Advertisement

Cricket: ಶಮರ್‌, ಹಂಟರ್‌ ತಿಂಗಳ ಕ್ರಿಕೆಟಿಗರು

11:08 PM Feb 13, 2024 | Team Udayavani |

ದುಬಾೖ: ವೆಸ್ಟ್‌ ಇಂಡೀಸ್‌ನ ನೂತನ ವೇಗಿ ಶಮರ್‌ ಜೋಸೆಫ್ ಮತ್ತು ಐರ್ಲೆಂಡ್‌ ವನಿತಾ ತಂಡದ ಬಿಗ್‌ ಹಿಟ್ಟಿಂಗ್‌ ಬ್ಯಾಟರ್‌ ಆ್ಯಮಿ ಹಂಟರ್‌ “ಐಸಿಸಿ ತಿಂಗಳ ಆಟಗಾರ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರಿಬ್ಬರೂ ಜನವರಿ ತಿಂಗಳ ಗೌರವವನ್ನು ತಮ್ಮದಾಗಿಸಿಕೊಂಡರು.

Advertisement

“ಐಸಿಸಿ ತಿಂಗಳ ಆಟಗಾರ”ರ ಯಾದಿಯನ್ನು ಅಲಂಕರಿಸಿದ ಮೊದಲ ವೆಸ್ಟ್‌ ಇಂಡೀಸ್‌ ಕ್ರಿಕೆಟಿಗನೆಂಬುದು ಶಮರ್‌ ಜೋಸೆಫ್ ಹಿರಿಮೆ. ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಜೋಸೆಫ್ ಅಮೋಘ ಬೌಲಿಂಗ್‌ ಪ್ರದರ್ಶನ ನೀಡಿದ್ದರು. ಅಡಿಲೇಡ್‌ನ‌ ಪದಾರ್ಪಣ ಟೆಸ್ಟ್‌ನಲ್ಲೇ 5 ವಿಕೆಟ್‌ ಉರುಳಿಸಿದ ಬಳಿಕ ಬ್ರಿಸ್ಬೇನ್‌ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ ಕಿತ್ತು ವೆಸ್ಟ್‌ ಇಂಡೀಸ್‌ಗೆ ಐತಿಹಾಸಿಕ ಗೆಲುವು ತಂದಿತ್ತಿದ್ದರು. ಅಂತಾರಾಷ್ಟ್ರೀಯ ಪಂದ್ಯದ ಮೊದಲ ಎಸೆತದಲ್ಲೇ ಸ್ಟೀವ್‌ ಸ್ಮಿತ್‌ ಅವರ ವಿಕೆಟ್‌ ಹಾರಿಸಿದ್ದು ಜೋಸೆಫ್ ಸಾಧನೆಯಾಗಿತ್ತು.

“ವಿಶ್ವ ಮಟ್ಟದ ಪ್ರಶಸ್ತಿಯೊಂದಕ್ಕೆ ಪಾತ್ರನಾಗಿರುವುದಕ್ಕೆ ಬಹಳ ಖುಷಿ ಆಗುತ್ತಿದೆ. ಆಸ್ಟ್ರೇಲಿಯದಲ್ಲಿ ಆಡಿದ ಪ್ರತಿಯೊಂದು ಕ್ಷಣವನ್ನೂ ನಾನು ಆನಂದಿಸಿದೆ. ಕಠಿನ ಸಾಧನೆಯನ್ನು ಮುಂದುವರಿಸಿ ಮ್ಯಾಚ್‌ ವಿನ್ನರ್‌ ಆಗಬೇಕೆಂಬುದೇ ನನ್ನ ಗುರಿ” ಎಂಬುದಾಗಿ ಶಮರ್‌ ಜೋಸೆಫ್ ಪ್ರತಿಕ್ರಿಯಿಸಿದ್ದಾರೆ.

ಯಂಗ್‌ ಟ್ಯಾಲೆಂಟ್‌
ಐರ್ಲೆಂಡ್‌ ವನಿತಾ ತಂಡದ ವಿಕೆಟ್‌ ಕೀಪರ್‌-ಬ್ಯಾಟರ್‌, 18 ವರ್ಷದ ಆ್ಯಮಿ ಹಂಟರ್‌ ಕೂಡ ಜಾಗತಿಕ ಕ್ರಿಕೆಟಿನ “ಯಂಗ್‌ ಟ್ಯಾಲೆಂಟ್‌” ಆಗಿದ್ದಾರೆ. ಜನವರಿಯಲ್ಲಿ ಜಿಂಬಾಬ್ವೆ ವಿರುದ್ಧ ಆಡಲಾದ ಹರಾರೆ ಟಿ20 ಪಂದ್ಯದಲ್ಲಿ 66 ಎಸೆತಗಳಿಂದ ಅಜೇಯ 101 ರನ್‌ ಬಾರಿಸಿದ್ದು ಇವರ ಅಮೋಘ ಸಾಧನೆ. ಉಳಿದೆರಡು ಪಂದ್ಯಗಳಲ್ಲಿ 77 ಮತ್ತು 42 ರನ್‌ ಹೊಡೆದು ಸರಣಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಜನವರಿಯಲ್ಲಿ ಆಡಿದ ಟಿ20 ಪಂದ್ಯಗಳಲ್ಲಿ 144.73ರ ಸ್ಟ್ರೈಕ್‌ರೇಟ್‌ನಲ್ಲಿ 220 ರನ್‌ ಬಾರಿಸಿದ ಸಾಧನೆ ಆ್ಯಮಿ ಹಂಟರ್‌ ಅವರದ್ದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next