Advertisement

ಶಂಕರಪುರ ಮಲ್ಲಿಗೆ ದರ ಪರಿಷ್ಕರಣೆ ಕಟ್ಟೆಯಲ್ಲಿ ಅಟ್ಟೆಗೆ ಗರಿಷ್ಠ 2,100 ರೂ.

01:35 AM Dec 22, 2021 | Team Udayavani |

ಶಿರ್ವ: ಶಂಕರಪುರ ಮಲ್ಲಿಗೆ ಗರಿಷ್ಠ ದರ (ಕಟ್ಟೆಯಲ್ಲಿ)ವನ್ನು 2,100 ರೂ.ಗೆ ಏರಿಸಲಾಗಿದ್ದು, ಮಲ್ಲಿಗೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

Advertisement

ಈವರೆಗೆ ಬೆಳೆಗಾರರಿಗೆ ಒಂದು ಅಟ್ಟೆ ಮಲ್ಲಿಗೆಗೆ ಗರಿಷ್ಠ 1,200 ರೂ. ಸಿಗುತ್ತಿತ್ತು. ಆದರೆ ಕನಿಷ್ಠ ದರವೆಂಬುದು ಇಲ್ಲ. ಬೇಡಿಕೆಯಿಲ್ಲದ ಸಂದರ್ಭಗಳಲ್ಲಿ ಅಟ್ಟೆಗೆ 90 ರೂ.ಗೆ ಕುಸಿದದ್ದೂ ಇದೆ. ಬೆಳೆಗಾರರಿಗೆ ಹೂ ಕಟ್ಟುವ ಖರ್ಚೇ ಹೆಚ್ಚಾಗಿ ಮಲ್ಲಿಗೆಯನ್ನು ಕೊಯ್ದು ಅಲ್ಲೇ ಎಸೆಯುವ ಸಂದರ್ಭವೂ ಎದುರಾಗುತ್ತದೆ. ಬೇಡಿಕೆ ಎಷ್ಟೇ ಹೆಚ್ಚಾದರೂ ಬೆಳೆಗಾರರಿಗೆ ಕಟ್ಟೆಯಲ್ಲಿ ಸಿಕ್ಕುವ ಗರಿಷ್ಠ ದರವೇ ಅಂತಿಮ. ಅತೀಹೆಚ್ಚು ಬೇಡಿಕೆಯಿರುವ ಸಂದರ್ಭ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ಅಟ್ಟೆಗೆ 2,000ದಿಂದ 2,500 ರೂ. ವರೆಗೂ ಮಾರುತ್ತಾರೆ.

ಮಲ್ಲಿಗೆ ಕೃಷಿಯ ಖರ್ಚು ವೆಚ್ಚ ವಿಪರೀತ ಏರಿಕೆಯಾಗಿದ್ದು, ನಿರ್ವಹಣೆ ಮತ್ತು ಸಾಗಾಟದ ಖರ್ಚು ಕೂಡ ಅಧಿಕವಿರುವುದರಿಂದ ಡಿ. 16ರಂದು ನಡೆದ ಸದಸ್ಯರ ಸಭೆಯಲ್ಲಿ ಗರಿಷ್ಠ ದರ ಪರಿಷ್ಕರಣೆ ನಡೆದಿದೆ ಎಂದು ದರ ನಿಗದಿ ಕೇಂದ್ರದ ಮೂಲಗಳು ತಿಳಿಸಿವೆ. ಕೆಲವು ವರ್ಷಗಳ ಹಿಂದೆ ಅಟ್ಟೆಗೆ 240 ರೂ. ಇದ್ದ ಗರಿಷ್ಠ ದರ 420 ರೂ.ಗೆ ಏರಿಕೆಯಾಗಿತ್ತು. ಬಳಿಕ 820ಕ್ಕೆ ಏರಿದ್ದು, 2018ರ ನವೆಂಬರ್‌ನಲ್ಲಿ 1,250 ರೂ.ಗೆ ಪರಿಷ್ಕರಿಸಲಾಗಿತ್ತು.

ಇದನ್ನೂ ಓದಿ:“ಭಾರತ ವಿರೋಧಿ ಕೃತ್ಯ’: 20 ಯೂಟ್ಯೂಬ್‌ ಚಾನೆಲ್‌, 2 ವೆಬ್‌ಸೈಟ್‌ ಬ್ಲಾಕ್‌

ಡಿ. 23ರಿಂದ ಅನ್ವಯ
ಪರಿಷ್ಕೃತ ದರ ಡಿ. 23ರಿಂದ ಅನ್ವಯವಾಗಲಿದೆ ಎಂದು ಮಲ್ಲಿಗೆ ದರ ನಿಗದಿ ಕೇಂದ್ರದ ಪ್ರಕಟನೆ ತಿಳಿಸಿದೆ. ಗರಿಷ್ಠ ದರ ಏರಿಕೆ ಕ್ರಮವನ್ನು ಉಡುಪಿ ಜಿಲ್ಲಾ ಕೃಷಿಕ ಸಂಘವು ಸ್ವಾಗತಿಸಿದೆ.

Advertisement

ಬೆಳೆಗಾರರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದರ ಪರಿಷ್ಕರಣೆ ಮಾಡಲಾಗಿದ್ದು, ಮಲ್ಲಿಗೆ ಹೂವಿನ ತೀರಾ ಅಭಾವದ ಸಮಯದಲ್ಲಿ ಅಟ್ಟೆಗೆ ಗರಿಷ್ಠ 2,100 ರೂ. ನಿಗದಿ ಪಡಿಸಲಾಗಿದೆ.
-ವಿನ್ಸೆಂಟ್‌ ರಾಡ್ರಿಗಸ್‌,
ಮಲ್ಲಿಗೆ ವ್ಯಾಪಾರಿ, ಶಂಕರಪುರ

ಗರಿಷ್ಠ ಬೆಲೆ ಹೆಚ್ಚಳದಿಂದ ಬೆಳೆಗಾರರಿಗೆ ಇನ್ನೂ ಹೆಚ್ಚು ಬೆಳೆಸಲು ಉತ್ತೇಜನ ನೀಡಿದಂತಾಗಿದೆ. ಬೆಳೆಗಾರರಿಗೆ ನ್ಯಾಯ ಸಿಗಬೇಕು ಎಂದಾದರೆ ಕನಿಷ್ಠ ಬೆಲೆ ನಿಗದಿಯೂ ಅಗತ್ಯ.
– ವಿನ್ನಿ ಮಚಾದೋ,
ಮಲ್ಲಿಗೆ ಬೆಳೆಗಾರ್ತಿ, ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next