ಮುಂಬಯಿ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ಮುಂದುವರಿದಿರುವ ನಡುವೆಯೇ, ಒಂದು ವೇಳೆ ಮುಂದಿನ 24 ಗಂಟೆಯೊಳಗೆ ಪರಿಸ್ಥಿತಿ ಸುಧಾರಿಸದಿದ್ದರೆ ಮುಂದೆ ನಡೆಯಲಿರುವ ಯಾವುದೇ ಅಹಿತಕರ ಘಟನೆಗೆ ಕೇಂದ್ರ ಮತ್ತು ಕರ್ನಾಟಕದ ಬಿಜೆಪಿ ಸರ್ಕಾರವೇ ಹೊಣೆಯಾಗಲಿದೆ ಎಂದು ಎನ್ ಸಿಪಿ ವರಿಷ್ಠ ಶರದ್ ಪವಾರ್ ಎಚ್ಚರಿಕೆಯನ್ನು ನೀಡಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಅಂಬೇಡ್ಕರ್ ಅವರ ಹೋರಾಟ ಲಕ್ಷಾಂತರ ಜನರಿಗೆ ಭರವಸೆ ನೀಡಿದೆ: ಪ್ರಧಾನಿ ಮೋದಿ
ಕರ್ನಾಟಕ ಸರ್ಕಾರ ಮಹಾರಾಷ್ಟ್ರ ಜನತೆಯ ತಾಳ್ಮೆಯನ್ನು ಪರೀಕ್ಷಿಸುವುದು ಬೇಡ. ಅಷ್ಟೇ ಅಲ್ಲ ಮಾತುಕತೆ ಮೂಲಕ ಎರಡೂ ರಾಜ್ಯಗಳು ವಿವಾದವನ್ನು ಬಗೆಹರಿಸಿಕೊಳ್ಳಲಿ ಎಂದು ಪವಾರ್ ಸಲಹೆ ನೀಡಿದ್ದಾರೆ.
ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಏನು ನಡೆಯುತ್ತಿದೆ ಎಂಬುದನ್ನು ನೋಡಿದ ನಂತರ ಈ ವಿಚಾರದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳುವ ಕಾಲ ಒದಗಿ ಬಂದಿರುವುದಾಗಿ ಪವಾರ್ ತಿಳಿಸಿದ್ದಾರೆ.
ಗಡಿ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ಎಲ್ಲಾ ಪಕ್ಷದವರನ್ನೂ ವಿಶ್ವಾಸ ತೆಗೆದುಕೊಳ್ಳಬೇಕು. ಶೀಘ್ರವೇ ಸಂಸತ್ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದ್ದು, ಎಲ್ಲಾ ಸಂಸದರು ಒಗ್ಗಟ್ಟಾಗಿ ಒಂದು ದೃಢ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಪವಾರ್ ತಿಳಿಸಿದ್ದಾರೆ.