Advertisement

ಮಾದಕ ಮುಕ್ತ ಪಂಜಾಬ್‌ ನಮ್ಮ ಗುರಿ: ಸಚಿವ ಅಮಿತ್‌ ಶಾ

11:58 PM Feb 13, 2022 | Team Udayavani |

ಚಂಡೀಗಡ/ಲಕ್ನೋ: ಪಂಜಾಬ್‌ ರಾಜ್ಯವನ್ನು ಮಾದಕವಸ್ತು ಮುಕ್ತ ರಾಜ್ಯವನ್ನಾಗಿಸುವುದೇ ನಮ್ಮ ಗುರಿ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪಂಜಾಬ್‌ ಮತದಾರರಿಗೆ ಆಶ್ವಾಸನೆ ನೀಡಿದ್ದಾರೆ.

Advertisement

ಪಟಿಯಾಲಾದಲ್ಲಿ ಭಾನುವಾರ ನಡೆದ ಬೃಹತ್‌ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, “ಪಂಜಾಬ್‌ನ ಒಂದು ಭಾಗ, ಪಾಕಿಸ್ತಾನದ ಗಡಿಯೊಂದಿಗೆ ಬೆಸೆದುಕೊಂಡಿದೆ. ಅಲ್ಲಿಂದಲೇ ಪಂಜಾಬ್‌ನೊಳಕ್ಕೆ ಮಾದಕ ವಸ್ತುಗಳು ಕಾಲಿಡುತ್ತಿವೆ. ಈ ಸಾಮಾಜಿಕ ಪಿಡುಗನ್ನು ತೊಲಗಿಸಿ, ಪಂಜಾಬ್‌ನಲ್ಲಿ ಶಾಂತಿ, ಸ್ಥಿರತೆ, ಸೌಹಾರ್ದತೆ ಹಾಗೂ ಭದ್ರತೆಯನ್ನು ಕಲ್ಪಿಸಲು ಎನ್‌ಡಿಎ ಸರ್ಕಾರ ಪ್ರಯತ್ನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಒಂದು ಅವಕಾಶ ಕೊಡಿ. ಕೇಂದ್ರದ ಮಾದಕದ್ರವ್ಯ ನಿಯಂತ್ರಣ ಸಂಸ್ಥೆಯ ಸಹಯೋಗದೊಂದಿಗೆ ನಾವು ರಾಜ್ಯವನ್ನು ಮಾದಕವಸ್ತು ಮುಕ್ತ ಮಾಡುತ್ತೇವೆ” ಎಂದರು.

ಪಂಜಾಬ್‌ನಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೆ, ಜಲಂಧರ್‌, ಲೂಧಿಯಾನಾ, ಅಮೃತಸರ, ಪಟಿಯಾಲಾದಲ್ಲಿ ಮಾದಕದ್ರವ್ಯ ನಿಯಂತ್ರಣ ಸಂಸ್ಥೆಯ ನಾಲ್ಕು ಶಾಖೆಗಳನ್ನು ತೆರೆಯುತ್ತೇವೆ ಎಂದು ತಿಳಿಸಿದರು.

“ಪಂಜಾಬ್‌ನಲ್ಲಿಸಿಖ್ಖರನ್ನು, ಹಿಂದೂಗಳನ್ನು ಬಲವಂತವಾಗಿ ಅನ್ಯ ಧರ್ಮಕ್ಕೆ ಮತಾಂತರ ಮಾಡುವ ಮತ್ತೊಂದು ಸಮಸ್ಯೆಯಿದೆ. ಇದನ್ನು ತಡೆಗಟ್ಟಲು ಆಪ್‌ ಹಾಗೂ ಕಾಂಗ್ರೆಸ್‌ ಸರ್ಕಾರಗಳಿಗೆ ಸಾಧ್ಯವಿಲ್ಲ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಇದನ್ನು ತಡೆಯುತ್ತೇವೆ” ಎಂದು ತಿಳಿಸಿದರು.

ಇದೇ ವೇಳೆ, ಮಾಜಿ ಸಿಎಂ ಅಮರಿಂದರ್‌ ಸಿಂಗ್‌ರನ್ನು ಶ್ಲಾ ಸಿದ ಅವರು, “ರಾಷ್ಟ್ರದ ಭದ್ರತೆಯ ವಿಚಾರಕ್ಕೆ ಬಂದಾಗ ಅಮರಿಂದರ್‌ ಅವರು ತೋರುವ ಧೈರ್ಯವನ್ನು ನಾವೆಲ್ಲರೂ ಮೆಚ್ಚಲೇಬೇಕು. ಆದರೆ, ಇಂಥ ನಾಯಕನನ್ನು ಕಾಂಗ್ರೆಸ್‌ ನಿರ್ಲಕ್ಷಿಸಿತು” ಎಂದರು.

Advertisement

ಛನ್ನಿ ವಿರುದ್ಧ ಗುಡುಗು:
ಮುಖ್ಯಮಂತ್ರಿ ಛನ್ನಿ ವಿರುದ್ಧ ಟೀಕೆ ಮಾಡಿದ ಅವರು, ಪ್ರಧಾನಿ ಮೋದಿಯವರು ಇತ್ತೀಚೆಗೆ ಪಂಜಾಬ್‌ಗ ಆಗಮಿಸಿದ್ದಾಗ ಅವರ ಭದ್ರತೆಗೆ ಅಪಾಯ ಬಂದ ಘಟನೆ ನಡೆದಿತ್ತು. ನಮ್ಮ ದೇಶದ ಪ್ರಧಾನಿಯವರಿಗೇ ಸೂಕ್ತ ಭದ್ರತೆ ನೀಡದ ಛನ್ನಿ, ಪಂಜಾಬನ್ನು ಹೇಗೆ ರಕ್ಷಿಸುತ್ತಾರೆ ಎಂದು ಸವಾಲು ಹಾಕಿದರು.

ಕೇಜ್ರಿವಾಲ್‌-ಛನ್ನಿ ಜಟಾಪಟಿ
ಪಂಜಾಬ್‌ನಲ್ಲಿ ಪ್ರಚಾರ ನಡೆಸಿದ ಅರವಿಂದ್‌ ಕೇಜ್ರಿವಾಲ್‌ ಅವರು, ಮುಖ್ಯಮಂತ್ರಿ ಚರಣ್‌ಜಿತ್‌ ಛನ್ನಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದರು. ಪೂರ್ವ ಅಮೃತಸರದಲ್ಲಿ ಚುನಾವಣಾ ರ‍್ಯಾಲಿ ನಡೆಸಿದ ಅವರು, ಈ ಬಾರಿ ಮತದಾನದ ವೇಳೆ ಮತಯಂತ್ರದ ಮೇಲಿರಲಿರುವ ಕಸಪೊರಕೆ ಬಟನ್‌ ಒತ್ತಿ. ಪಂಜಾಬ್‌ನ ಅದೃಷ್ಟ ಹೇಗೆ ಬದಲಾಗುತ್ತೆ ಅನ್ನೋದನ್ನ ನೀವೇ ನೋಡಿ ಎಂದು ಮತದಾರರಿಗೆ ಹೇಳಿದರು.

ಮುಖ್ಯಮಂತ್ರಿ ಛನ್ನಿ ವಿರುದ್ಧ ಟೀಕೆ ಮಾಡಿದ ಅವರು, ಛನ್ನಿಯವರು ಈ ಬಾರಿ ಶಾಸಕರಾಗಿಯೂ ಆಯ್ಕೆಯಾಗುವುದಿಲ್ಲ ಎಂದರು.

ಛನ್ನಿ ತಿರುಗೇಟು:
ಮತ್ತೂಂದೆಡೆ, ಕೇಜ್ರಿವಾಲ್‌ಗೆ ತಿರುಗೇಟು ನೀಡಿರುವ ಛನ್ನಿ, ಕೇಜ್ರಿವಾಲ್‌ ಅವರು ಪಂಜಾಬನ್ನು ಲೂಟಿ ಮಾಡಲು ಬಂದಿದ್ದಾರೆ ಎಂದರು. ಅಕ್ರಮ ಮರಳು ದಂಧೆಯಲ್ಲಿ ನನ್ನ ಕೈವಾಡವಿದೆ ಎಂದು ಕೇಜ್ರಿವಾಲ್‌ ಹಾಗೂ ಅವರ ಪಕ್ಷದ ನಾಯಕರು ನನ್ನ ಮೇಲೆ ಆರೋಪ ಮಾಡಿದರು. ಆದರೆ, ಅವ್ಯಾವೂ ಸಾಬೀತಾಗಲಿಲ್ಲ. ಇದೇ ವಿಚಾರಕ್ಕಾಗಿ ನನ್ನ ಮೇಲೆ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಅಲ್ಲಿಯೂ ಸತ್ಯವೇ ವಿಜೃಂಭಿಸುತ್ತದೆ ಎಂದರು.

ನನ್ನ ಅಣ್ಣನಿಗಾಗಿ ಜೀವನ ತ್ಯಾಗ ಮಾಡುವೆ: ಪ್ರಿಯಾಂಕಾ
ಪಂಜಾಬ್‌ನಲ್ಲಿ ಪ್ರಚಾರ ನಡೆಸಲು ಆಗಮಿಸಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, “”ನನ್ನ ಅಣ್ಣನಿಗಾಗಿ ನಾನು ನನ್ನ ಜೀವನ ತ್ಯಾಗ ಮಾಡಲು ಸಿದ್ಧಳಿದ್ದೇನೆ. ನನ್ನ ಅಣ್ಣ ಕೂಡ ಆತನ ಜೀವನವನ್ನು ನನಗಾಗಿ ತ್ಯಾಗ ಮಾಡಲು ಸಿದ್ಧನಿದ್ದಾನೆ. ಬಿಜೆಪಿಯಲ್ಲಿ ಆಂತರಿಕ ಕಚ್ಚಾಟವಿದೆ. ಆದರೆ, ಕಾಂಗ್ರೆಸ್ಸಿನಲ್ಲಿಲ್ಲ” ಎಂದು ಹೇಳಿದ್ದಾರೆ.

ಅಧಿಕಾರಕ್ಕಾಗಿ ಪ್ರಿಯಾಂಕಾ ಹಾಗೂ ರಾಹುಲ್‌ ಗಾಂಧಿ ನಡುವೆ ಕಚ್ಚಾಟವಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೀಡಿದ್ದ ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದ್ದಾರೆ.
“”ಕಿತ್ತಾಟವೇನಿದ್ದರೂ ಯೋಗಿಯವರ ಆಲೋಚನೆಗಳಲ್ಲಿವೆಯಷ್ಟೆ. ಅವರು, ಮೋದಿ ಮತ್ತು ಅಮಿತ್‌ ಶಾ ನಡುವೆ ಆಂತರಿಕ ಕಚ್ಚಾಟವಿರಬಹುದು. ಅದನ್ನು ಹೇಳಲಾಗದೆ, ಕಾಂಗ್ರೆಸ್‌ ಕಡೆಗೆ ಬೆರಳು ತೋರಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ಬಿಜೆಪಿ ಆಣತಿಯಂತೆ ನಡಯುತ್ತಿದ್ದ ಅಮರಿಂದರ್‌:
ಈ ಹಿಂದೆ ಪಂಜಾಬ್‌ನಲ್ಲಿ ಮುಖ್ಯಮಂತ್ರಿಯಾಗಿದ್ದ ಅಮರಿಂದರ್‌ ಸಿಂಗ್‌ ಅವರನ್ನು ಆ ಪದವಿಯಿಂದ ಕೆಳಕ್ಕಿಳಿಸಿದ ಕಾರಣವನ್ನು ಇದೇ ಮೊದಲ ಬಾರಿಗೆ ಪ್ರಿಯಾಂಕಾ ವಾದ್ರಾ ಬಾಯಿಬಿಟ್ಟಿದ್ದಾರೆ. “ಅಮರಿಂದರ್‌ ಅವರು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಆಣತಿಯಂತೆ, ಪಂಜಾಬ್‌ ಸರ್ಕಾರವನ್ನು ನಡೆಸುತ್ತಿದ್ದರು. ಹಾಗಾಗಿ, ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಕ್ಕಿಳಿಸಲಾಯಿತು” ಎಂದು ತಿಳಿಸಿದರು.

“ಆಪ್‌’ ಆರೆಸ್ಸೆಸ್‌ನಿಂದಲೇ ಒಡಮೂಡಿದ್ದು!
ಇದೇ ವೇಳೆ, ಆಮ್‌ ಆದ್ಮಿ ಪಾರ್ಟಿಯ ವಿರುದ್ಧವೂ ಹರಿಹಾಯ್ದ ಅವರು, ಆಪ್‌ ಪಕ್ಷವು ಆರ್‌ಎಸ್‌ಎಸ್‌ನಿಂದಲೇ ಒಡಮೂಡಿದ ಪಕ್ಷವಾಗಿದೆ ಎಂದು ಹೇಳಿದ್ದಾರೆ. “”ದೆಹಲಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿ ಮಾಡಿರುವುದಾಗಿ ಆಪ್‌ ಪಕ್ಷ ಹೇಳುತ್ತಿದೆ. ಆದರೆ, ಅಲ್ಲಿ ಯಾವುದೇ ಬದಲಾವಣೆಯಾಗಿಲ್ಲ” ಎಂದು ಟೀಕಿಸಿದರು.

ಉತ್ತರ ಪ್ರದೇಶದಲ್ಲಿ ಇಂದು 2ನೇ ಹಂತದ ಮತದಾನ
ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಎರಡನೇ ಹಂತದ ಮತದಾನ ಸೋಮವಾರ ನಡೆಯಲಿದೆ. ಒಂಭತ್ತು ಜಿಲ್ಲೆಗಳ 55 ವಿಧಾನಸಭಾ ಕ್ಷೇತ್ರಗಳಲ್ಲಿ ಜನರು ತಮ್ಮ ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌, ಸಂಜಯ್‌ ಗಾರ್ಗ್‌ ಬಿಜೆಪಿಯ ಬ್ರಿಜೇಶ್‌ ಸಿಂಗ್‌ ರಾವತ್‌, ಸುರೇಶ್‌ ಕುಮಾರ್‌ ಖನ್ನಾ ಮುಂತಾದ ಧುರೀಣರು ಕಣದಲ್ಲಿದ್ದಾರೆ.

ಪ್ರಮುಖ ಕ್ಷೇತ್ರಗಳು:
2ನೇ ಹಂತದಲ್ಲಿ ಕೆಲವು ಕ್ಷೇತ್ರಗಳು ಗಮನ ಸೆಳೆದಿವೆ. ಅಲ್ಲಿ ವಿವಿಧ ಪಕ್ಷಗಳ ಗಣ್ಯ ನೇತಾರರು ಸ್ಪರ್ಧೆಗಿಳಿದಿದಿದ್ದಾರೆ. ಡಿಯೋಬಂದ್‌ ಮುಸ್ಲಿಂ ಬಾಹುಳ್ಯವಿರುವ ಕ್ಷೇತ್ರ. ಆದರೂ, ಇಲ್ಲಿ ಪ್ರಮುಖ ಪಕ್ಷಗಳಾದ ಸಮಾಜವಾದಿ ಹಾಗೂ ಬಿಜೆಪಿ, ಹಿಂದೂ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿವೆ. ಬಿಜೆಪಿಯಿಂದ ಬ್ರಿಜೇಶ್‌ ಸಿಂಗ್‌ ರಾವತ್‌ ಕಣಕ್ಕಿಳಿದಿದ್ದರೆ, ಸಮಾಜವಾದಿ ಪಕ್ಷದಿಂದ ಕಾರ್ತಿಕೇಯ ರಾಣಾ ಕಾಲಿಟ್ಟಿದ್ದಾರೆ.

ರಾಂಪುರದಲ್ಲಿ ಸಮಾಜವಾದಿ ಪಕ್ಷದ ಧುರೀಣ ಆಜಂ ಖಾನ್‌, ಕಾಂಗ್ರೆಸ್‌ನ ಖಾಜಿಂ ಅಲಿ ಖಾನ್‌ ಅಲಿಯಾಸ್‌ ನವೇದ್‌ ಖಾನ್‌, ಬಿಜೆಪಿಯ ಆಕಾಶ್‌ ಸಕ್ಸೇನಾ ಕಣದಲ್ಲಿದ್ದಾರೆ.

ಶಹಜಹಾನ್‌ ಕ್ಷೇತ್ರದಲ್ಲಿ ಹಾಲಿ ಶಾಸಕ, ಬಿಜೆಪಿ ವತಿಯಿಂದ 1987ರಿಂದ 2017ರವರೆಗೆ ಸತತವಾಗಿ ಗೆಲ್ಲುತ್ತಾ ಬಂದಿರುವ ಸುರೇಶ್‌ ಕುಮಾರ್‌ ಖನ್ನಾ ಪ್ರಮುಖ ಅಭ್ಯರ್ಥಿ. ಅವರ ವಿರುದ್ಧ ಸಮಾಜವಾದಿಯಿಂದ ತನ್ವೀರ್‌ ಖಾನ್‌, ಬಿಎಸ್‌ಪಿಯಿಂದ ಮೊಹಮ್ಮದ್‌ ಅಸ್ಲಾಂ ಖಾನ್‌ ಕಣಕ್ಕಿಳಿದಿದ್ದಾರೆ.

ಬಿಎಸ್‌ಪಿ ಪಟ್ಟಿ ಬಿಡುಗಡೆ
ಉತ್ತರ ಪ್ರದೇಶದಲ್ಲಿ ನಡೆಯಲಿರುವ 7ನೇ ಹಂತದ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಕಣಕ್ಕಿಳಿಯಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಎಸ್‌ಪಿ, ಭಾನುವಾರ ಬಿಡುಗಡೆ ಮಾಡಿದೆ. ಆಜಂಗಢ, ಮೌ, ಜುವಾನ್‌ಪುರ್‌, ಗಾಜಿಯಾಬಾದ್‌, ಚಾಂದೌಲಿ, ವಾರಣಾಸಿ, ಬದೋಹಿ, ಮಿರ್ಜಾಪುರ್‌, ಸೋನ್‌ಭದ್ರಾ ಜಿಲ್ಲೆಗಳಲ್ಲಿ ನಡೆಯಲಿರುವ ಚುನಾವಣೆಗಾಗಿ 47 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಚುನಾವಣೆ:
ಉತ್ತರ ಪ್ರದೇಶದಲ್ಲಿ ಸೋಮವಾರ 2ನೇ ಹಂತದ ಮತದಾನ ನಡೆಯುವುದರ ಜೊತೆಗೆ, ಗೋವಾ, ಮಣಿಪುರ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಸೋಮವಾರದಂದೇ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next