Advertisement

ಶಕ್ತಿನಗರ: ಅನಧಿಕೃತವಾಗಿ ಮರಗಳಿಗೆ ಕೊಡಲಿಯೇಟು

11:59 AM Aug 08, 2018 | Team Udayavani |

ಮಹಾನಗರ : ಇಲ್ಲಿಯ ಶಕ್ತಿನಗರ ಸಮೀಪದ ಪದವು ಗ್ರಾಮದಲ್ಲಿ ಸರಕಾರದ ಆಶ್ರಯ ಯೋಜನೆಯಡಿ ನಿರಾಶ್ರಿತರಿಗೆ ಮನೆ ನಿರ್ಮಾಣ ಸಂಬಂಧ ಇಲ್ಲಿನ ಡೀಮ್ಡ್ ಫಾರೆಸ್ಟ್‌ನಲ್ಲಿ ಅನಧಿಕೃತವಾಗಿ ಹತ್ತಾರು ಮರಗಳನ್ನು ಕಡಿದುರುಳಿಸಲಾಗಿದೆ ಎಂದು ರಾಷ್ಟ್ರೀಯ ಪರಿಸರ ಒಕ್ಕೂಟ (ಎನ್‌ ಇಸಿಎಫ್‌)ದ ಕಾರ್ಯದರ್ಶಿ ಶಶಿಧರ್‌ ಶೆಟ್ಟಿ ಆರೋಪಿಸಿದ್ದಾರೆ.

Advertisement

ನಗರದ ಪದವು ಗ್ರಾಮದ ಅರಣ್ಯ ಪ್ರದೇಶದಲ್ಲಿ ಮರ ಕಡಿದು ಹಾಕಿರುವ ಜಾಗಕ್ಕೆ ಮಂಗಳವಾರ ಮಾಧ್ಯಮದವರನ್ನು ಕರೆದುಕೊಂಡು ಹೋಗಿದ್ದ ಎನ್‌ಇಸಿಎಫ್‌ ತಂಡವು ಅಲ್ಲಿಯೇ ಪತ್ರಿಕಾಗೋಷ್ಠಿಯನ್ನೂ ನಡೆಸಿದೆ. ಈ ವೇಳೆ ಮಾತನಾಡಿದ ಅವರು, ಇಲ್ಲಿನ ಡೀಮ್ಡ್ ಫಾರೆಸ್ಟ್‌ ವ್ಯಾಪ್ತಿಯಲ್ಲಿ ಸುಮಾರು 9 ಎಕ್ರೆ ಜಾಗವಿದ್ದು, ಇದರ ಎರಡೂವರೆ ಎಕ್ರೆ ಜಾಗದಲ್ಲಿರುವ ನೂರಾರು ವರ್ಷ ಬಾಳ್ವಿಕೆ ಬರುವ ಮರಗಳನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಕಡಿದು ಹಾಕಲಾಗಿದೆ. ಗುತ್ತಿಗೆದಾರರು ಮೂರು ತಿಂಗಳ ಹಿಂದೆ ಈ ಮರಗಳನ್ನು ಕಡಿದು ಹಾಕಿರುವುದು ಈಗ ಬೆಳಕಿಗೆ ಬಂದಿದೆ ಎಂದು ಅವರು ಆರೋಪಿಸಿದ್ದಾರೆ.

ಮರ ಕಡಿದು ಹಾಕಿರುವ ವಿಚಾರವು ಅರಣ್ಯ ಇಲಾಖೆಗೆ ಮೂರು ತಿಂಗಳ ಹಿಂದೆಯೇ ಗೊತ್ತಿತ್ತು. ಇದೀಗ ಅರಣ್ಯ ಇಲಾಖೆಯು ಗುತ್ತಿಗೆದಾರನನ್ನು ಬಂಧಿಸಿ ಎಫ್‌ಐಆರ್‌ ದಾಖಲಿಸಿದ್ದರೂ ಪ್ರಕರಣ ತನಿಖಾ ಹಂತದಲ್ಲಿದೆ ಎಂದು ಸಬೂಬು ಹೇಳುತ್ತಿದೆ. ಮರ ಕಡಿದು ಅದೇ ಜಾಗದಲ್ಲಿ ಮರದ ಕಾಂಡಕ್ಕೆ ಬೆಂಕಿ ಹಾಕಿ ಸುಡಲಾಗಿದೆ. ಈ ಅರಣ್ಯದಲ್ಲಿ ಹೆಬ್ಬಲಸು, ಹಲಸು, ಧೂಪ, ಮಾವು ಸೇರಿದಂತೆ ವಿವಿಧ ಜಾತಿಯ ಮರಗಳಿವೆ. ಅಲ್ಲದೆ, ನವಿಲು, ಕೋತಿ ಸೇರಿದಂತೆ ಕೆಲವು ಜೀವ-ಸಂಕುಲ ಕೂಡ ಇವೆ ಎಂದು ಹೇಳಿದರು.

ಪರಿಸರ ಉಳಿಸಿ
ಪರಿಸರವಾದಿ ದಿನೇಶ್‌ಹೊಳ್ಳ ಮಾತನಾಡಿ, ನಗರದಲ್ಲಿ ಅಂತರ್ಜಲ ಕುಸಿಯುತ್ತಿದ್ದು, ಇದ್ದ ಪರಿಸರ ಉಳಿಸುವುದು ಬಿಟ್ಟು, ಮರ ಕಡಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಂತರ್ಜಲ ಕುಸಿದು ನಗರದಲ್ಲಿ ನೀರಿನ ಬಗ್ಗೆ ಸಮಸ್ಯೆ ಎದುರಾಗಬಹುದು. ಮಕ್ಕಳ ಭವಿಷ್ಯದ ಭದ್ರತೆಯ ದೃಷ್ಟಿಯಿಂದಾದರೂ ಪಾಲಿಕೆ, ಜಿಲ್ಲಾಡಳಿತ, ಸ್ಥಳೀಯರು ಸೇರಿ ಅರಣ್ಯವನ್ನು ಉಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಅಧಿಕಾರಿಗಳಿಗೆ ಮಸಿ ಹಾಕುತ್ತೇವೆ 
ಶಶಿಧರ್‌ ಶೆಟ್ಟಿ ಮಾತನಾಡಿ, ನಗರ ಪಾಲಿಕೆ ಅಧಿಕಾರಿಗಳು ಸುಪ್ರೀಂಕೋರ್ಟ್‌ ನಿಯಮ, ಹಸಿರು ನ್ಯಾಯಾಧಿಕರಣದ ನಿಯಮವನ್ನು ಪಾಲನೆ ಮಾಡುತ್ತಿಲ್ಲ. ಅರಣ್ಯ ಇಲಾಖೆಯು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದೆ. ನಾವು ಮುಂದಿನ ದಿನಗಳಲ್ಲಿ ಕೋರ್ಟ್‌, ಕಚೇರಿ ತಿರುಗುವುದಿಲ್ಲ. ಅದರ ಬದಲು ಪಾಲಿಕೆ ಅಧಿಕಾರಿಗಳು ಅನಧಿಕೃತವಾಗಿ ಮರಗಳನ್ನು ಕಡಿದರೆ ನೇರವಾಗಿ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಮಸಿ ಹಾಕುತ್ತೇವೆ ಎಂದು ಎಚ್ಚರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next