ಕಲ್ಯಾಣ್: ಶಾಹಡ್ ಬಿರ್ಲಾಗೇಟ್‌ನ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದ 56ನೇ ವಾರ್ಷಿಕ ಮಹಾಪೂಜೆಯು ಎ. 12ರಂದು ಪ್ರಾರಂಭಗೊಂಡು ಎ. 20ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಶಂಕರನಾರಾಯಣ ತಂತ್ರಿಗಳ ಪೌರೋಹಿತ್ಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಪರಿಸರದ ವಿವಿಧ ಭಜನ ಮಂಡಳಿಗಳಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದವು. ಎ. 21 ರಂದು ಸಾಮೂಹಿಕ ಚಂಡಿಕಾ ಯಾಗ, ಪಲ್ಲಪೂಜೆ, ಬ್ರಾಹ್ಮಣ ಸುವಾಸಿನಿ ಆರಾಧನೆ, ದಂಪತಿಪೂಜೆ ನಡೆಯಿತು.
ದೇವಸ್ಥಾನದ ಉಪಾಧ್ಯಕ್ಷ ರಾಜೇಶ್ ಶೆಟ್ಟಿ, ಪವನ್ ಶೆಟ್ಟಿ, ಕರುಣಾಕರ ಶೆಟ್ಟಿ ದಂಪತಿಗಳಿಂದ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ರಾತ್ರಿ ಕುಂಕುಮಾರ್ಚನೆ, ಮಹಾ ಪೂಜೆ, ಉತ್ಸವ ಬಲಿ, ಶೋಭಾಯಾತ್ರೆ, ಕಟ್ಟೆಪೂಜೆ, ಮಹಾಪ್ರಸಾದ ವಿತರಣೆ ನೆರವೇರಿತು.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀ ದುರ್ಗಾ ಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಕಲಾ ಮಿತ್ರ ಮಂಡಳಿ ಸಾಕಿನಾಕಾ ಕಲಾವಿದರುಗಳಿಂದ ಬಪ್ಪನಾಡು ಕ್ಷೇತ್ರ ಮಹಾತೆ¾ ಯಕ್ಷಗಾನ ಬಯಲಾಟವು ಸ್ವಾತಿ ವಿಶಾಲ್ ಶಾಂತಾ ಇವರ ಪ್ರಾಯೋಜಕತ್ವದಲ್ಲಿ ಪ್ರದರ್ಶನಗೊಂಡಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಮಂದಿರದ ವತಿಯಿಂದ ಗೌರವಿಸಲಾಯಿತು.
ಮಂದಿರದ ಅಧ್ಯಕ್ಷ ಕರುಣಾಕರ ಶೆಟ್ಟಿ, ಕಾರ್ಯಾಧ್ಯಕ್ಷ ಚಂದ್ರಕಾಂತ್ ಶೆಟ್ಟಿ, ಉಪಾಧ್ಯಕ್ಷ ರಾಜೇಶ್ ಜೆ. ಶೆಟ್ಟಿ, ಗೌರವ ಕಾರ್ಯದರ್ಶಿ ಜಗದೀಶ್ ಬೆಳಂಜೆ, ಕೋಶಾಧಿಕಾರಿ ಯುವರಾಜ್ ಪೂಜಾರಿ, ಯುವ ವಿಭಾಗದ ಕಾರ್ಯಾಧ್ಯಕ್ಷ ದೀಪಕ್ ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರವೀಣಾ ಪಿ. ಶೆಟ್ಟಿ, ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು ಉಪಸ್ಥಿತರಿದ್ದರು.
ಶಂಕರ ನಾರಾಯಣ ತಂತ್ರಿ, ಮಾಜಿ ಅಧ್ಯಕ್ಷ ಕೃಷ್ಣ ಪೂಜಾರಿ ದಂಪತಿ, ಚಂದ್ರಹಾಸ ಶೆಟ್ಟಿ, ಮೋನಪ್ಪ ಪೂಜಾರಿ ದಂಪತಿ, ಮುದ್ದು ಕೋಟ್ಯಾನ್ ದಂಪತಿ, ಲೋಕು ಮೂಲ್ಯ ಇವರನ್ನು ಸಮ್ಮಾನಿಸಲಾಯಿತು. ದಾನಿಗಳನ್ನು, ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು ಹಾಗೂ ಕು| ಕೃಪಾ ನಾಯಕ್ ಮತ್ತು ಕು| ಸಾನ್ಯಶ್ರೀ ಸುವರ್ಣ ಇವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.