Advertisement

ದಶಕಗಳ ಬಳಿಕ ಸೇತುವೆಯೇನೋ ಆಯಿತು; ಬಸ್‌ ಆದರೂ ಬೇಗ ಬರಲಿ

02:55 AM Jul 15, 2017 | Team Udayavani |

ಸವಣೂರು: ಶಾಂತಿಮೊಗರುವಿನಲ್ಲಿ ಸೇತುವೆ ನಿರ್ಮಾಣದೊಂದಿಗೆ ಸ್ಥಳೀಯರ ಹಲವು ದಶಕಗಳ ಕನಸು ನನಸಾಗಿದ್ದು, ಈ ಮಾರ್ಗವಾಗಿ ಬಸ್‌ ಸಂಚಾರದ ಕನಸೊಂದು ಬಾಕಿ ಇದೆ. ಈ ಮಾರ್ಗವಾಗಿ ಬಸ್‌ ಸೌಲಭ್ಯ ಒದಗಿಸುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ವಿವಿಧೆಡೆ ತೆರಳಲು ಸಾಕಷ್ಟು ಸಮಯ ಮತ್ತು ಹಣ ಉಳಿತಾಯವಾಗಲಿದೆ. ಆಲಂಕಾರು ಭಾಗದ ಜನತೆಗೆ ಪುತ್ತೂರು ತಲುಪಬೇಕಾದರೆ ಉಪ್ಪಿನಂಗಡಿ ಮೂಲಕ ಹೋಗಬೇಕಾದ ಅನಿವಾರ್ಯ ಇತ್ತು.ಇಲ್ಲಿಂದ ಪುತ್ತೂರಿಗೆ 28 ಕಿ.ಮೀ. ಮತ್ತು ಆಲಂಕಾರಿನಿಂದ ಶಾಂತಿಮೊಗರು – ಸವಣೂರು ಮಾರ್ಗವಾಗಿ ತೆರಳಲು 24 ಕಿ.ಮೀ. ದೂರವಿದೆ. ಈ ಸೇತುವೆಯಿಂದ ಸುಮಾರು 4 ಕಿ.ಮೀ. ದೂರ ಕಡಿಮೆಯಾಗಲಿದೆ. ಹೀಗಾಗಿ ಆಲಂಕಾರು- ಶಾಂತಿಮೊಗರು – ಸವಣೂರು ಮಾರ್ಗವಾಗಿ ಪುತ್ತೂರಿಗೆ ಬಸ್‌ ಸಂಚಾರ ಆರಂಭವಾಗ ಬೇಕು ಎಂಬುದು ಗ್ರಾಮಸ್ಥರ ಆಗ್ರಹ.

Advertisement

ಬೆಳ್ಳಾರೆ- ಸವಣೂರು- ಆಲಂಕಾರು-ಕಡಬಕ್ಕೆ ಬಸ್‌
ಬೆಳ್ಳಾರೆಯಿಂದ ಸವಣೂರು-ಶಾಂತಿ ಮೊಗರು ಮಾರ್ಗವಾಗಿ ಆಲಂಕಾರಿಗೆ ಬಸ್‌ ವ್ಯವಸ್ಥೆ ಕಲ್ಪಿಸಿದರೆ ಪಾಲ್ತಾಡಿ, ಪುಣcಪ್ಪಾಡಿ, ಸವಣೂರು, ಬೆಳಂದೂರು ಭಾಗದ ಜನತೆಗೆ ಹೋಬಳಿ ಕೇಂದ್ರವಾದ ಕಡಬಕ್ಕೆ ಆಲಂಕಾರು ಮಾರ್ಗವಾಗಿ ತೆರಳುವುದು ಸುಲಭವಾಗಲಿದೆ. ಇಲ್ಲದಿದ್ದರೆ ಈಗಿರುವಂತೆಯೇ ಸವಣೂರು, ಕಾಣಿಯೂರಿನಿಂದ ಪಂಜಕ್ಕೆ ತೆರಳಿ ಅಲ್ಲಿ ಬೇರೆ ಬಸ್‌ ಹಿಡಿದು ಕಡಬಕ್ಕೆ ಹೋಗಬೇಕು. ಪಾಲ್ತಾಡಿ ಗ್ರಾಮದವರು ಮಾಡಾವು- ಬೆಳ್ಳಾರೆ ಮಾರ್ಗದ ಮೂಲಕ ಪಂಜಕ್ಕೆ ತೆರಳಿ ಬೇರೆ ವಾಹನದಲ್ಲಿ ಕಡಬಕ್ಕೆ ಹೋಗುತ್ತಿದ್ದಾರೆ. ಹೊಸ ಬಸ್‌ ಸೇವೆ ಆರಂಭವಾದರೆ ಈ ಸಂಕಷ್ಟ ಬಗೆಹರಿಯಲಿದೆ.

ಬೆಳ್ಳಾರೆ – ಸವಣೂರು ಹೆಚ್ಚುವರಿ ಬಸ್‌ ಬೇಡಿಕೆ
ಬೆಳ್ಳಾರೆಯಿಂದ ಪೆರುವಾಜೆ ಮೂಲಕ ಸವಣೂರಿಗೆ ಹೆಚ್ಚುವರಿ ಬಸ್‌ಗಳು ಬೇಕು ಎಂಬ ಬೇಡಿಕೆಯೂ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಈಗಾಗಲೇ ಇರುವ ಸೇವೆಯಲ್ಲಿ ಬೆಳಗ್ಗೆ 8 ಗಂಟೆಗೆ ಹೊರಡುವ ಬಸ್‌ನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ಸವಣೂರು, ಪುತ್ತೂರು ಮೊದಲಾದೆಡೆ ಹೋಗುವ ವಿದ್ಯಾರ್ಥಿಗಳು, ಉದ್ಯೋಗಿಗಳು ಇದನ್ನು ಬಳಸುತ್ತಿದ್ದಾರೆ. ಅದು ಸವಣೂರನ್ನು 8.45ರ ವೇಳೆಗೆ ತಲುಪುತ್ತಿದೆ. ಇದರ ಬದಲಾಗಿ ಎಂಟು ಗಂಟೆಗೆ ತಲುಪುವ ಹೆಚ್ಚುವರಿ ಬಸ್‌ ಬೇಕು ಎಂಬುದು ಜನರ ಬೇಡಿಕೆ. ಇದರೊಂದಿಗೆ ಪುತ್ತೂರಿನಿಂದ ಸಂಜೆ 6 ಗಂಟೆಗೆ ಸವಣೂರಿನಿಂದ ಬೆಳ್ಳಾರೆ ಮಾರ್ಗವಾಗಿ ಹೆಚ್ಚುವರಿ ಬಸ್‌ನ ವ್ಯವಸ್ಥೆ ಕಲ್ಪಿಸಿದರೆ ಸಾಕಷ್ಟು ಅನುಕೂಲವಾಗಲಿದೆ. ಬೆಳಗ್ಗೆ 9ರಿಂದ ಸಂಜೆ 5.30ರ ತನಕ ಕೆಲಸ ನಿರ್ವಹಿಸುವವರಿಗೆ 6 ಗಂಟೆಯ ಬಸ್‌ ಅನುಕೂಲವಾಗಲಿದ್ದು, ಬಾಡಿಗೆ ತೆತ್ತು ಖಾಸಗಿ ವಾಹನದಲ್ಲಿ ತೆರಳುವುದು ತಪ್ಪುತ್ತದೆ ಎಂಬುದು ಗ್ರಾಮಸ್ಥರ ವಿವರಣೆ.

ಹೊಸ ಭರವಸೆ
ಜನತೆಯ ಹೆಚ್ಚುವರಿ ಬಸ್‌ ಬೇಡಿಕೆಯ ಕುರಿತಾಗಿ ಸುಳ್ಯದಲ್ಲಿ ನೂತನವಾಗಿ ಡಿಪೋ ಆರಂಭವಾಗುತ್ತಿರುವುದು ಜನತೆಯಲ್ಲಿ ಹೊಸ ಭರವಸೆ ಮೂಡಿಸಿದೆ.

ಪ್ರತ್ಯೇಕ ಮಾರ್ಗಸೂಚಿ ರಚನೆ 
ಸವಣೂರು, ಆಲಂಕಾರು ಭಾಗದ ಜನತೆಯ ಬೇಡಿಕೆಯನ್ನು ಪೂರೈಸುವ ಜತೆಗೆ ಸುಳ್ಯ-ಬೆಳ್ಳಾರೆ- ಸವಣೂರು-ಆಲಂಕಾರು-ನೆಲ್ಯಾಡಿ ಸಂಪರ್ಕಿಸುವ ನಿಟ್ಟಿನಲ್ಲಿ ಪ್ರತ್ಯೇಕ ಮಾರ್ಗಸೂಚಿ ರಚನೆ ಮಾಡಿ ದಿನಂಪ್ರತಿ ಎರಡು ಕೆಎಸ್‌ಆರ್‌ಟಿಸಿ ಬಸ್‌ ಸಂಚರಿಸುವಂತೆ ಮಾಡಲು ಪ್ರಯತ್ನ ನಡೆದಿದೆ. ಸುಳ್ಯ ಡಿಪೋ ಆರಂಭವಾಗುವುದರಿಂದ ಇನ್ನಷ್ಟು ಕಡೆಗಳ ಬಸ್‌ ಬೇಡಿಕೆ ಸಲ್ಲಿಸಲಾಗುವುದು.
– ಎಸ್‌. ಅಂಗಾರ, ಸುಳ್ಯ ಶಾಸಕ

Advertisement

– ಪ್ರವೀಣ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next