Advertisement

ಕಸದಿಂದ ರಸ ತೆಗೆದ “ಶಾಂತಿಪುರ ಗ್ರಾಮಪಂಚಾಯ್ತಿ’

01:16 AM Jul 03, 2019 | Team Udayavani |

ಬೆಂಗಳೂರು: ಕಸವನ್ನು ರಸ ಮಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಜಿಲ್ಲಾಡಳಿತ ವ್ಯಾಪ್ತಿಯ ಹಲವು ಗ್ರಾಪಂಗಳು ಮುಂದಾಗಿವೆ. ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆ, ಚಿಕ್ಕಜಾಲ ಮತ್ತು ಬೆಟ್ಟಹಲಸೂರು ಗ್ರಾಪಂಗಳು ಈ ನಿಟ್ಟಿನಲ್ಲಿ ಯಶಸ್ವಿ ಹೆಜ್ಜೆಯಿರಿಸಿದ್ದು, ಅದೇ ಹಾದಿಯಲ್ಲಿ ಈಗ ಅನೇಕಲ್‌ ತಾಲೂಕಿನ ಶಾಂತಿಪುರ ಗ್ರಾಪಂ ಅಡಿಯಿಟ್ಟಿದೆ. ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

Advertisement

ಈ ಹಿಂದೆ ಶಾಂತಿಪುರದ ಗ್ರಾಮಸ್ಥರು ಎಲ್ಲೊಂದರಲ್ಲಿ ಕಸ ಸುರಿಯುತ್ತಿದ್ದರು. ಹೀಗಾಗಿ ಕೆಲವು ಪ್ರದೇಶಗಳಲ್ಲಿ ಕಸದ ರಾಶಿಯೇ ತುಂಬುತ್ತಿತ್ತು. ದುಷ್ಪರಿಣಾಮ ಬೀರುತ್ತಿತ್ತು. ಆದರೆ ಈಗ ಶಾಂತಿಪುರ ಗ್ರಾಪಂ ಆಡಳಿತ ಮಂಡಳಿ, ಘನತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದ್ದು, ಕಸದಿಂದ ಮುಕ್ತಿ ದೊರೆತಿದೆ. ಜನರಲ್ಲೂ ಈಗ ಸ್ವತ್ಛತೆ ಬಗ್ಗೆ ಅರಿವು ಮೂಡಿದೆ.

ಘಟಕ ನಿರ್ಮಾಣಕ್ಕೆ 25 ಲಕ್ಷ ರೂ.ವೆಚ್ಚ: ಶಾಂತಿಪುರ ಗ್ರಾಪಂ, ಘನ ತ್ಯಾಜ್ಯ ಘಟಕವನ್ನು 2 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದು, ಸುಮಾರು 25 ಲಕ್ಷ ರೂ.ವೆಚ್ಚ ಮಾಡಿದೆ. ಇದರಲ್ಲಿ ಸ್ವತ್ಛ ಭಾರತ್‌ ಯೋಜನೆಯಡಿ 15 ಲಕ್ಷ ರೂ.ಪಡೆದಿದೆ.

ಉಳಿದ ಹಣವನ್ನು ಶಾಂತಿಪುರ ಗ್ರಾಪಂ ಸ್ವಯಂ ಹಣಕಾಸು ನಿಧಿಯಿಂದ ಬಳಕೆ ಮಾಡಿಕೊಳ್ಳಲಾಗಿದೆ. ಈ ಮೊತ್ತದಲ್ಲಿ ಕಸ ವಿಲೇವಾರಿಗಾಗಿ ಎರಡು ವಾಹನಗಳನ್ನು ಖರೀದಿಸಲಾಗಿದ್ದು, ಹಸಿಕಸ ಮತ್ತು ಒಣಕಸವನ್ನು ವಿಂಗಡನೆ ಮಾಡಲು ಪ್ರತಿ ಮನೆಗೆ ಎರಡೆರಡು ಪ್ಲಾಸ್ಟಿಕ್‌ ಬಕೆಟ್‌ ವಿತರಿಸಲಾಗಿದೆ.

ಶಾಲಾ ಮಕ್ಕಳಿಂದ ಜಾಗೃತಿ: ವೈಜ್ಞಾನಿಕ ಕಸ ವಿಲೇವಾರಿ ಮತ್ತು ಸ್ವತ್ಛತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಂಬಂಧ ಶಾಂತಿಪುರ ಗ್ರಾಪಂ ಶಾಲಾ – ಕಾಲೇಜು ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡಿತ್ತು. ಆ ನಂತರ ಪ್ರತಿ ಮನೆ ಮನೆಗೆ ತೆರಳಿ ಹಸಿ ಮತ್ತು ಒಣಕಸವನ್ನು ವಿಂಗಡಿಸು ಬಗ್ಗೆ ತಿಳುವಳಿಕೆ ನೀಡಲಾಗಿತ್ತು. ಜಾಗೃತಿ ಸ್ಪಂದನೆಗೆ ಸಿಕ್ಕಿದೆ ಎಂದು ಅನೇಕಲ್‌ ತಾಪಂ ಇಒ ಟಿ.ಕೆ.ರಮೇಶ್‌ ಹೇಳಿದ್ದಾರೆ.

Advertisement

ಆದಾಯದ ಚಿಂತನೆ: ಶಾಂತಿಪುರ ಗ್ರಾಪಂ ಕಸದಿಂದ ಆದಾಯಗಳಿಸುವ ಆಲೋಚನೆ ಮಾಡಿದೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರತಿ ದಿನ 2 ಟನ್‌ ಅಷ್ಟು ಕಸ ಉತ್ಪತ್ತಿಯಾಗುತ್ತಿದೆ. ಪ್ರತಿ ತಿಂಗಳು ಸುಮಾರು 60 ಟನ್‌ ಕಸ ದೊರೆಯಲಿದೆ. ಹಸಿ ಮತ್ತು ಒಣ ಕಸವಾಗಿ ವಿಂಗಡಿಸಿ ಹಸಿ ತ್ಯಾಜ್ಯದಿಂದ ಗೊಬ್ಬರವನ್ನು ತಯಾರಿ ಮಾಡಿ ಮಾರಾಟ ಮಾಡುವ ಆಲೋಚನೆ ಇದೆ.

ಜೊತೆಗೆ ಒಣಕಸದಲ್ಲಿ ದೊರೆಯುವ ಪ್ಲಾಸ್ಟಿಕ್‌ ಸೇರಿದಂತೆ ಇನ್ನಿತರ ಬಳಕೆ ಬರುವ ವಸ್ತುಗಳನ್ನು ವಿಂಗಡಿಸಿ ಮಾರಾಟ ಮಾಡುವ ಆಲೋಚನೆ ಗ್ರಾಪಂ ಮುಂದಿದೆ ಎಂದು ಗ್ರಾಪಂ ಪಿಡಿಒ ಡಿ.ಮುರಳಿ ಹೇಳಿದ್ದಾರೆ.

ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿ ಅವರು, ತ್ಯಾಜ್ಯ ಘಟಕ ಸ್ಥಾಪನೆ ಸಂಬಂಧ ಗ್ರಾಪಂಯ ಒಂದು ತಂಡ ಈಗಾಗಲೇ ರಾಜಾನುಕುಂಟೆ, ಚಿಕ್ಕಜಾಲ ಸೇರಿದಂತೆ ಹಲವು ಕಡೆಗಳಲ್ಲಿರುವ ಘನ ತ್ಯಾಜ್ಯ ಘಟಕಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಕಲೆಹಾಲಾಗಿತ್ತು ಎಂದರು.

ಈ ಹಿಂದೆ ಶಾಂತಿಪುರ ಗ್ರಾಪಂ ಕಸದಿಂದ ನಾರುತ್ತಿತ್ತು.ಆದರೆ ಈಗ ವೈಜ್ಞಾನಿಕ ರೀತಿಯಲ್ಲಿ ಕಸ ನಿರ್ವಹಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಆ ಸಮಸ್ಯೆ ಈಗಿಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ಐದು ಗ್ರಾಮಗಳಿದ್ದು, ಉಳಿದ ಗ್ರಾಮಗಳಿಗೂ ಈ ಯೋಜನೆ ವಿಸ್ತರಿಸಲಾಗುವುದು.
-ಚಿಕ್ಕನಾಗಮಂಗಲ ವೆಂಕಟೇಶ್‌, ಶಾಂತಿಪುರ ಗ್ರಾ.ಪಂ.ಅಧ್ಯಕ್ಷ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next