ಕೆ.ಆರ್.ನಗರ: ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನ ರಕ್ಷಣೆಗೆ ನಿಂತ ಸಂತ ಜೋಸೆಫ್ ಆಡಳಿತ ಮಂಡಳಿ ಮತ್ತು ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ವಿರುದ್ಧ ಮಹಿಳಾ ಸಂಘಟನೆ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳು ಸೇರಿ ಶಾಲೆಯ ಮುಂಭಾಗ ಪ್ರತಿಭಟಿಸಿದರು.
ಪಟ್ಟಣದ ಸಂತಜೋಸೆಫ್ ಶಾಲೆ ಮುಂಭಾಗ ವಿವಿಧ ಸಂಘಟನೆಗಳು ಜೊತೆಗೂಡಿ ಪ್ರತಿಭಟಿಸಿ, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಬರುವ ತನಕ ಪ್ರತಿಭಟನೆ ಕೈಬಿಡಲ್ಲ ಎಂದು ಪಟ್ಟ ಹಿಡಿದರು.
ಈ ವೇಳೆ ಮಾತನಾಡಿದ ಪ್ರತಿಭಟನಕಾರರು, ಶಾಲೆಯಲ್ಲಿ ಆರೋಪಿ ಶಿಕ್ಷಕನನ್ನು ಎಳೆದು ಪೊಲೀಸ್ ಇಲಾಖೆಗೆ ಒಪ್ಪಿಸಿದ ಪೋಷಕರ ಮೇಲೆ ಶಿಕ್ಷಕನ ಸಹೋದ್ಯೊಗಿ ಶಿಕ್ಷಕಿ ನೀಡಿದ ದೂರನ್ನು ದಾಖಲಿಸಿದ ಪೊಲೀಸರು ದೂರನ್ನು ಕೈಬಿಡಬೇಕು ಮತ್ತು ಆಡಳಿತ ಮಂಡಳಿ ಆರೋಪಿ ಶಿಕ್ಷಕನ ವಿರುದ್ಧ ಕ್ರಮಕೈಗೊಳ್ಳದೇ ಪೋಷಕರ ವಿರುದ್ಧ ನೀಡಿರುವ ದೂರನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ಪೋಲೀಸ್ ಇಲಾಖೆಯವರು ರಾಜಕೀಯ ಒತ್ತಡಕ್ಕೆ ಮಣಿದು ಶಿಕ್ಷಕನ ವಿರುದ್ಧ ದೂರನ್ನು ಸಡಿಲಗೊಳಿಸಿರುವುದು ಹಾಗೂ ಆಡಳಿತ ಮಂಡಳಿಯು ನೊಂದ ಬಾಲಕಿಗೆ ಪರಿಹಾರ ಮತ್ತು ಚಿಕಿತ್ಸೆಯ ಪೂರ್ಣವೆಚ್ಚವನ್ನು ಭರಿಸುವಂತೆ ಘೋಷಣೆ ಕೂಗುತ್ತಾ ಬಿತ್ತಿ ಪತ್ರಗಳನ್ನು ಪ್ರದರ್ಶಿಸುತ್ತಾ ಪಟ್ಟುಹಿಡಿದರು.
ಶಾಸಕರ ಭರವಸೆ: ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಶಾಸಕ ಸಾ.ರಾ.ಮಹೇಶ್, ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ, ನಂತರ ಆಡಳಿತ ವರ್ಗದವರಿಂದ ಪೋಷಕರ ವಿರುದ್ಧ ನೀಡಿರುವ ದೂರನ್ನು ವಾಪಸ್ ಪಡೆಯಬೇಕು ಮತ್ತು ಆರೋಪಿ ಶಿಕ್ಷಕನನ್ನು ಹುದ್ದೆಯಿಂದ ವಜಾ ಮಾಡಬೇಕೆಂದು ತಿಳಿಸಿದರಲ್ಲದೆ, ನೊಂದ ಬಾಲಕಿಯ ಚಿಕಿತ್ಸೆಯ ವೆಚ್ಚವನ್ನು ಸಂಸ್ಥೆ ಭರಿಸಬೇಕೆಂದು ಹೇಳಿದರು.
ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯ ಸುಬ್ರಹ್ಮಣ್ಯ, ರವೀಶ್, ನಾಗೇಶ್, ಕೀರ್ತಿ, ಪೂರ್ಣಿಮ ನರೇಂದ್ರಬಾಬು, ಜಯಕರ್ನಾಟಕ ಸಂಘಟನೆಯ ರುದ್ರೇಶ್, ಅನಿಲ್‌ಗೌಡ, ಸಂತೋಷ್, ಉಮೇಶ್, ಬಾಲಕಿಯ ಪೋಷಕರು ಮತ್ತು ವಿವಿಧ ಸಂಘಟನೆಯ ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು.