್ನು ರಷ್ಯಾದಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರವನ್ನು ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ಸೇರಿ ನಿರ್ಮಿಸುತಿದ್ದಾರೆ. ಚಿತ್ರದಲ್ಲಿ ಅಸ್ಮಿತಾ ಸೂದ್ ಹಾಗೂ ಅಪೂರ್ವ ನಾಯಕಿಯರಾಗಿ ನಟಿಸಿದ್ದಾರೆ.