Advertisement

ಎಲ್‌. ವಿ. ಶಾಂತಕುಮಾರಿ ಅನುವಾದಕಿಯ ಸಂಗಡ ಸಂವಾದ

06:00 AM Aug 05, 2018 | |

80ರ ಹರೆಯದ ಎಲ್‌.ವಿ. ಶಾಂತಕುಮಾರಿ ನಮ್ಮ ನಡುವಿನ ಮಹತ್ವದ ಲೇಖಕಿ (ಜ: 1938). ಎಳೆಯ ವಯಸ್ಸಿನಲ್ಲಿಯೇ ಬರೆಯತೊಡಗಿದ್ದರೂ ಅವರ ಕೃತಿಗಳು ಬೆಳಕಿಗೆ ಬರಲಾರಂಭಿಸಿದ್ದು ಈಗೆ ಎರಡು ದಶಕಗಳಿಂದೀಚೆಗೆ. ಕಾವ್ಯ, ಲಲಿತ ಪ್ರಬಂಧಗಳು ವಿಮರ್ಶೆ ಮತ್ತು ಅನುವಾದಗಳು ಇವರು ದುಡಿದಿರುವ ಕ್ಷೇತ್ರಗಳು. ಎಸ್‌. ಎಲ್‌. ಭೈರಪ್ಪನವರ ಮಂದ್ರ, ಭಿತ್ತಿಗಳನ್ನು ಎಸ್‌.ರಾಮಸ್ವಾಮಿಯವರ ಜತೆಗೆ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ದಾಟು ಕಾದಂಬರಿಯನ್ನು ಪ್ರಧಾನ ಗುರುದತ್ತರೊಂದಿಗೆ ಮತ್ತು ಸಾಕ್ಷಿ ಯನ್ನು ಇವರೊಬ್ಬರೇ ಅನುವಾದಿಸಿದ್ದಾರೆ. ಪೆಪೆ ಮತ್ತು ಇತರ ಕಥೆಗಳು ಮತ್ತು ಮಾರ್ಕಸ್‌ ಔರಿಲಿಯಸ್‌ ಇವರ ಇತರ ಅನುವಾದಿತ ಕೃತಿಗಳು. ಕುವೆಂಪು ಭಾಷಾಭಾರತಿಗಾಗಿ ವಿಲ್‌ ಡ್ಯುರಾಂಟ್‌ ಅವರ ದಿ ಸ್ಟೋರಿ ಆಫ್ ಸಿವಿಲಿಸೇಶನ್‌ ಕೃತಿಯ ಹಲವು ಸಂಪುಟಗಳನ್ನೂ, ಪಂಡಿತ ದೀನದಯಾಳ ಉಪಾಧ್ಯಾಯರ ರಾಜಕೀಯ ದಿನಚರಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಗುಜರಾತಿ ಜ್ಞಾನಪೀಠ ವಿಜೇತ ಸಾಹಿತಿ ಪನ್ನಾಲಾಲ ಪಟೇಲ್‌ರ ಮಾನವೀನಿ ಭಾವೈ ಕೃತಿಯನ್ನೂ ಕನ್ನಡಕ್ಕೆ ಅನುವಾದಿಸಿದ್ದಾರೆ.
  
ವಿರಾಟ್‌ ಪ್ರತಿಭೆಯ ಗಾರುಡಿಗ (ಭೈರಪ್ಪನವರ ಕಿರು ಪರಿಚಯ), ಸೂಕ್ತಿ ಸಂಪದ (ಶತಾವಧಾನಿ ಗಣೇಶರೊಂದಿಗೆ ಭೈರಪ್ಪನವರ ಕೃತಿಗಳಲ್ಲಿ ಸೂಕ್ತಿಗಳ ಸಂಪಾದನೆ), ಸಾಕ್ರಟಸ್‌ ಸತ್ಯ ಪಥಿಕ  ಅನುಭಾವಿತ್ರಯರು (ಅಕ್ಕ, ಅಲ್ಲಮ ಮತ್ತು ಬಸವಣ್ಣರ ಕುರಿತು), ಚೈತನ್ಯದ ಚಿಲುಮೆ ನೆನಪು ಗರಿಬಿಚ್ಚಿದಾಗ (ಲಲಿತ ಪ್ರಬಂಧಗಳು), ಕಾವ್ಯ ಮನನ (ಕವಿತೆಗಳ ವಿಮರ್ಶೆ), ಕಗ್ಗದ ಕಾಣಿಕೆ (ಮಂಕುತಿಮ್ಮನ ಕಗ್ಗದ ವಿಮರ್ಶೆ), ಪು.ತಿ .ನ. ಅವರ ಶ್ರೀಹರಿ ಚರಿತೆಯ ವ್ಯಾಖ್ಯಾನ, ಕೌದಿ (ನೀಳYಥೆಗಳು), ಅಪ್ರಚಲಿತ ವಚನಕಾರ್ತಿಯರು – ಮೊದಲಾದವು ಇವರ ಇತರ ಕೃತಿಗಳು. ಶಿವರಾಮ ಕಾರಂತರ ಕಾದಂಬರಿಗಳ ಕುರಿತಾದ ವಿಮರ್ಶೆ ಮತ್ತು ಭೈರಪ್ಪನವರ ನೆಲೆ  ಮತ್ತು ಗೃಹಭಂಗಗಳ ಇಂಗ್ಲಿಶ್‌ ಅನುವಾದ ಇನ್ನು ಬರಲಿರುವ ಕೃತಿಗಳು.
                 
ಬೆಂಗಳೂರು- ಕತ್ರಿಗುಪ್ಪೆಯ ನಿವಾಸಿಯಾಗಿರುವ ಶಾಂತಕುಮಾರಿ ಯವರೊಂದಿಗೆ ಒಂದಿಷ್ಟು ಮಾತುಕತೆಯ ಆಯ್ದ ಭಾಗ ಇಲ್ಲಿದೆ.

Advertisement

ಪ್ರಶ್ನೆ : ಮೇಡಂ, ನಮಸ್ಕಾರ. ನೀವೀಗ ಬಿಡುವಿಲ್ಲದ ಬರಹಗಾರ್ತಿಯಾಗಿದ್ದೀರಿ. 30ಕ್ಕೂ ಹೆಚ್ಚು ಸಾಹಿತ್ಯದ ಓದುಗರಿಗೆ ಉಪಯುಕ್ತವಾಗಿರುವ ಕೃತಿಗಳನ್ನು ಈಗಾಗಲೇ ಪ್ರಕಟಿಸಿದ್ದೀರಿ. ಸುಮ್ಮನೆ ಕುತೂಹಲಕ್ಕಾಗಿ ಕೇಳುತ್ತಿದ್ದೇನೆ. ನೀವು ಬರವಣಿಗೆ ಆರಂಭಿಸಿದ್ದು ಯಾವಾಗ?
ಉತ್ತರ
: ನಿಮಗೆ ತಿಳಿದಿರುವಂತೆ ನಾನು ಶಾಲೆಗೆ ಹೋಗಿದ್ದು ಪ್ರೌಢಶಾಲೆಯ ಮೂರು ವರ್ಷಗಳು ಮಾತ್ರ. ಶಾಲೆಯಲ್ಲಿ ಕೊಡುತ್ತಿದ್ದ ಕನ್ನಡ ಮತ್ತು ಇಂಗ್ಲಿಷ್‌ ಪ್ರಬಂಧಗಳನ್ನು ತಪ್ಪದೆ ಬರೆಯುತ್ತಿದ್ದುದು ನೆನಪಿದೆ. ತಿಪಟೂರಿನ ನಮ್ಮ ಹೆಣ್ಣುಮಕ್ಕಳ ಸರ್ಕಾರಿ ಪ್ರೌಢಶಾಲೆಯಲ್ಲಿ ನಮ್ಮ ಜತೆಗೆ ಓದುತ್ತಿದ್ದ ಕೆ. ಸಾವಿತ್ರಿ ಎಂಬ ವಿದ್ಯಾರ್ಥಿನಿ ಆಗಲೇ ಕಥೆಗಳನ್ನು ಬರೆಯುತ್ತಿದ್ದಳು. ಅವಳು ಬರೆದ ಕಥೆಗಳನ್ನು ಓದಿದ ನಾನು ಕೂಡಾ  ನನಗೆ ತೋಚಿದಂತೆ ಎರಡು ಮೂರು ಕಥೆಗಳನ್ನು ಬರೆದಿದ್ದೆ. ಕವನಗಳನ್ನು ಗೀಚುವ ಹವ್ಯಾಸವೂ ನನಗಿತ್ತು. ನನ್ನ ಬರವಣಿಗೆ ಹೀಗೆ ಆರಂಭದ ಹಂತದಲ್ಲಿ¨ªಾಗಲೇ ನನಗೆ ಮದುವೆಯಾಗಿ ನಾನು ನಾಲ್ಕು ಮಕ್ಕಳ ತಾಯಿಯಾಗಿ ಸಾಂಸಾರಿಕ ಬದುಕಿನಲ್ಲಿ ಮುಳುಗಿ ಬಿಟ್ಟೆ.

ಪ್ರಶ್ನೆ : ನಿಮ್ಮನ್ನು ಸಾಹಿತ್ಯಕವಾಗಿ ಇಷ್ಟೊಂದು ಬೆಳೆಸಿದ ನಿಮ್ಮ ಬಾಲ್ಯ ಜೀವನದ ವಾತಾವರಣ ಹೇಗಿತ್ತು?
ಉತ್ತರ :
ಬಾಲ್ಯದಿಂದಲೂ ಓರಗೆಯ ಮಕ್ಕಳೊಂದಿಗೆ ಆಡುವುದಕ್ಕಿಂತಲೂ ಸಣ್ಣ ಸಣ್ಣ ಕಥೆ ಪುಸ್ತಕಗಳನ್ನು ಪದೇ ಪದೇ ಓದುವುದು, ಅಮ್ಮ ಹಾಡುತ್ತಿದ್ದ ಹಾಡುಗಳನ್ನೂ ನುಡಿಸುತ್ತಿದ್ದ ವೀಣೆಯನ್ನೂ ಕೇಳುವುದು- ನನಗೆ ಬಹಳ ಇಷ್ಟವಾದ ಸಂಗತಿಗಳಾಗಿದ್ದವು. ತುಮಕೂರಿನ ನಮ್ಮ ತಂದೆಯ ಅವಿಭಕ್ತ ಕುಟುಂಬದಲ್ಲಿ, ಹಬ್ಬ ಹರಿದಿನಗಳಂದು ಬಹಳಷ್ಟು ಜನ ಸೇರುತ್ತಿದ್ದರು. ನವರಾತ್ರಿಯಲ್ಲಿ ಹದಿನೈದು ದಿನಗಳು, ಪೂಜೆ, ಸೂರ್ಯನಮಸ್ಕಾರಗಳ ಜತೆಗೆ ಸಾಯಂಕಾಲಗಳಲ್ಲಿ ಕುಮಾರವ್ಯಾಸ ಭಾರತದ ಗಮಕ ವಾಚನ-ಹರಿಕಥೆಗಳು, ತಾಯಿಯವರ ವೀಣಾವಾದನಗಳ ಒಂದು ಉತ್ತಮ ಸಾಂಸ್ಕೃತಿಕ ವಾತಾವರಣವಿದ್ದು ನನ್ನ  ಮನಸ್ಸಿನ ಮೇಲೆ ಅಗಾಧವಾದ ಪರಿಣಾಮ ಬೀರುತ್ತಿದ್ದವು. ಅದರಿಂದಲೇ ನನ್ನಲ್ಲಿ ಸಾಹಿತ್ಯಾಸಕ್ತಿ ಮೂಡಿರಲೂ ಸಾಕು. ಆ ಕಾಲದಲ್ಲಿ ಮನೆಮನೆಗೆ ಬಂದು ಹರಿದಾಸರು ಹಾಡುವ ಪರಂಪರೆಯಿತ್ತು. ತಾಳ-ತಂಬೂರಿಗಳ ಸಮೇತ ಹಾಡುಗಳನ್ನು ದಾಸರ ಪದಗಳನ್ನು ಹಾಡುತ್ತಿದ್ದ ಲಕ್ಷ್ಮಣದಾಸರು ನನ್ನ ನೆನಪಿನಲ್ಲಿ  ಇನ್ನೂ ಉಳಿದಿರಲು ಕಾರಣ ಅವರು ಹಾಡುತ್ತಿದ್ದ ಪುರಂದರದಾಸರ ಹಾಡುಗಳು, ಹರಿದಾಸರು ಚಿಟಿಕಿ ಹಾಕಿಕೊಂಡು ಹಾಡುತ್ತಿದ್ದ ಹಾಡುಗಳೊಂದಿಗೆ ಹೇಳುತ್ತಿದ್ದ ಉಪಕಥೆಗಳು ನನಗೆ ಬಹಳ ಇಷ್ಟವಾಗುತ್ತಿದ್ದವು. ನನ್ನ ಬಂಧುಗಳೊಬ್ಬರು ಬಣ್ಣ ಬಣ್ಣದ ಕಟ್ಟುಗಳಲ್ಲಿದ್ದ  15-20 ಸಣ್ಣ ಸಣ್ಣ ಪುಸ್ತಕಗಳನ್ನು  ನನಗೆ ತಂದು ಕೊಟ್ಟಿದ್ದು ಕೂಡ ನನ್ನ ಸಾಹಿತ್ಯಾಸಕ್ತಿಗೆ ನೀರೆರೆಯಿತು ಅನ್ನಿಸುತ್ತದೆ. ಬಾಲ್ಯದಲ್ಲಿ ನನ್ನನ್ನು ಮರುಳು ಮಾಡುತ್ತಿದ್ದ ದೇವುಡು ಅವರ ದೇಶಾಂತರದ ಕಥೆಗಳು ನನ್ನ ನೆನಪಿನಲ್ಲಿನ್ನೂ ಹಸಿರಾಗಿದೆ. ಪ್ರೌಢಶಾಲೆಯಲ್ಲಿ ಹಲವಾರು ಪುಸ್ತಕಗಳ ಜತೆಗೆ ಕಾರಂತರ ಕಾದಂಬರಿಗಳೂ ನನ್ನನ್ನು ಸೆಳೆದವು.

ಪ್ರಶ್ನೆ : ನಿಮ್ಮ ಉದ್ಯೋಗದ ಕುರಿತು ಹೇಳಿ.
ಉತ್ತರ :
ನಾನು ಇಂಗ್ಲಿಷ್‌ ಉಪನ್ಯಾಸಕಿಯಾದದ್ದು ಒಂದು ಯೋಗಾಯೋಗ. ಎಸ್‌ಎಸ್‌ಎಲ್‌ಸಿ ಪಾಸಾದ ನಂತರ ಸರ್ಕಾರಿ ವಿದ್ಯಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಿ.ಎನ್‌. ಗಣೇಶಮೂರ್ತಿಯವರೊಡನೆ ವಿವಾಹವಾಯಿತು. ಖಾಸಗಿಯಾಗಿ ಓದಿ ಎಂ.ಎ. ಮಾಡಿದ ನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ  ಉಪನ್ಯಾಸಕಿಯಾಗಿ ಸೇರಿದೆ. ವಿದ್ಯಾರ್ಥಿಗಳಿಗೆ ಕಲಿಸುವಾಗಲೇ ಶಿಕ್ಷಕರು ಪಠ್ಯವನ್ನು ಸರಿಯಾಗಿ ಸಂಪೂರ್ಣವಾಗಿ ತಿಳಿದುಕೊಳ್ಳುವುದು ಸಾಧ್ಯ ಎಂಬ ಸತ್ಯವನ್ನು ನಾನು ಮನಗಂಡೆ. ಸಹೋದ್ಯೋಗಿಗಳೊಡನೆ ನಡೆಸಿದ ಚರ್ಚೆಗಳು ಮತ್ತು ಕಾಲೇಜಿನ ಗ್ರಂಥಾಲಯದಲ್ಲಿದ್ದ ಪುಸ್ತಕಗಳು ನನ್ನ ಸಾಹಿತ್ಯಾಸಕ್ತಿ ಬೆಳೆಸುವಲ್ಲಿ ತಂಬ ಸಹಕಾರಿಯಾದವು. ವಿದ್ಯಾರ್ಥಿಗಳು ಕೆಲವೊಮ್ಮೆ ಮುಗ್ಧವಾಗಿ ಕೇಳುತ್ತಿದ್ದ ಪ್ರಶ್ನೆಗಳು ನಾನು ಹೊಸ ದಿಕ್ಕಿನಲ್ಲಿ ಆಲೋಚಿಸುವಂತೆ ಮಾಡುತ್ತಿದ್ದವು. ತುಮಕೂರಿನ ಕಲಾ ಕಾಲೇಜಿಗೆ ಆಗ ಸುತ್ತಮುತ್ತಲ ಗ್ರಾಮಗಳಿಂದ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಸ್ವಲ್ಪಮಟ್ಟಿಗೆ ಪಾಠಗಳನ್ನು ಕನ್ನಡದಲ್ಲಿ ವಿವರಿಸುವ ಅಗತ್ಯ ಬೀಳುತ್ತಿತ್ತು. ಇಂಗ್ಲಿಶ್‌ ಪಾಠವನ್ನು ಕನ್ನಡದಲ್ಲಿ ವಿವರಿಸುವುದು ಕಷ್ಟ ಎಂದು ನನಗೆ ಎಂದೂ ಅನ್ನಿಸಲಿಲ್ಲ. ವಿಷಯ ಅರ್ಥವಾದರೆ ವಿದ್ಯಾರ್ಥಿಗಳು ಸುಲಭದಲ್ಲಿ ಕಲಿಯುತ್ತಾರೆ ಎಂದು ನನ್ನ ಅನ್ನಿಸಿಕೆ. ನಾವು ಎಷ್ಟೇ ಓದಿಕೊಂಡರೂ ಅದನ್ನು ಬೇರೆಯವರಿಗೆ ಅರ್ಥವಾಗುವಂತೆ ವಿವರಿಸಲು ಸಾಧ್ಯವಾದಾಗ ಮಾತ್ರ ಅದನ್ನು ನಾವು ಪೂರ್ತಿಯಾಗಿ ತಿಳಿದುಕೊಂಡಿದ್ದೇವೆ ಎನ್ನಬಹುದು.

ಪ್ರಶ್ನೆ : ನೀವು ಮೊದಲಿಗೆ ಪ್ರಬಂಧಗಳನ್ನೂ ವಿಮರ್ಶೆಗಳನ್ನೂ ಪ್ರಕಟಿಸಿದಿರಿ. ಅನುವಾದದಲ್ಲಿ ಆಸಕ್ತಿ ಹೇಗೆ ಮೂಡಿತು?
ಉತ್ತರ :
ಹೌದು, ಮೊದಲಿಗೆ ಪುಸ್ತಕರೂಪದಲ್ಲಿ ಪ್ರಕಟವಾಗಿದ್ದು ನನ್ನ ಪ್ರಬಂಧಗಳು ಮತ್ತು ವಿಮರ್ಶೆಗಳು ನಿಜ. ಆದರೆ, ಅನುವಾದವನ್ನು ಮಾಡತೊಡಗಿದ್ದು ಆನಂತರ ಅಲ್ಲ. ನಾನು ಮೊತ್ತಮೊದಲು ಅನುವಾದಿಸಿದ್ದು ಒಂದು ಹಿಂದಿ ಕವಿತೆಯನ್ನು. ದಕ್ಷಿಣಭಾರತ ಹಿಂದಿ ಪ್ರಚಾರಸಭಾದವರು ನಡೆಸುತ್ತಿದ್ದ ವಿಶಾರದ ಪರೀಕ್ಷೆಯ ತರಗತಿಯಲ್ಲಿ  ನಾನು ಕನ್ನಡಕ್ಕೆ ಅನುವಾದಿಸಿದ್ದ  ಕವನವನ್ನು ಗೆಳತಿಯರು ನಮ್ಮ ಮೇಡಂ ಅವರಿಗೆ ತೋರಿಸಿದಾಗ ಅವರು ಅದನ್ನು ಶ್ಲಾ ಸಿ ಇನ್ನಷ್ಟು ಅನುವಾದ ಮಾಡು ಎಂದು ಹುರಿದುಂಬಿಸಿದ್ದರು. ನಂತರ ಎಂ.ಎ. ಪದವಿಗೆ ಓದುತ್ತಿದ್ದಾಗ ಹಲವಾರು ಆಂಗ್ಲ ಕವಿಗಳ ಕವಿತೆಗಳನ್ನು ಅನುವಾದಿಸುವ ಹಂಬಲದಿಂದ ಎಮಿಲಿ ಡಿಕಿನ್‌ ಸನ್‌, ರಾಬರ್ಟ್‌ ಫ್ರಾಸ್ಟ್‌, ವ್ಯಾಲೇಸ್‌ ಸ್ಟೀವನ್ಸ್‌, ವಿಲಿಯಮ್‌ ಬ್ಲೇಕ್‌-ಹೀಗೆ ಹಲವಾರು ಕವಿಗಳ ನನಗಿಷ್ಟವಾದ ಕವನಗಳನ್ನು ಅನುವಾದಿಸಿದೆ. ಕೆಲವು ಕವನಗಳನ್ನು ಸಿದ್ಧಲಿಂಗ ಪಟ್ಟಣಶೆಟ್ಟಿಯವರು ತಮ್ಮ ಸಂಕಲನ ಪತ್ರಿಕೆಯಲ್ಲಿ ಪ್ರಕಟಿಸಿದರು. ಹಾಗೆಯೇ ಆಸ್ಟ್ರೇಲಿಯಾದ ಕೆಲವು ಕವಿಗಳ ಮತ್ತು ಪಾಬ್ಲೋ ನೆರೂಡನ ಕವನಗಳನ್ನು ಅನುವಾದಿಸಿಟ್ಟೆ. ಕನ್ನಡದಿಂದ ಇಂಗ್ಲಿಷಿಗೂ ಜಿ.ಎಸ್‌. ಶಿವರುದ್ರಪ್ಪನವರ  ಸುಮಾರು 40 ಕವನಗಳನ್ನು ಭಾಷಾಂತರಿಸಿಟ್ಟಿದ್ದೇನೆ. ಪ್ರಕಟಿಸಲು ಅವಕಾಶವಾಗಲಿಲ್ಲ. ಕ್ರಮೇಣ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಪ್ರಧಾನ್‌ ಗುರುದತ್‌ ಅವರು ಇತಿಹಾಸಜ್ಞ ವಿಲ್‌ ಡ್ಯುರಾಂಟ್‌ ಅವರ ದಿ ಸ್ಟೋರಿ ಆಫ್ ಸಿವಿಲೈಸೇಶನ್‌ ಕೃತಿ ಸಂಪುಟದ ಅನೇಕ ಅಧ್ಯಾಯಗಳನ್ನೂ, ದೀನದಯಾಳ ಉಪಾಧ್ಯಾಯರ ರಾಜಕೀಯ ದಿನಚರಿ ಮೊದಲಾದ ಕೃತಿಗಳ ಅನುವಾದ ಕಾರ್ಯವನ್ನು ಅವರು ನನಗೆ ವಹಿಸಿದರು. ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಗುಜರಾತಿ ಜ್ಞಾನಪೀಠ ವಿಜೇತ ಸಾಹಿತಿ ಪನ್ನಾಲಾಲ್‌ ಪಟೇಲರ ಮಾನವೀನಿ ಭಾವೈ ಎಂಬ ಕಾದಂಬರಿಯ ಅನುವಾದವನ್ನು ನನಗೆ ವಹಿಸಿಕೊಟ್ಟರು. 422 ಪುಟದ ಬೃಹತ್‌ ಕಾದಂಬರಿ ಅದು. ನನಗೆ ಅದರ ಅನುವಾದದ ಅನುಭವ ತುಂಬ ಖುಷಿ ಕೊಟ್ಟಿತು. ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿದ ವಿಶ್ವಕೋಶದ ಪ್ರಥಮ ಸಂಪುಟಕ್ಕೆ 50 ಪುಟಗಳಷ್ಟು ಅನುವಾದ ಮಾಡಿಕೊಟ್ಟದ್ದೂ ಒಂದು ಅಪೂರ್ವ ಅನುಭವವನ್ನಿತ್ತ ಕೆಲಸ.

Advertisement

ಪ್ರಶ್ನೆ : ನಿಮ್ಮ ದೃಷ್ಟಿಯಲ್ಲಿ ಸಾಹಿತ್ಯ ಕೃತಿಗಳ ಭಾಷಾಂತರದ ಅಗತ್ಯವೇನು?
ಉತ್ತರ
: ಜಗತ್ತಿನ ಎಲ್ಲಾ ಭಾಷೆಗಳಲ್ಲಿರುವ ಸಾಹಿತ್ಯಗಳ ನಡುವೆ ಪರಸ್ಪರ ಆದಾನ-ಪ್ರದಾನ ನಡೆಯಬೇಕು, ಮನುಷ್ಯರೆಲ್ಲರೂ ಪರಸ್ಪರ ಅರ್ಥಮಾಡಿಕೊಳ್ಳುವ ಮೂಲಕ ಮಾನವ ಸಂಬಂಧಗಳು ಗಟ್ಟಿಗೊಳ್ಳಬೇಕು ಎನ್ನುವ ದೃಷ್ಟಿಯಿಂದ ಅನುವಾದಗಳು ನಡೆಯಬೇಕು ಎಂಬುದು ನನ್ನ ಆಶಯ. ಅದು ಒಂದು ಸಂಸ್ಕೃತಿಯನ್ನೇ ಇನ್ನೊಂದಕ್ಕೆ ಪರಿಚಯಿಸಿದಂತೆ. ಕನ್ನಡದ ಶರಣ ಸಾಹಿತ್ಯ ಸಾಮಾಜಿಕ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದ ಬಹಳ ಮಹತ್ವದ್ದು. ಆ ಕಾರಣದಿಂದ ಹಲವರ ವಚನಗಳನ್ನೂ ನಾನು ಇಂಗ್ಲಿಷಿಗೆ ಅನುವಾದಿಸಿದ್ದೇನೆ.

– ಪಾರ್ವತಿ ಜಿ. ಐತಾಳ್‌

Advertisement

Udayavani is now on Telegram. Click here to join our channel and stay updated with the latest news.

Next