Advertisement

ಸೂಡದ ಶಮನ್‌ ಶೆಟ್ಟಿ ಸೇನೆಯಲ್ಲಿ ಕ್ಯಾಪ್ಟನ್‌!

09:44 AM Sep 25, 2018 | |

ಶಿರ್ವ: ಯುಪಿಎಸ್‌ಸಿ ಪರೀಕ್ಷೆಯಲ್ಲಿ 33ನೇ ರ್‍ಯಾಂಕ್‌ ಪಡೆದು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್‌ ಆಗಿದ್ದ ಶಿರ್ವ ಸಮೀಪದ ಸೂಡದ ಯುವಕ ಶಮನ್‌ ಶೆಟ್ಟಿ ಕ್ಯಾಪ್ಟನ್‌ ಆಗಿ ಪದೋನ್ನತಿ ಪಡೆದಿದ್ದಾರೆ.
ಮುಂಬಯಿ ಉದ್ಯಮಿ, ಉಡುಪಿ ಬೈಲೂರು ಪಡುಮನೆ ದಿ| ಸುಧಾಕರ ಶೆಟ್ಟಿ ಮತ್ತು ಸೂಡ ಕಲ್ಲಬೈಲು ಶೋಭಾ ಶೆಟ್ಟಿ ದಂಪತಿಯ ಪುತ್ರ ರಾಗಿರುವ ಶಮನ್‌ ಶೆಟ್ಟಿ ಚೆನ್ನೈಯ ಆಫೀಸರ್ ಟ್ರೈನಿಂಗ್‌ ಅಕಾಡೆಮಿಯಲ್ಲಿ ತರಬೇತಿ ಮುಗಿಸಿ 2017ರಲ್ಲಿ ಭಾರತೀಯ ಸೇನೆಯಲ್ಲಿ ಆಫೀಸರ್‌ ಲೆಫ್ಟಿನೆಂಟ್‌ ಆಗಿ ನೇಮಕಗೊಂಡಿದ್ದರು. ಭೂ ಸೇನೆಯ 9ನೇ ರಜಪುತಾನ ರೈಫಲ್ಸ್‌ ಇನ್‌ಫೆಂಟ್ರಿ ಬೆಟಾಲಿಯನ್‌ನ ಲೆಫ್ಟಿನೆಂಟ್‌ ಆಗಿ ನಿಯುಕ್ತಿಗೊಂಡು ಅಸ್ಸಾಂನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈಗ ಕ್ಯಾಪ್ಟನ್‌ ಆಗಿ ಅಸ್ಸಾಂ ರೆಜಿಮೆಂಟ್‌ನ ಸೇನಾ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

ಶಮನ್‌ ಶೆಟ್ಟಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸೂಡದಲ್ಲಿ ಜನಿಸಿ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ಶಿಕ್ಷಣವನ್ನು ಮುಂಬಯಿಯಲ್ಲಿ ಪಡೆದಿದ್ದರು. ದಾವಣಗೆರೆಯ ಬಾಪೂಜಿ ಇನ್‌ಸ್ಟಿ ಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾ ಲಜಿ ಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಎಂಜಿನಿಯರಿಂಗ್‌ ಪದವಿ ಪೂರ್ಣಗೊಳಿಸಿದ್ದರು. 

ಜನರಲ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್‌ ಗೌರವ
ಕ್ಯಾ| ಶಮನ್‌ ಶೆಟ್ಟಿ ಅವರು ಬೆಟಾಲಿಯನ್‌ ಇಂಟಲಿಜೆನ್ಸ್‌ ತಂಡದ ಸದಸ್ಯರಾಗಿದ್ದು, ಕಾರ್ಯಾಚರಣೆಯಲ್ಲಿ ಉಗ್ರರನ್ನು ಸಜೀವ ಸೆರೆ ಹಿಡಿದಿದ್ದರು. ಆಪರೇಷನ್‌ ರಿನೋ ಕಾರ್ಯಾಚರಣೆಯಲ್ಲಿ ನಡೆಸಿದ ಅಪ್ರತಿಮ ಸೇವೆಗಾಗಿ ಜನರಲ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್‌ ಇನ್‌ ಈಸ್ಟರ್ನ್ ಕಮಾಂಡ್‌ ಕಮೆಂಡೇಶನ್‌ ಕಾರ್ಡ್‌ ಫಾರ್‌ ಗ್ಯಾಲಂಟ್ರಿ ಗೌರವವನ್ನು ಈಸ್ಟರ್ನ್ ಆರ್ಮಿ ಕಮಾಂಡರ್‌ ಮತ್ತು ರೆಜಿಮೆಂಟ್‌ ಕರ್ನಲ್‌  ಲೆ| ಜ| ಅಭಯ್‌ಕೃಷ್ಣ ಅವರು ಸೇನಾ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಅವರ ಉಪಸ್ಥಿತಿಯಲ್ಲಿ ಸೆ. 22ರಂದು ಪ್ರದಾನ ಮಾಡಿದ್ದಾರೆ.

ತಾಯಿ, ಗುರು ಹಿರಿಯರ ಆಶೀರ್ವಾದದೊಂದಿಗೆ ದಕ್ಷ ಹಾಗೂ ಪ್ರಾಮಾಣಿಕ ಸೇವೆಯಿಂದ ಕ್ಯಾಪ್ಟನ್‌ ಆಗಿ ಪದೋನ್ನತಿ ಹೊಂದಿದ್ದೇನೆ. ದೇಶ ರಕ್ಷಕನಾಗಿ ಸೇನೆಯಲ್ಲಿದ್ದು ಕೊಂಡು ದೇಶಸೇವೆ ಮಾಡುವ ಸುಯೋಗ ಒದಗಿಬಂದಿದೆ.
-ಕ್ಯಾ| ಶಮನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next