ಶರಣ್ ಅಭಿನಯದ “ರಾಜ್-ವಿಷ್ಣು’ ಆಗಸ್ಟ್ 4ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಇನ್ನು “ಸತ್ಯ ಹರಿಶ್ಚಂದ್ರ’ ಎಂಬ ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆ ಶರಣ್, ಯೋಗಾನಂದ್ ಮುದ್ದಾನ್ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸುವ ಸುದ್ದಿ ಇತ್ತು. ಈಗ ಅವರು ಇನ್ನೂ ಒಂದು ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಹೆಸರಿಡದ ಚಿತ್ರ ಮುಂದಿನ ವಾರದಿಂದ ಪ್ರಾರಂಭವಾಗಲಿದೆ.
ಶರಣ್ ಈ ಹಿಂದೆ ಲಡ್ಡೂ ಸಿನಿಮಾ ಎಂಬ ಬ್ಯಾನರ್ನಡಿ “ರ್ಯಾಂಬೋ’ ಚಿತ್ರ ಮಾಡಿದ್ದರು. ಈಗ ಈ ಹೊಸ ಚಿತ್ರ ಸಹ ಲಡ್ಡೂ ಸಿನಿಮಾ ಬ್ಯಾನರ್ನಡಿ ನಿರ್ಮಾಣವಾಗುತ್ತಿದೆ. ಆ ಚಿತ್ರವನ್ನು ನಿರ್ಮಿಸಿದ್ದ ಅಟ್ಲಾಂಟ ನಾಗೇಂದ್ರ ಈ ಚಿತ್ರವನ್ನು ಸಹ ನಿರ್ಮಿಸುತ್ತಿದ್ದಾರೆ. ವಿಶೇಷವೆಂದರೆ, ಈ ಚಿತ್ರಕ್ಕೆ ಹಲವು ತಂತ್ರಜ್ಞರು ಸಹನಿರ್ಮಾಪಕರಾಗಿದ್ದಾರೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಛಾಯಾಗ್ರಾಹಕ ಸುಧಾಕರ್ ರಾಜ್, ಸಂಕಲನಕಾರ ಕೆ.ಎಂ. ಪ್ರಕಾಶ್, ಕಲಾ ನಿರ್ದೇಶಕ ಮೋಹನ್ ಬಿ ಕೆರೆ, ಕ್ರಿಯೇಟಿವ್ ಹೆಡ್ ತರುಣ್ ಸುಧೀರ್ ಇವರೆಲ್ಲಾ ವರ್ಕಿಂಗ್ ಪಾಟ್ನರ್ಗಳಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರದಿಂದ ಬಂದ ಲಾಭದಲ್ಲಿ ಎಲ್ಲರಿಗೂ ಶೇರ್ ಸಿಗಲಿದೆ.
ಈ ಚಿತ್ರವನ್ನು “ದಿಲ್ವಾಲ’ ಮತ್ತು “ಕೃಷ್ಣ ರುಕ್ಕು’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ಅನಿಲ್ ನಿರ್ದೇಶಿಸುತ್ತಿದ್ದಾರೆ. ಇನ್ನು ತರುಣ್ ಈ ಚಿತ್ರಕ್ಕೆ ಕಥೆ ಹಾಗೂ ಚಿತ್ರಕಥೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಚಿತ್ರಕ್ಕೆ ಸದ್ಯಕ್ಕೆ ನಾಯಕಿಯ ಆಯ್ಕೆಯೂ ಆಗಿಲ್ಲ ಮತ್ತು ಹೆಸರೂ ಪಕ್ಕಾ ಆಗಿಲ್ಲ. ಮೊದಲು ಬೆಂಗಳೂರಿನಲ್ಲಿ ಚಿತ್ರೀಕರಣ ಶುರುವಾಗಿ, ನಂತರ ಗೋವಾ, ರಾಮೇಶ್ವರಂ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.