Advertisement
ಕಾಂಗ್ರೆಸ್ ಶಾಸಕರಾಗಿದ್ದರೂ ಕಾಂಗ್ರೆಸ್‌ನಿಂದ ಪೂರ್ಣ ಪ್ರಮಾಣದಲ್ಲಿ ದೂರವೇ ಉಳಿದಿರುವ ರಮೇಶ ಜಾರಕಿಹೊಳಿಯವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗೆ ಪುಷ್ಠಿ ಎನ್ನುವಂತೆ ಅಮಿತ್ ಶಾರನ್ನು ಭೇಟಿ ಮಾಡಿದ ಬಳಿಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡುವಂತೆ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ ಎನ್ನಲಾಗುತ್ತಿದೆ.
Related Articles
Advertisement
ಏ.23ರಂದು ಲೋಕಸಭೆಗೆ ಎರಡನೇ ಹಂತದ ಮತದಾನ ಮುಗಿಯಲಿದ್ದು, ಏ.24ರಂದು ಬೆಂಗಳೂರಿಗೆ ತೆರಳುವ ರಮೇಶ ಜಾರಕಿಹೊಳಿ ಮತ್ತೆ ಆಪರೇಶನ್ ಕಮಲಕ್ಕೆ ಚಾಲನೆ ನೀಡಲಿದ್ದು, ಈಗಾಗಲೇ ತಮ್ಮ ನಿಕಟ ಸಂಪರ್ಕದಲ್ಲಿರುವ ಮೂವರು ಕಾಂಗ್ರೆಸ್ ಶಾಸಕರ ಜತೆಗೆ ಇನ್ನಷ್ಟು ಶಾಸಕರಿಗೆ ಗಾಳ ಹಾಕುವ ಕಾರ್ಯ ತೀವ್ರಗೊಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಲೆಕ್ಕಾಚಾರ ಏನು?: ಸರ್ಕಾರ ರಚನೆಯಲ್ಲಿ ಬಿಜೆಪಿ ಈಗಾಗಲೇ ತನ್ನದೇ ಲೆಕ್ಕಾಚಾರ ಹೊಂದಿದ್ದು, ಏ.24ರ ನಂತರ ಇದು ಇನ್ನಷ್ಟು ತೀವ್ರಗೊಳ್ಳಲಿದೆ. ರಮೇಶ ಜಾರಕಿಹೊಳಿ ಜತೆಗೆ ಬೆಳಗಾವಿ ಜಿಲ್ಲೆಯ ಇನ್ನೊಬ್ಬ ಶಾಸಕ, ಹಾವೇರಿ ಹಾಗೂ ಬಳ್ಳಾರಿ ಜಿಲ್ಲೆಯ ತಲಾ ಒಬ್ಬರು ಶಾಸಕರು ಬಿಜೆಪಿ ಕಡೆ ಬರುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ.
ಇದಲ್ಲದೆ ಕುಂದಗೋಳ ಹಾಗೂ ಚಿಂಚೊಳ್ಳಿ ವಿಧಾನಸಭಾ ಉಪ ಚುನಾವಣೆಗಳಲ್ಲಿ ಹೇಗಾದರು ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಬಿಜೆಪಿ ತಂತ್ರಗಾರಿಕೆ ರೂಪಿಸಿದ್ದು, ಇಬ್ಬರು ಪಕ್ಷೇತರ ಶಾಸಕರನ್ನು ಸೆಳೆಯಲು ಸಿದ್ಧತೆ ನಡೆಸಿದೆ. ಇದೆಲ್ಲವೂ ಸಾಧ್ಯವಾದರೆ ಬಿಜೆಪಿ ಶಾಸಕರ ಬಲ 112ಕ್ಕೆ ತಲುಪಲಿದೆ. ಈ ಬೆಳವಣಿಗೆ ನೋಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಇನ್ನಷ್ಟು ಶಾಸಕರು ಈ ಕಡೆ ವಾಲುವ ಸಾಧ್ಯತೆ ಅಧಿಕವಾಗಿದ್ದು, ಸರ್ಕಾರ ರಚನೆ ಸುಲಭವಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ.
ಸದ್ಯದ ಸ್ಥಿತಿಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರು ಬಿಜೆಪಿ ಪರವಾಗಿ ಬೆಂಬಲ ಘೋಷಿಸಿದರೆ, ನಾಲ್ವರ ಅಮಾನತಿಗೆ ಕಾಂಗ್ರೆಸ್ ಮುಂದಾದರೂ ಹೇಗೋ ನಮ್ಮದೇ ಪಕ್ಷದ ಸ್ಪೀಕರ್ ಬರಲಿದ್ದು, ಅಲ್ಲಿ ಮ್ಯಾನೇಜ್ ಮಾಡಬಹುದು. ಮುಂದೆ ಉಪ ಚುನಾವಣೆಯಲ್ಲಿ ಸರ್ಕಾರವಾಗಿದ್ದುಕೊಂಡು ಕ್ಷೇತ್ರಗಳನ್ನು ಗೆಲ್ಲಲು ಸುಲಭವಾಗಲಿದೆ ಎಂಬುದು ಬಿಜೆಪಿ ಚಿಂತನೆ.
ಮೇ 24ರೊಳಗೆ ಯೋಜನೆ ಪೂರ್ಣ?: ರಾಜ್ಯದಲ್ಲಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನ ಹಾಗೂ ಬಿಜೆಪಿ ಸರ್ಕಾರ ಅಸ್ತಿತ್ವ ನಿಟ್ಟಿನಲ್ಲಿ ಎಲ್ಲ ರೀತಿಯ ಅಂತಿಮ ಹಾಗೂ ಪೂರ್ಣ ಪ್ರಮಾಣದ ತಯಾರಿಯನ್ನು ಮೇ 24ರೊಳಗಾಗಿ ಪೂರ್ಣಗೊಳಿಸಬೇಕೆಂದು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ.
ಈ ನಿಟ್ಟಿನಲ್ಲಿಯೇ ಬಿಜೆಪಿ ರಾಜ್ಯ ನಾಯಕರು ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಮುಗಿಯುತ್ತಿದ್ದಂತೆಯೇ “ಆಪರೇಷನ್ ಕಮಲ’ ಕಾರ್ಯಾಚರಣೆಗೆ ಚುರುಕು ನೀಡಲಿದ್ದಾರೆ ಎನ್ನಲಾಗಿದೆ. ಆಪರೇಷನ್ ಕಮಲಕ್ಕೆ ಹಿಂದೆ ನಡೆಸಿದ ಯತ್ನಗಳಿಗೆ ಸಮರ್ಪಕ ಯಶಸ್ಸು ದೊರೆಯದಿರುವುದಕ್ಕೆ ಬಿಜೆಪಿ ಕಡೆ ಬರುವ ಕಾಂಗ್ರೆಸ್-ಜೆಡಿಎಸ್ ಶಾಸಕರ ಸಂಖ್ಯೆ 12ಕ್ಕೆ ತಲುಪಿದರೆ ಸಾಕು, ಈ ಸಂಖ್ಯೆ 20ಕ್ಕೆ ಹೆಚ್ಚಲಿದೆ ಎಂದು ಹೇಳಲಾಗುತ್ತಿದೆ.
ಲಿಂಗಾಯತ ಶಾಸಕರ ಬೆಂಬಲ?: ಕೆಲ ಮೂಲಗಳ ಪ್ರಕಾರ ಈ ಹಿಂದೆ ನಡೆದ ಆಪರೇಷ ಕಮಲ ಯತ್ನಕ್ಕೆ ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಕಾಂಗ್ರೆಸ್‌ನ ಕೆಲ ಲಿಂಗಾಯತ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದರಲ್ಲದೆ, ಬಿಜೆಪಿ ಸರ್ಕಾರ ರಚನೆಗೆ ಮುಂದಾದರೆ ಸಂಖ್ಯಾಬಲದ ಕೊರತೆ ಎದುರಾದಾಗ ಬೆಂಬಲಕ್ಕೆ ನಾವಿದ್ದೇವೆ ಎಂದು ತಿಳಿಸಿದ್ದರು ಎಂದು ಹೇಳಲಾಗುತ್ತಿದೆ.
ಆದರೆ, ಯಾವಾಗ ದೇವದುರ್ಗದಲ್ಲಿ ಜೆಡಿಎಸ್ ಶಾಸಕರೊಬ್ಬರ ಪುತ್ರನ ಜತೆ ಯಡಿಯೂರಪ್ಪ ಅವರು ಮಾತನಾಡಿದ್ದಾರೆನ್ನಲಾದ ಆಡಿಯೋ ಸ್ಫೋಟಗೊಂಡಿತೋ ಅಲ್ಲಿಗೆ ಬೆಂಬಲಕ್ಕೆ ಮುಂದಾಗಿದ್ದ ಅನೇಕ ಶಾಸಕರು ಹೆಜ್ಜೆ ಹಿಂದೆ ಇರಿಸಿದರು. ಇದೀಗ ಮತ್ತೂಂದು ಸುತ್ತಿನ ಆಪರೇಷನ್ ಕಮಲದ ಯತ್ನ ತೀವ್ರಗೊಳ್ಳುವ ಸಾಧ್ಯತೆ ಇದ್ದು, ಸಮ್ಮಿಶ್ರ ಸರ್ಕಾರದ ನಾಯಕರು ಇದನ್ನು ಹೇಗೆ ಎದುರಿಸಲಿದ್ದಾರೆ ಹಾಗೂ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಬರುವುದೇ ಎಂಬುದನ್ನು ಕಾಲವೇ ನಿರ್ಣಯಿಸಬೇಕು.
* ಅಮರೇಗೌಡ ಗೋನವಾರ