Advertisement

ವಿಧಾನಸಭೆ ಚುನಾವಣೆಗೆ ಶಾ ತಂಡ ರೆಡಿ

06:00 AM Dec 22, 2017 | Team Udayavani |

ಬೆಂಗಳೂರು: ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಫ‌ಲಿತಾಂಶದ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮುಂದಿನ ಗುರಿ ಕರ್ನಾಟಕ ವಿಧಾನಸಭೆ ಚುನಾವಣೆ. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ನಡೆದ ಬಹುತೇಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲುವಿನ ದಡ ಹತ್ತಿಸಿದ ಅಮಿತ್‌ ಶಾ ಅವರ ಕೆಲಸದ ಹಿಂದೆ ಒಂದು ತಂಡ ಕೆಲಸ ಮಾಡುತ್ತಿದೆ.

Advertisement

ವಿಧಾನಸಭೆ ಚುನಾವಣೆ ನಡೆಯುವ ರಾಜ್ಯದಲ್ಲಿ ಖಾಸಗಿ ಸಂಸ್ಥೆಯೊಂದನ್ನು ನೇಮಿಸುವ ಅಮಿತ್‌ ಶಾ, ಆ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾರೆ. ನಂತರ ತಮ್ಮ ತಂಡದೊಂದಿಗೆ ಕುಳಿತು ಅದಕ್ಕೆ ತಕ್ಕಂತೆ ಏನೇನು ತಂತ್ರಗಾರಿಕೆಗಳನ್ನು ರೂಪಿಸಬಹುದು ಎಂಬ ಬಗ್ಗೆ ಚರ್ಚಿಸುತ್ತಾರೆ. ಬಳಿಕ ಕೆಲವರು ರಾಜ್ಯಕ್ಕೆ ಭೇಟಿ ನೀಡಿ ಮತ್ತೂಂದು ಸುತ್ತಿನ ಮಾಹಿತಿ ಸಂಗ್ರಹಿಸುತ್ತಾರೆ. ಇದೆಲ್ಲದರ ಆಧಾರದ ಮೇಲೆ ಆ ರಾಜ್ಯಕ್ಕೆ ಸಂಬಂಧಿಸಿದಂತೆ ತಂತ್ರಗಾರಿಕೆ ಸಿದ್ಧವಾಗುತ್ತದೆ. ಇದಾದ ಬಳಿಕ ರಾಜ್ಯದ ಸ್ಥಳೀಯ ಕೆಲವು ಪ್ರಮುಖರೊಂದಿಗೆ ತಂತ್ರಗಾರಿಕೆ ಬಗ್ಗೆ ಸಮಾಲೋಚಿಸುವ ಅಮಿತ್‌ ಶಾ ಮತ್ತು ತಂಡ, ಬರುವ ಸಲಹೆಗಳನ್ನು ಆಧರಿಸಿ ಅಂತಿಮ ತಂತ್ರಗಾರಿಕೆ ರೂಪಿಸುತ್ತದೆ.

ಅಮಿತ್‌ ಶಾ ಕೋರ್‌ ತಂಡದಲ್ಲಿರುವ ಪ್ರಮುಖರು ಭೂಪೇಂದ್ರ ಯಾದವ್‌, ಓಂಪ್ರಕಾಶ್‌ ಮಾಥುರ್‌, ಅರುಣ್‌ ಸಿಂಗ್‌, ರಾಮ್‌ಲಾಲ್‌, ರಾಮ್‌ ಮಾಧವ್‌, ಅನಿಲ್‌ ಜೈನ್‌. ಕರ್ನಾಟಕ ವಿಧಾನಸಭೆ ಚುನಾವಣೆ ಬಂದಾಗ ರಾಜ್ಯದವರೇ ಆದ ಬಿ.ಎಲ್‌.ಸಂತೋಷ್‌ ಅವರು ಈ ತಂಡದಲ್ಲಿ ಸೇರಿಕೊಳ್ಳುತ್ತಾರೆ. ರಾಜಕೀಯ ತಂತ್ರಗಳನ್ನು ಹೆಣೆಯುವುದರ ಜತೆಗೆ ಅದನ್ನು ಯಾವ ರೀತಿ ಅನುಷ್ಠಾನಗೊಳಿಸಬೇಕು ಎಂಬುದನ್ನೂ ಸ್ಪಷ್ಟವಾಗಿ ಅರಿತಿರುವ ಈ ಎಲ್ಲ ಮುಖಂಡರು, ಸಂಘಟನೆ ಬಲಪಡಿಸುವುದು, ಪಕ್ಷದಲ್ಲಿರುವ ಭಿನ್ನಾಭಿಪ್ರಾಯಗಳನ್ನು ದೂರ ಮಾಡುವುದರಲ್ಲೂ ಎತ್ತಿದ ಕೈ.

ಹೀಗಾಗಿಯೇ ಅಮಿತ್‌ ಶಾ ಚಾಣಕ್ಷ ನೀತಿಗಳು ಯಶ ಕಂಡು ಅನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತಾಗಿದೆ. ಇದೀಗ ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಕರ್ನಾಟಕದ ಮೇಲೆ ಈ ತಂಡದ ದೃಷ್ಟಿ ಬಿದ್ದಿದೆ. ಈ ತಂಡದ ಸದಸ್ಯರಲ್ಲಿ ಕೆಲವರು ರಾಜ್ಯಕ್ಕೆ ಬಂದು ಕೆಲಸ ಮಾಡಿದರೆ, ಇನ್ನು ಕೆಲವರು ಕೇಂದ್ರ ಸ್ಥಾನದಲ್ಲೇ ಕುಳಿತು ರಾಜ್ಯದಿಂದ ಪ್ರತಿನಿತ್ಯ ಬರುವ ವರದಿಗಳನ್ನು ಆಧರಿಸಿ ಸಲಹೆಗಳನ್ನು ನೀಡುತ್ತಾರೆ.

ಅಮಿತ್‌ ಶಾ ಕೋರ್‌ ತಂಡದಲ್ಲಿರುವ ಪ್ರಮುಖರು
ಭೂಪೇಂದ್ರ ಯಾದವ್‌

ಮೂಲತಃ ರಾಜಸ್ತಾನದ ಅಜೆ¾àರ್‌ನ ಭೂಪೇಂದ್ರ ಯಾದವ್‌ ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಪಕ್ಷದಲ್ಲಿರುವ ಭಿನ್ನಮತಕ್ಕೆ ಮದ್ದೆರೆಯುವುದು ಮತ್ತು ಚುನಾವಣಾ ತಂತ್ರಗಾರಿಕೆ ರೂಪಿಸುವಲ್ಲಿ ಎತ್ತಿದ ಕೈ. ಯಾವತ್ತೂ ಬಹಿರಂಗವಾಗಿ ಚುನಾವಣಾ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅಮಿತ್‌ ಶಾ ಅವರು ಯಾವುದೇ ರಾಜ್ಯದಲ್ಲಿ ಪಕ್ಷದ ಆಂತರಿಕ ವಿಚಾರ ಕುರಿತು ಏನೇ ತೀರ್ಮಾ ಕೈಗೊಳ್ಳುವುದಿದ್ದರೂ ಅದು ಯಾದವ್‌ ಅವರು ನೀಡುವ ವರದಿ ಆಧರಿಸಿರುತ್ತದೆ. ಹೀಗಾಗಿ ಪಕ್ಷ ಸಂಘಟನೆ ಕೆಲಸಕ್ಕಾಗಿ ಅಮಿತ್‌ ಶಾ ಯಾವುದೇ ರಾಜ್ಯಕ್ಕೆ ಹೋಗುವ ಮುನ್ನ ಯಾದವ್‌ ಅಲ್ಲಿರುತ್ತಾರೆ.

Advertisement

ಅರುಣ್‌ ಸಿಂಗ್‌
ಉತ್ತರ ಪ್ರದೇಶ ಮೂಲದ ಅರುಣ್‌ ಸಿಂಗ್‌ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ. ಚಾರ್ಟೆಡ್‌ ಅಕೌಂಟೆಂಟ್‌ ಆಗಿದ್ದ ಅವರು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ವಿಶ್ವಬ್ಯಾಂಕ್‌ ಸಲಹೆಗಾರರಾಗಿದ್ದರು. ಯುವ ಮೋರ್ಚಾದಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿದ್ದ ಸಿಂಗ್‌, ಪಕ್ಷದ ಆರ್ಥಿಕ ವ್ಯವಹಾರಗಳನ್ನು ನಿಭಾಯಿಸುವಲ್ಲಿ ನಿಪುಣ. ಬಿಜೆಪಿ ಕೇಂದ್ರ ಕಚೇರಿಯ ನಿರ್ವಹಣೆ ನೋಡಿಕೊಳ್ಳುತ್ತಿದ್ದ ಅವರು, ಪಂಡಿತ್‌ ದೀನ್‌ದಯಾಳ್‌ ಉಪಾಧ್ಯಾಯ ಅವರ ಮಾನವತಾವಾದ ಪ್ರತಿಪಾದಿಸುತ್ತಾರೆ. ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.

ಓಮ್‌ ಮಾಥುರ್‌
ರಾಜಸ್ಥಾನ ಮೂಲದ ಓಂಪ್ರಕಾಶ್‌ ಮಾಥುರ್‌ ಪಕ್ಷದಲ್ಲಿ ಓಮ್‌ ಮಾಥುರ್‌, ಓಂಜಿ ಬಾಯಿ ಎಂದೇ ಖ್ಯಾತಿ. ಆರ್‌ಎಸ್‌ಎಸ್‌ ಪ್ರಚಾರಕರಾಗಿ ಕೆಲಸ ಮಾಡಿ ನಂತರ ಬಿಜೆಪಿ ಸೇರಿದ್ದ ಅವರು ರಾಜಸ್ಥಾನ ಬಿಜೆಪಿ ಅಧ್ಯಕ್ಷರಾಗಿದ್ದರು. ಯುವಕರನ್ನು ಗುರುತಿಸಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಎತ್ತಿದ ಕೈ. ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚಾಗಿ ಬಿಜೆಪಿಯತ್ತ ಆಕರ್ಷಿತವಾಗುತ್ತಿರುವುದರಿಂದ ಅಮಿತ್‌ ಶಾಗೆ ಓಂ ಮಾಥುರ್‌ ಅವರ ತಂತ್ರಗಾರಿಕೆ ಹೆಚ್ಚು ಅನುಕೂಲವಾಗಿದೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಉಸ್ತುವಾರಿಯಾಗಿ ಕೆಲಸ ಮಾಡಿದ್ದರು. ಕಠಿಣ ಪರಿಸ್ಥಿತಿ ಎದುರಿಸುವಲ್ಲಿ ಸಿದ್ಧಹಸ್ತರು.

ರಾಮ್‌ಲಾಲ್‌
ಉತ್ತರ ಪ್ರದೇಶದವರಾಗಿರುವ ರಾಮ್‌ಲಾಲ್‌ ಮೂಲತಃ ಆರ್‌ಎಸ್‌ಎಸ್‌ನಿಂದ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡವರು. ಹಿಂದೆ ಆರ್‌ಎಸ್‌ಎಸ್‌ ಪ್ರಚಾಕರಾಗಿದ್ದ ಅವರ ಸಂಘಟನಾ ಶಕ್ತಿಯ ಅನುಕೂಲವನ್ನು ಅಮಿತ್‌ ಶಾ ಪಡೆದುಕೊಳ್ಳುತ್ತಾರೆ. ತಣ್ಣಗಿನ ಸ್ವಭಾವದ ರಾಮ್‌ಲಾಲ್‌ ಸಂಘಟನೆ ವಿಚಾರದಲ್ಲಿ ಅಷ್ಟೇ ಕಠಿಣ ನಿರ್ಧಾರ ಕೈಗೊಳ್ಳುವಲ್ಲಿ ಎತ್ತಿದ ಕೈ. ತಳಮಟ್ಟದಲ್ಲಿ ಪಕ್ಷ ಬಲಪಡಿಸುವ ತಳಮಟ್ಟದ ಕಾರ್ಯಕರ್ತರಿಗೆ ಆದ್ಯತೆ ನೀಡುವ ತಂತ್ರ ಬೂತ್‌ ಮಟ್ಟದಲ್ಲಿ ಸಂಘಟನೆಯನ್ನು ಶಕ್ತಿಯುತಗೊಳಿಸುವಲ್ಲಿ ಸಹಕಾರಿಯಾಗಿದೆ. ನಾಯಕರಿಂದ ಹಿಡಿದು ಕಾರ್ಯಕರ್ತರವರೆಗೆ ಎಲ್ಲರೊಂದಿಗೆ ಬೆರೆಯುವ ಗುಣವಿದೆ.

ರಾಮ್‌ಮಾಧವ್‌
ಆಂಧ್ರಪ್ರದೇಶ ಮೂಲದ ರಾಮ್‌ಮಾಧವ್‌ ಕೂಡ ಆರ್‌ಎಸ್‌ಎಸ್‌ ಸಂಘಟನೆಯಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿ ಸಂಘಟನೆಯಿಂದ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡವರು. ಪತ್ರಕರ್ತರೂ ಆಗಿದ್ದ ಅವರು ಆರ್‌ಎಸ್‌ಎಸ್‌ನ “ಥಿಂಕ್‌ ಟ್ಯಾಂಕ್‌’ ಆಗಿದ್ದವರು. ಸಂಘಟನಾತ್ಮಕವಾಗಿ ಕೆಲಸ ಮಾಡುವ ಮತ್ತು ಎಲ್ಲರನ್ನೂ ಒಟ್ಟು ಸೇರಿಸಿಕೊಂಡು ಹೋಗುವ ಅವರ ಕಾರ್ಯವೈಖರಿಯಿಂದಾಗಿ ಅಮಿತ್‌ ಶಾ ತಂಡದಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಮಾಡಿದೆ. ವಿಶೇಷವೆಂದರೆ ಅವರು ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದರು. ಜತೆಗೆ ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ಬಲ್ಲವರು.

ಅನಿಲ್‌ ಜೈನ್‌
ಮೂಲತಃ ಮಧ್ಯಪ್ರದೇಶದವರಾಗಿರುವ ಅನಿಲ್‌ ಜೈನ್‌ ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ರಾಜಕಾರಣಿ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಜೈನ್‌, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತಂತ್ರಗಾರಿಕೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವಂತೆ ಮಾಡುತ್ತಾರೆ. ಹರಿಯಾಣ ವಿಧಾನಸಭೆ ಚುನಾವಣೆ ಉಸ್ತುವಾರಿಯಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದರು. ಯಾವುದಾದರೂ ಒಂದು ಕೆಲಸ ಆರಂಭಿಸಿದರೆ ಅದನ್ನು ಕೊನೆಮುಟ್ಟಿಸುವವರೆಗೆ ವಿರಮಿಸುವುದಿಲ್ಲ. ಹೀಗಾಗಿ ಅಮಿತ್‌ ಶಾಗೆ ಆಪ್ತರಾಗಿ ಅವರ ಕೋರ್‌ ತಂಡದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ.

ಬಿ.ಎಲ್‌.ಸಂತೋಷ್‌
ನಮ್ಮ ರಾಜ್ಯದವರೇ ಆಗಿರುವ ಬಿ.ಎಲ್‌.ಸಂತೋಷ್‌ ಅವರು ಕರ್ನಾಟಕದ ಚುನಾವಣೆ ಬಂದಾಗ ಅಮಿತ್‌ ಶಾ ಕೋರ್‌ ತಂಡದಲ್ಲಿ ಸೇರಿಕೊಳ್ಳುತ್ತಾರೆ. ಆರ್‌ಎಸ್‌ಎಸ್‌ನಿಂದ ರಾಜ್ಯ ಬಿಜೆಪಿ ಸಂಘನಾ ಕಾರ್ಯದರ್ಶಿಯಾಗಿ ಮತ್ತು ಈಗ ಬಿಜೆಪಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. 2013ರಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ರಾಜ್ಯದಲ್ಲಿ ಬಿಜೆಪಿ ಚುನಾವಣೆ ತಂತ್ರಗಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚೆಗೆ ಕೇರಳದಲ್ಲಿ ಅಮಿತ್‌ ಶಾ ಅವರು ಹಮ್ಮಿಕೊಂಡಿದ್ದ ಯಾತ್ರೆಯ ಮೇಲುಸ್ತುವಾರಿ ವಹಿಸಿ ಅದನ್ನು ಯಶಸ್ವಿಗೊಳಿಸಿದ್ದರು. ಗುಜರಾತ್‌ ಚುನಾವಣೆಯಲ್ಲಿ ಆರು ರಾಜ್ಯಗಳ ಜವಾಬ್ದಾರಿ ಅವರದ್ದಾಗಿತ್ತು. ತಳಮಟ್ಟದ ಸಂಘಟನೆ ಚುರುಕುಗೊಳಿಸುವಲ್ಲಿ ಎತ್ತಿದ ಕೈ.

ಉಳಿದಂತೆ ಅಮಿತ್‌ ಶಾ ಅವರು ಸ್ಥಳೀಯವಾಗಿ ಕೆಲವು ಮುಖಂಡರನ್ನು ಚುನಾವಣಾ ತಂತ್ರಗಾರಿಕೆ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದಕ್ಕೂ ಮುನ್ನ ಅವರು ತಮ್ಮದೇ ಮೂಲಗಳಿಂದ ಆ ಮುಖಂಡರ ಕಾರ್ಯವೈಖರಿ, ಅವರು ಈ ಹಿಂದೆ ಎದುರುಸಿದ ಚುನಾವಣೆಗಳು, ಅವರು ರೂಪಿಸಿದ ತಂತ್ರಗಾರಿಕೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾರೆ. ಇದರ ಜತೆಗೆ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ಸಹ ಉಸ್ತುವಾರಿ ಪುರಂದೇಶ್ವರಿ, ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌, ಚುನಾವಣಾ ಸಹ ಉಸ್ತುವಾರಿ ಪಿಯೂಷ್‌ ಗೋಯೆಲ್‌ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ.

– ಪ್ರದೀಪ್‌ ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next