Advertisement

ಕಾಶ್ಮೀರಿ ಪ್ರತ್ಯೇಕತಾವಾದಿಗಳ ಲಷ್ಕರ್‌ ನಂಟು ಬಯಲಿಗೆ

07:25 AM Sep 24, 2017 | |

ನವದೆಹಲಿ/ಶ್ರೀನಗರ: “ಪಾಕಿಸ್ತಾನ ಮೂಲದ ಭಯೋತ್ಪಾದಕ, ಮುಂಬೈ ದಾಳಿಯ ಮಾಸ್ಟರ್‌ವೆುಡ್‌ ಹಫೀಜ್‌ ಸಯೀದ್‌ ಜತೆ ನನಗೆ ನಂಟಿರುವುದು ನಿಜ. ಪಾಕ್‌ನ ಹವಾಲಾ ದಂಧೆಕೋರರ ಜೊತೆ ನಾನು ವಹಿವಾಟು ನಡೆಸುತ್ತಿರುವುದೂ ಸತ್ಯ.’

Advertisement

ಇಂತಹುದೊಂದು ಆಘಾತಕಾರಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದು ಕಾಶ್ಮೀರದ ಪ್ರತ್ಯೇಕತಾವಾದಿ ಶಬೀರ್‌ ಶಾ. ಉಗ್ರರಿಗೆ ಹಣಕಾಸು ನೆರವು ನೀಡುವ ಉದ್ದೇಶದಿಂದ 2005ರಲ್ಲಿ ನಡೆದ ಅಕ್ರಮ ಹಣಕಾಸು ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಶಬೀರ್‌ ವಿರುದ್ಧ ಜಾರಿ ನಿರ್ದೇಶನಾಲಯ ಶನಿವಾರ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಈ ವಿಚಾರವನ್ನು ಉಲ್ಲೇಖೀಸಲಾಗಿದೆ. ಹೆಚ್ಚುವರಿ ಸೆಷನ್ಸ್‌ ಜಡ್ಜ್ ಸಿದ್ಧಾರ್ಥ್ ಶರ್ಮಾ ಅವರಿಗೆ ಈ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಅದರಲ್ಲಿ ಹವಾಲಾ ಡೀಲರ್‌ಗಳಾದ ಮೊಹಮ್ಮದ್‌ ಅಸ್ಲಾಮ್‌ ವಾನಿಯ ಹೆಸರೂ ಇದೆ. 700 ಪುಟಗಳ ಚಾರ್ಜ್‌ಶೀಟ್‌ ಅನ್ನು ಪರಿಗಣಿಸಿರುವ ಕೋರ್ಟ್‌, 27ರಂದು ಆರೋಪಿಗಳನ್ನು ಹಾಜರುಪಡಿಸುವಂತೆ ಆದೇಶಿಸಿದೆ.

ಐಟಿಆರ್‌ ಸಲ್ಲಿಸಿಲ್ಲ: ನನಗೆ ನನ್ನದೇ ಆದ ಆದಾಯದ ಮೂಲವಿಲ್ಲ. ಈವರೆಗೆ ಒಮ್ಮೆಯೂ ಆದಾಯ ತೆರಿಗೆ 
ರಿಟರ್ನ್ ಸಲ್ಲಿಸಿಲ್ಲ ಎಂದೂ ಶಬೀರ್‌ ವಿಚಾರಣೆ ವೇಳೆ ಬಾಯಿ ಬಿಟ್ಟಿರುವುದಾಗಿ ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಆತ ತನ್ನ ಪಕ್ಷಕ್ಕಾಗಿ ಸ್ಥಳೀಯರಿಂದ ದೇಣಿಗೆ ಪಡೆದಿದ್ದು, ವರ್ಷಕ್ಕೆ 8 ರಿಂದ 10 ಲಕ್ಷ ರೂ. ಸಂಗ್ರಹಿಸುತ್ತಿದ್ದ. ವಿಶೇಷವೆಂದರೆ, ಈ ಎಲ್ಲ ದೇಣಿಗೆಗಳನ್ನೂ ನಗದುರೂಪ ದಲ್ಲೇ ಪಡೆಯುತ್ತಿದ್ದ. ಈ ಕುರಿತ ಯಾವುದೇ ದಾಖಲೆ ಆತನಲ್ಲಿಲ್ಲ ಎಂದು ಇ.ಡಿ. ಆರೋಪಿಸಿದೆ. ಜಾಗತಿಕ ಭಯೋತ್ಪಾದಕ ಹಫೀಜ್‌ ಸಯೀದ್‌ ಜೊತೆ ಶಬೀರ್‌ ನಿರಂತರ ಸಂಪರ್ಕದಲ್ಲಿದ್ದ. ಜನವರಿಯಲ್ಲಿ ಕೂಡ ಫೋನ್‌ನಲ್ಲಿ ಸಂಭಾಷಣೆ ನಡೆಸಿದ್ದ. ಹವಾಲಾ ಹಣವನ್ನು ದೆಹಲಿಯಲ್ಲಿ ಸಂಗ್ರಹಿಸಿ ಶ್ರೀನಗರಕ್ಕೆ ತರಲು ವಾನಿಯ ಸಹಾಯ ಪಡೆಯುತ್ತಿದ್ದ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋಮು ಕಿಡಿ ಹಚ್ಚುತ್ತಿರುವ ಪಾಕ್‌: ಕಣಿವೆ ರಾಜ್ಯದಲ್ಲಿ ಕೋಮುವಾದದ ವಿಷಬೀಜ ಬಿತ್ತಲು ಪಾಕಿಸ್ತಾನವು ವ್ಯವಸ್ಥಿತ ಸಂಚು ರೂಪಿಸುತ್ತಿದೆ ಎಂಬ ಆತಂಕಕಾರಿ ಅಂಶವೊಂದು ಇದೀಗ ಹೊರಬಿದ್ದಿದೆ. ಜಿನೇವಾದಲ್ಲಿ ನಡೆದ ಮಾನವ ಹಕ್ಕುಗಳ ಮಂಡಳಿಯ 36ನೇ ಆವೃತ್ತಿಯಲ್ಲಿ ಆ್ಯಮ್‌ಸ್ಟರ್‌ಡ್ಯಾಂ ಮೂಲದ ದಕ್ಷಿಣ ಏಷ್ಯಾ ಅಧ್ಯಯನಕ್ಕಾಗಿ ಇರುವ ಯುರೋಪಿಯನ್‌ ಪ್ರತಿಷ್ಠಾನದ ನಿರ್ದೇಶಕ, ಕಾಶ್ಮೀರಿ ಹೋರಾಟಗಾರ ಜುನೈದ್‌ ಖುರೇಷಿ ಅವರು ಈ ವಿಚಾರ ಬಹಿರಂಗಪಡಿಸಿದ್ದಾರೆ. ಪಾಕ್‌ ಗುಪ್ತಚರ ಸಂಸ್ಥೆಗಳು ನೀಡುತ್ತಿರುವ ಹಣಕಾಸು ಮತ್ತು ಸೇನಾ ನೆರವನ್ನು ಪಡೆದು ಉಗ್ರ ಸಂಘಟನೆಗಳು ಕಾಶ್ಮೀರದಿಂದ ಕಾಶ್ಮೀರಿ ಪಂಡಿತರನ್ನು ನಿರ್ಮೂಲನೆ ಮಾಡಲು ಸಂಚು ರೂಪಿಸಿದೆ ಎಂದಿದ್ದಾರೆ ಖುರೇಷಿ. ಜತೆಗೆ, ಪಾಕಿಸ್ತಾನವು ಈ ರೀತಿ ಉಗ್ರರ ರಫ್ತು ಮಾಡುತ್ತಿದ್ದರೆ, ನೀವು ಎಷ್ಟು ದಿನ ಹೀಗೇ ಮೌನವಾಗಿ ಕುಳಿತಿರುತ್ತೀರಿ ಎಂದೂ ವಿಶ್ವಸಂಸ್ಥೆಯನ್ನು ಪ್ರಶ್ನಿಸಿದ್ದಾರೆ. “ನಾನೊಬ್ಬ ಸುನ್ನಿ ಕಾಶ್ಮೀರಿ ಮುಸ್ಲಿಂ. ನನ್ನ ರಾಜ್ಯವು ಕೇವಲ ಸುನ್ನಿ ಮುಸ್ಲಿಮರ ಸ್ವತ್ತಲ್ಲ. ಅದು ಕಾಶ್ಮೀರಿ ಪಂಡಿತರು, ಬೌದ್ಧರು, ಶಿಯಾ ಮುಸ್ಲಿಮರು… ಹೀಗೆ ಎಲ್ಲರಿಗೂ ಸಮಾನವಾಗಿ ಸೇರಿದ್ದು,’ ಎಂದೂ ಖುರೇಷಿ ಹೇಳಿದ್ದಾರೆ.

ಪಾಕ್‌ನಿಂದ ಶೆಲ್‌ ದಾಳಿ: ಯೋಧ ಸೇರಿ 7 ಮಂದಿಗೆ ಗಾಯ
ಜಮ್ಮು, ಸಾಂಬಾ ಮತ್ತು ಪೂಂಛ… ಜಿಲ್ಲೆಯ ಗಡಿ ಶಿಬಿರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೇನಾ ಪಡೆಯು ಶುಕ್ರವಾರ ರಾತ್ರಿಯಿಡೀ ಶೆಲ್‌ ದಾಳಿ ನಡೆಸಿದೆ. ಪರಿಣಾಮ ಬಿಎಸ್‌ಎಫ್ ಯೋಧ ಸೇರಿ 7 ಮಂದಿ ಗಾಯಗೊಂಡಿದ್ದಾರೆ. ಪಾಕ್‌ನ ನಿರಂತರ ದಾಳಿಗೆ ಹೆದರಿ ಗಡಿ ಜಿಲ್ಲೆಯ ನಾಗರಿಕರೆಲ್ಲ ಆತಂಕಕ್ಕೊಳಗಾಗಿದ್ದು, ಮನೆ ಬಿಟ್ಟು ತೆರಳುತ್ತಿದ್ದಾರೆ. ಇದೇ ವೇಳೆ, ಪಾಕಿಸ್ತಾನ ನೌಕಾಪಡೆಯು ಶನಿವಾರ ಉತ್ತರ ಅರಬ್ಬೀ ಸಮುದ್ರದಲ್ಲಿ ನೌಕೆ ನಿಗ್ರಹ ಕ್ಷಿಪಣಿಯೊಂದರ ಪರೀಕ್ಷೆ ನಡೆಸಿದೆ. ಸಮುದ್ರ ಗಡಿಗಳು ಮತ್ತು ದೇಶದ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶ ದಿಂದ ಈ ಪರೀಕ್ಷೆ ನಡೆಸಲಾಗಿದೆ ಎಂದಿದೆ ಪಾಕ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next