Advertisement

ನೀರಿನ ಪೈಪ್‌ಲೈನ್‌ ಮಧ್ಯದಲ್ಲಿಯೇ ಬಿಟ್ಟು ಚರಂಡಿ ಕಾಮಗಾರಿ!

10:48 AM Apr 24, 2022 | Team Udayavani |

ಪಡೀಲ್‌: ಮಳೆನೀರು ಹರಿಯಲು ನಿರ್ಮಿಸುವ ಚರಂಡಿಯು ಯಾವುದೇ ಅಡೆ ತಡೆ ಇಲ್ಲದೆ ನಿರ್ಮಾಣವಾದರೆ ಮಳೆ ನೀರು ಸರಾಗವಾಗಿ ಹರಿಯಲು ಅನುಕೂಲವಾಗುತ್ತದೆ; ಆದರೆ ಇಲ್ಲೊಂದು ಕಡೆ ಹಳೆಯ ಕುಡಿಯುವ ನೀರಿನ ಪೈಪ್‌ಲೈನ್‌ ಅನ್ನು ಮಧ್ಯೆ ಇರಿಸಿ ಚರಂಡಿ ನಿರ್ಮಿಸುವ ಕಾಮಗಾರಿ ನಡೆಸಲಾಗುತ್ತಿದೆ!

Advertisement

ಪಡೀಲ್‌ ಸಮೀಪದ ನಾಗುರಿ ಮಾರುಕಟ್ಟೆ ಇರುವ ಭಾಗದಲ್ಲಿ ಇಂತಹ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಮಳೆಗಾಲದಲ್ಲಿ ಮತ್ತೂಂದು ಕೃತಕ ಸಮಸ್ಯೆ ಎದುರಾಗುವ ಎಲ್ಲ ಸಾಧ್ಯತೆಗಳಿವೆ. ಒಂದು ವೇಳೆ ಪೈಪ್‌ಲೈನ್‌ಗೆ ಹಾನಿಯಾದರೆ ಮಳೆ ನೀರು ಪೈಪ್‌ನೊಳಗೆ ಸೇರುವ ಆತಂಕವಿದೆ!

ಸುಮಾರು 50 ವರ್ಷ ಹಳೆಯ ಮಂಗಳೂರಿಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಲೈನ್‌ ಪಡೀಲ್‌ ಜಂಕ್ಷನ್‌ ಭಾಗದಿಂದ ಪಂಪ್‌ವೆಲ್‌ ರಸ್ತೆಯ ಪರಿಧಿಯಲ್ಲಿ ಸಾಗಿಬಂದಿದೆ. ಇಲ್ಲಿನ ಕೆಲವೆಡೆ ರಸ್ತೆ ಮಧ್ಯೆ, ಬದಿಯಲ್ಲಿ ಮುಖ್ಯ ಕೊಳವೆ ಪೈಪ್‌ಲೈನ್‌ ಇದೆ. ಸದ್ಯ ಪಡೀಲ್‌ ವ್ಯಾಪ್ತಿಯಲ್ಲಿ ಸ್ಮಾಟ್‌ಸಿಟಿಯಿಂದ ಚರಂಡಿ ಕಾಮಗಾರಿ ನಡೆಯುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಕೆಲಸ ಮಾಡಲಾಗುತ್ತಿದೆ. ಇದರಂತೆ ಒಂದು ಕಡೆ ಚರಂಡಿ ಹೋಗುವ ಭಾಗದಲ್ಲಿ ನೀರಿನ ಪೈಪ್‌ಲೈನ್‌ ಇದೆ. ಇಲ್ಲಿ ಪೈಪ್‌ಲೈನ್‌ ಬಿಟ್ಟು ಚರಂಡಿಯನ್ನು ಪ್ರತ್ಯೇಕವಾಗಿ ಮಾಡಬೇಕಾದ ಅಗತ್ಯವಿತ್ತು.

ಆದರೆ ಅದನ್ನು ಬಿಟ್ಟು ಹಾಲಿ ನೀರಿನ ಪೈಪ್‌ಲೈನ್‌ ಹಾದು ಹೋಗುವ ಭಾಗದಲ್ಲಿಯೇ ಚರಂಡಿ ನಿರ್ಮಿಸಲು ಮುಂದಾಗಿರುವುದು ಸ್ಥಳೀಯರ ಆಕ್ಷೇಪಕ್ಕೆ ಕಾರಣವಾಗಿದೆ. ಮುಂದೆ ಮಳೆ ನೀರು ಹರಿಯಲು ಇಲ್ಲಿ ಕುಡಿಯುವ ನೀರಿನ ಪೈಪ್‌ ಲೈನ್‌ ಅಡ್ಡಿಯಾಗುವ ಪ್ರಮೇಯ ಎದುರಾಗಿದೆ.

ಚರಂಡಿ ಅಗಲ’ ಮಾಡಲು ಐಡಿಯಾ!

Advertisement

ಸ್ಮಾರ್ಟ್‌ಸಿಟಿ ಅಧಿಕಾರಿಗಳ ಪ್ರಕಾರ ಪಡೀಲ್‌ ವ್ಯಾಪ್ತಿಯಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ. ಒಂದು ಕಡೆ ನೀರಿನ ಪೈಪ್‌ ಚರಂಡಿ ಮಧ್ಯೆ ಹಾದು ಹೋಗಿದೆ ಎಂಬ ಬಗ್ಗೆ ಮಾಹಿತಿ ಬಂದಿದೆ. ಹೀಗಾಗಿ ಇಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಚರಂಡಿಯನ್ನು ಮತ್ತಷ್ಟು ಅಗಲ ಮಾಡಲು ಸೂಚಿಸಲಾಗುವುದು. ಪೈಪ್‌ಲೈನ್‌ಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದಿದ್ದಾರೆ.

ಚರಂಡಿ ಕೆಲಸ ಮುಗಿದ ಬಳಿಕ ರಸ್ತೆ ಕಾಮಗಾರಿ

ಪಂಪ್‌ವೆಲ್‌ನಿಂದ ಪಡೀಲ್‌ವರೆಗೆ ನಗರ ಪ್ರವೇಶಿಸುವ ಪ್ರಮುಖ ರಸ್ತೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಂಕ್ರೀಟ್‌ ಮುಖೇನ ಅಭಿವೃದ್ಧಿಪಡಿಸಲು ಈಗಾಗಲೇ ನಿರ್ಧರಿಸಲಾಗಿದೆ. 2.8 ಕಿ.ಮೀ. ರಸ್ತೆ 24 ಮೀ. ವಿಸ್ತರಣೆಗೊಂಡು ನಿರ್ಮಾಣವಾಗಲಿದೆ. ಇದರ ಪೂರ್ವಭಾವಿಯಾಗಿ ರಸ್ತೆಯ ಇಕ್ಕೆಲಗಳಲ್ಲಿ ಮಳೆ ನೀರು ಹರಿಯುವ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ ಪಡೀಲ್‌ ಜಂಕ್ಷನ್‌ನಿಂದ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಮೀಪದವರೆಗೆ ಇಕ್ಕೆಲಗಳಲ್ಲಿ ಕಾಮಗಾರಿ ವೇಗ ಪಡೆದುಕೊಂಡಿದೆ. ಮುಂದೆ ವಿದ್ಯುತ್‌ ಕಂಬ, ಕೆಲವು ಮರಗಳ ತೆರವು ನಡೆಯುವ ಸಾಧ್ಯತೆಯಿದೆ.

ಪರಿಶೀಲಿಸಿ ಕ್ರಮಕ್ಕೆ ಸೂಚನೆ

ಪಡೀಲ್‌ ಜಂಕ್ಷನ್‌ ಭಾಗದಲ್ಲಿ ಸ್ಮಾರ್ಟ್‌ ಸಿಟಿಯಿಂದ ಚರಂಡಿ ಕಾಮಗಾರಿ ನಡೆಸುವಾಗ ಕುಡಿಯುವ ನೀರಿನ ಪೈಪ್‌ ಲೈನ್‌ ಚರಂಡಿ ಮಧ್ಯೆಯೇ ಇರುವ ವಿಚಾರ ಗಮನಕ್ಕೆ ಬಂದಿದೆ. ಈ ಬಗ್ಗೆ ಸ್ಥಳ ಸಮೀಕ್ಷೆ ನಡೆಸಿ ಪೂರಕ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು. ಅಕ್ಷಯ್‌ ಶ್ರೀಧರ್‌, ಆಯುಕ್ತರು, ಮನಪಾ

Advertisement

Udayavani is now on Telegram. Click here to join our channel and stay updated with the latest news.

Next