Advertisement

ವಿಶೇಷ ಪೂಜೆ ಹೆಸರಲ್ಲಿ ಲೈಂಗಿಕ ಕಿರುಕುಳ!

12:45 AM Sep 12, 2019 | Lakshmi GovindaRaju |

ಬೆಂಗಳೂರು: ಜಾತಕಫ‌ಲ ದೋಷ ನಿವಾರಣೆಗೆ “ಮಾಂಗಲ್ಯ ಬಳ್ಳಿ’ ಎಂಬ ವಿಶೇಷ ಪೂಜೆ ಮಾಡುವ ನೆಪದಲ್ಲಿ ವೃದ್ಧ ಜ್ಯೋತಿಷಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಸಂಬಂಧ ಸಂತ್ರಸ್ತೆ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ನೀಡಿದ ದೂರಿನನ್ವಯ ಆರೋಪಿ ಗಣೇಶ್‌ ಆಚಾರಿ (65), ಆತನ ಮಗ ಮಣಿಕಂಠ ಆಚಾರಿ (30) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಹುಳಿಮಾವಿನಲ್ಲಿ ಮಣಿಕಂಠ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಲೆಮರೆಸಿಕೊಂಡಿರುವ ಗಣೇಶ್‌ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳು ಇನ್ನೂ ಹಲವು ಮಹಿಳೆಯರಿಗೆ “ವಿಶೇಷ ಪೂಜೆ’ ನೆಪದಲ್ಲಿ ವಂಚನೆ, ಲೈಂಗಿಕ ಕಿರುಕುಳ ನೀಡಿರುವ ಸಾಧ್ಯತೆಯಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

ಆಸ್ಟ್ರೇಲಿಯಾದಿಂದ ಒಂದು ವರ್ಷದ ಹಿಂದೆ ನಗರಕ್ಕೆ ಬಂದಿರುವ ಸಂತ್ರಸ್ತೆ, ನಗರದಲ್ಲಿ ಪೋಷಕರೊಂದಿಗೆ ವಾಸವಿದ್ದು, ಐಟಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಗಸ್ಟ್‌ನಲ್ಲಿ ಸಂತ್ರಸ್ತೆ ಪೋಷಕರಿಗೆ ಗಣೇಶ್‌ ಹಾಗೂ ಆತನ ಮಗನ ಪರಿಚಯವಾಗಿತ್ತು.

ಈ ವೇಳೆ ಮನೆಗೆ ಬಂದ ಗಣೇಶ್‌ ಆಚಾರಿ, ಸಂತ್ರಸ್ತೆಯ ಜಾತಕ ಮಾಹಿತಿ ಪಡೆದು, “ನಿಮ್ಮ ಮಾಜಿ ಪತಿ ನಿಮ್ಮ ಮೇಲೆ ವಾಮಾಚಾರ ಮಾಡಿಸಿದ್ದಾನೆ. ಇದನ್ನು ನಿವಾರಿಸಲು ವಿಶೇಷ ಪೂಜೆ ಮಾಡಬೇಕು ಎಂದು ನಂಬಿಸಿ, 40 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ.

ಪೂರ್ವ ಜನ್ಮದ ರಹಸ್ಯ: ಇದಾದ ಕೆಲದಿನಗಳಲ್ಲಿ ಮತ್ತೂಂದು ಕಥೆಕಟ್ಟಿದ ಗಣೇಶ್‌, ನೀವು ಹಿಂದಿನ ಜನ್ಮದಲ್ಲಿ ವೇಶ್ಯೆಯಾಗಿದ್ದಿರಿ. ಹೀಗಾಗಿ ನಿಮ್ಮ ಮದುವೆ ಗಟ್ಟಿಯಾಗಿ ಉಳಿದಿಲ್ಲ. ಮುಂದಿನ ದಾಂಪತ್ಯ ಜೀವನವೂ ಸುಖಕರವಾಗಿರುವುದಿಲ್ಲ. ಐವರು ಪುರುಷರೊಂದಿಗೆ ನಿಮಗೆ ಬಂಧವಿದೆ. ಅದನ್ನು ಕೊನೆಗಾಣಿಸಬೇಕಾದರೆ ವಿಶೇಷ ಸರ್ಪದೋಷ ಪೂಜೆ ಮಾಡಬೇಕು ಎಂದು ನಂಬಿಸಿದ್ದ. ಇದನ್ನು ಕೂಡ ಸಂತ್ರಸ್ತೆ ನಂಬಿದ್ದರು.

Advertisement

ಐದು ಬಾರಿ “ಮಾಂಗಲ್ಯ ಬಳ್ಳಿ’!: ಸೆ.7ರಂದು ಪೂಜೆ ನೆರವೇರಿಸಲು ಸಂತ್ರಸ್ತೆ ಮನೆಗೆ ಬಂದಿದ್ದ ಗಣೇಶ್‌ ಹಾಗೂ ಮಣಿಕಂಠ, ಕೆಲಹೊತ್ತು ಪೂಜೆ ಮಾಡಿದ್ದಾರೆ. ಬಳಿಕ ಗಣೇಶ್‌ ಸಂತ್ರಸ್ತೆಯನ್ನು ಕರೆದು ದೋಷ ನಿವಾರಣೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆ ಮಾಡಬೇಕು ಎಂದು ಹೇಳಿ ಸೆ.8ರಂದು ತನ್ನೊಂದಿಗೆ ಕರೆದೊಯ್ದಿದ್ದ. ಕುಕ್ಕೆಯ ಹೋಟೆಲ್‌ನಲ್ಲಿ ಕೊಠಡಿ ಮಾಡಿದ್ದ ಗಣೇಶ್‌, ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಹೊರಗೆ ಕಳುಹಿಸಿದ್ದಾನೆ.

ಬಳಿಕ ಹಿಂದಿನ ಜನ್ಮದ ದೋಷ, ಪತಿಯ ಮಾಟಮಂತ್ರ ಕೊನೆಯಾಗಬೇಕಾದರೆ “ಮಾಂಗಲ್ಯ ಬಳ್ಳಿ’ ಹೆಸರಿನ ವಿಶೇಷ ಪೂಜೆ ನೆರವೇರಿಸಬೇಕು. ಐದು ಬಾರಿ ತಾಳಿ ಕಟ್ಟುತ್ತೇನೆ. ಐದು ಬಾರಿಯೂ ದೈಹಿಕ ಸಂಪರ್ಕ ನಡೆಸುತ್ತೇನೆ. ಈ ವೇಳೆ ನನ್ನನ್ನು ದೇವರು ಎಂದುಕೊಂಡು ಸಹಕರಿಸಬೇಕು ಎಂದು ಕಿರುಕುಳ ನೀಡಿದ್ದಾನೆ. ಗಣೇಶ್‌ ಆಚಾರಿಯ ಈ ವಿಚಿತ್ರ ಬೇಡಿಕೆ ನಿರಾಕರಿಸಿದ ಸಂತ್ರಸ್ತೆ ಕೊಠಡಿಯಿಂದ ಹೊರಬಂದು ಪೋಷಕರಿಗೆ ವಿಷಯ ತಿಳಿಸಿದ್ದಾರೆ.

ಕೂಡಲೇ ಅಲ್ಲಿಂದ ನಗರಕ್ಕೆ ಮರಳಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಗಣೇಶ್‌, ಸಂತ್ರಸ್ತೆ ಹಾಗೂ ಆಕೆಯ ಪೋಷಕರ ಮಾನಸಿಕ ದೌರ್ಬಲ್ಯ ದುರುಪಯೋಗ ಪಡಿಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ. ಸಾರ್ವಜನಿಕರು ಮಾಟಮಂತ್ರ ಮೂಢನಂಬಿಕೆ ನೆಪದಲ್ಲಿ ವಂಚಿಸುವವರ ಬಗ್ಗೆ ಎಚ್ಚರ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

* ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next