Advertisement

ಮುನಿದವರ ಕಣ್ಣೀರ ಮಧ್ಯೆ ಹಲವು ನಿರ್ಣಯ ಅಂಗೀಕಾರ 

11:14 AM Jun 30, 2017 | Team Udayavani |

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರ ಶಾಸಕ ಹಾಗೂ ಮೂವರು ಮಹಿಳಾ ಕಾರ್ಪೊರೇಟರ್‌ಗಳ ನಡುವಿನ ಸಂಘರ್ಷಕ್ಕೆ ಬಿಬಿಎಂಪಿ  ಸಾಮಾನ್ಯ ಸಭೆ ಸತತ ಎರಡನೇ ಬಾರಿಗೆ ಬಲಿಯಾಗಿದೆ. ತಮ್ಮ ಸಮಸ್ಯೆ ನಿವಾರಿಸುವಂತೆ ಕಾರ್ಪೊರೇಟರ್‌ಗಳಾದ ಮಂಜುಳಾ ನಾರಾಯಣ ಸ್ವಾಮಿ, ಆಶಾ ಸುರೇಶ್‌, ಮಮತಾ ವಾಸುದೇವ್‌ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಮೂವರು ಸದಸ್ಯರೂ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು. ಇದೆಲ್ಲದರ ನಡುವೆ ಪಾಲಿಕೆಯ ಸಭೆಯಲ್ಲಿ ನಾಲ್ಕು ಪ್ರಮುಖ ನಿರ್ಣಯಗಳಿಗೆ ಆಡಳಿತ ಪಕ್ಷ ಕಾಂಗ್ರೆಸ್‌ ಅನುಮೋದನೆ ಪಡೆಯಿತು. ಸಭೆಯನ್ನು ಸುಸೂತ್ರವಾಗಿ ನಡೆಸಲು ನೆರವು ನೀಡುವಂತೆ ಬುಧವಾರವಷ್ಟೇ ಮೇಯರ್‌ ಜಿ. ಪದ್ಮಾವತಿ ಅವರು ಪ್ರತಿಪಕ್ಷಗಳೊಂದಿಗೆ ಸಂಧಾನ ಸಭೆ ನಡೆಸಿದ್ದರು. ಅದರೆ, ಸಭೆ ಫ‌ಲ ನೀಡಿಲ್ಲ ಎಂಬುದು ಗುರುವಾರದ ಗಲಾಟೆಯಲ್ಲಿ ಜಗಜ್ಜಾಹೀರಾಯಿತು. ಹೀಗಾಗಿ ಸಭೆ ಅರ್ಧ ದಿನಕ್ಕೆ ಬರ್ಕಾಸ್ತುಗೊಂಡಿತು.  

ರಾಜರಾಜೇಶ್ವರಿ ನಗರ ಶಾಸಕರಿಂದ ಆಗುತ್ತಿರುವ ದೌರ್ಜನ್ಯ ಹಾಗೂ ಕಿರುಕುಳಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಮೂವರು ಮಹಿಳಾ ಕಾರ್ಪೊರೇಟರ್‌ಗಳು ಕೌನ್ಸಿಲ್‌ ಹಾಲ್‌ನ ಬಾವಿಗಿಳಿದು ಒತ್ತಾಯಿಸಿದ್ದರಿಂದ ಸಭೆಯಲ್ಲಿ ಗದ್ದಲ-ಕೋಲಾಹಲ ಉಂಟಾಗಿತ್ತು. 

ಸಭೆ ಆರಂಭದಲ್ಲೇ ಬಿಜೆಪಿ ಸದಸ್ಯೆ ಮಮತಾ ವಾಸುದೇವ್‌ ಅವರು, “ನನ್ನ ವಾರ್ಡ್‌ನಲ್ಲಿ ನಾನು 25 ಎಕರೆ ಕೆರೆ ಜಾಗವನ್ನು ಒತ್ತುವರಿ ಮಾಡಿರುವುದಾಗಿ ಆರೋಪ ಮಾಡುವ ಮೂಲಕ ನನ್ನ ತೇಜೋವಧೆಗೆ ಯತ್ನಿಸಲಾಗುತ್ತಿದೆ,’ ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು. 

ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, “ಕೆ.ಬಿ.ಕೋಳಿವಾಡ ಅವರ ಕೆರೆ ಅಧ್ಯಯನ ಸಮಿತಿಯೇ ಕೆರೆ ಒತ್ತುವರಿಯಾಗಿರುವ ಕುರಿತು ಉಲ್ಲೇಖೀಸಿಲ್ಲ. ಆದರೂ, ಬಿಜೆಪಿ ಸದಸ್ಯೆಯ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಕಾಂಗ್ರೆಸ್‌ ಸದಸ್ಯೆ ಆಶಾ ಸುರೇಶ್‌ ಮೇಲೆ 120 ಕೋಟಿ ರೂ. ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಜೆಡಿಎಸ್‌ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ವಿರುದ್ಧ ಲಂಚದ ಆರೋಪ ಮಾಡಲಾಗಿದೆ. ಇದನ್ನು ಸಿಬಿಐಗೆ ವಹಿಸಬೇಕು,’ ಎಂದು ಆಗ್ರಹಿಸಿದರು. 

Advertisement

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌, “ಸದಸ್ಯರು ದೂರು ನೀಡಿದರೆ ಅದನ್ನು ಪರಿಗಣಿಸಿ ಮುಂದಿನ ಕ್ರಮಕ್ಕಾಗಿ ಯಾವುದಾದರೂ ಇಲಾಖೆಗೆ ಕಳುಹಿಸಲಾಗುವುದು,’ ಎಂದರು. ಇದಕ್ಕೊಪ್ಪದ ಬಿಜೆಪಿ ಸದಸ್ಯರು ಮೇಯರ್‌ ಆಗಿದ್ದೂ ನೀವು ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದರು. 

ಇದಕ್ಕೆ ತಿರುಗೇಟು ನೀಡಿದ ಮೇಯರ್‌ ಜಿ.ಪದ್ಮಾವತಿ, “ಸಭೆ ಸುಸೂತ್ರವಾಗಿ ನಡೆಸುವ ಉದ್ದೇಶದಿಂದ, ಮಹಿಳಾ ಸದಸ್ಯರು ಹಾಗೂ ಪಕ್ಷದ ಮುಖಂಡರೊಂದಿಗೆ ಬುಧವಾರ ಸಭೆ ನಡೆಸಲಾಗಿತ್ತು. 15 ದಿನಗಳೊಳಗೆ ಕ್ಷೇತ್ರದಲ್ಲಿ ನಡೆದಿರುವ ಕಾಮಗಾರಿ ವಿವರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೂ ಸಹ ಪಾಲಿಕೆ ಸದಸ್ಯರು ಮತ್ತೆ ತಮ್ಮ ವಯಕ್ತಿಕ ವಿಚಾರಗಳನ್ನು ಇಲ್ಲಿ ತಿಳಿಸಿದರೆ ಅದಕ್ಕೆ ಉತ್ತರಿಸಲು ಆಗುವುದಿಲ್ಲ,’ ಎಂದರು. 

ಇದರಿಂದ ಅಸಮಧಾನಗೊಂಡ ಬಿಜೆಪಿ ಸದಸ್ಯರು ಸಭಾತ್ಯಾಗ್ಯ ಮಾಡಿದರು ಮತ್ತು ಬಿಬಿಎಂಪಿ ಕಲ್ಲಿನ ಕಟ್ಟಡದ ಮುಂದೆ ಪ್ರತಿಭಟನೆ ನಡೆಸಿದರು. 

ಕಣ್ಣೀರಿಟ್ಟ ಮಹಿಳಾ ಸದಸ್ಯರು
ಸಭೆಯಲ್ಲಿ ಪ್ರತಿಭಟನೆ ಮುಂದುವರಿಸಿದ ಮಹಿಳಾ ಸದಸ್ಯರು ನ್ಯಾಯ ದೊರೆಯದಿದ್ದರೆ ವಿಷದ ಬಾಟಲಿ ಹಿಡಿದು ಸಭೆಗೆ ಬರುತ್ತೇವೆ ಎಂದು ತಿಳಿಸಿ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು. ಮಹಿಳಾ ಸದಸ್ಯೆಯರು ಪ್ರತಿಭಟನೆಗೆ ಮುಂದಾದಾಗ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಹಾಗೂ ಸಮಸ್ಯೆ ಬಗೆಹರಿಸುವುದಾಗಿ ಮೇಯರ್‌ ಭರವಸೆ ನೀಡಿದರು. ಜತೆಗೆ ಸಚಿವರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದರು. 

ಸಭೆಯಲ್ಲಿದ್ದ ಶಾಸಕ ಗೋಪಾಲಯ್ಯ ಹಾಗೂ ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಸಹ ಮಹಿಳಾ ಸದಸ್ಯರ ಮನವೊಲಿಕೆಗೆ ಮುಂದಾದರು. ಈ ವೇಳೆ ಮಂಜುಳಾ ನಾರಾಯಣಸ್ವಾಮಿ ಅವರು ನೀವೇ ನಮ್ಮ ರಕ್ಷಣೆಗೆ ಮುಂದಾಗದಿದ್ದರೆ ಹೇಗೆ? ಎಂದು ಕಣ್ಣೀರಿಡುತ್ತಾ ಮೇಯರ್‌ನ್ನು ಪ್ರಶ್ನಿಸಿದರು. ಎಚ್‌ಎಂಟಿ ಬಡಾವಣೆ ಸದಸ್ಯೆ ಆಶಾ ಸುರೇಶ್‌, ನಮ್ಮ ಕ್ಷೇತ್ರದಲ್ಲಿ ಅಧಿಕಾರಿಗಳೇ ನಮಗೆ ತೊಂದರೆ ಕೊಡುತ್ತಿದ್ದಾರೆ.

ನಗರದಲ್ಲಿ ಕೆಎಂಸಿ ಕಾಯ್ದೆಯಿದ್ದರೂ ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಮಾತ್ರ ಶಾಸಕರು ಮಾಡಿದ್ದೆ ಕಾಯ್ದೆಯಾಗಿದೆ. ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು, ಸ್ವಾಮೀಜಿಗಳು ಸೇರಿದಂತೆ ಎಲ್ಲರಿಗೂ ದೂರು ನೀಡಿದ್ದೇನೆ. ಆದರೆ, ಯಾರು ನ್ಯಾಯ ಕೊಡಿಸಲು ಮುಂದಾಗಿಲ್ಲ. ನಮ್ಮ ಸಮಸ್ಯೆಗೆ ಪರಿಹಾರ ನೀಡದಿದ್ದರೆ ವಿಷ ಸೇವಿಸುವುದೊಂದೆ ದಾರಿ ಎಂದು ಹೇಳಿದರು.

ಆರೋಗ್ಯ ಅಧಿಕಾರಿಗಳ ನೇಮಕ
ಪಾಲಿಕೆಯಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ಪ್ರತ್ಯೇಕ ವಿಭಾಗ ಆರಂಭಿಸುವ ನಿರ್ಣಯಕ್ಕೆ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು. ಕೇಂದ್ರ ಮತ್ತು ವಲಯ ಮಟ್ಟದಲ್ಲಿ ಅಧಿಕಾರಿಗಳ ತಂಡವನ್ನು ನಿಯೋಜನೆಗೆ ಹಾಗೂ ಆರೋಗ್ಯ ಅಧಿಕಾರಿಗಳ ನೇಮಕಕ್ಕೂ ಅನುಮೋದನೆ ಪಡೆಯಲಾಗಿದ್ದು, ಮಾರ್ಷಲ್‌ಗ‌ಳ ನೇಮಕವನ್ನು ಮುಂದೂಡಲಾಗಿದೆ. 

ಟ್ಯಾನರಿ ರಸ್ತೆ ವಿಸ್ತರಣೆಗೆ ಅಸ್ತು!
ಟ್ಯಾನರಿ ರಸ್ತೆಯಿಂದ ಶ್ಯಾಂಪುರದವರೆಗಿನ ಲಿಂಕ್‌ ರಸ್ತೆಯ ಅಗಲೀಕರಣಕ್ಕಾಗಿ ಭೂ ಮಾಲೀಕರಿಗೆ ಮಾರುಕಟ್ಟೆ ಬೆಲೆಯಿಂದ ಶೇ.20ರಷ್ಟು ಹೆಚ್ಚಿನ ಟಿಡಿಆರ್‌ ನೀಡುವ ನಿರ್ಣಯಕ್ಕೆ ಗುರುವಾರದ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಅದರಂತೆ 2016-17ನೇ ಸಾಲಿನಲ್ಲಿ ಭೂಸ್ವಾಧೀನಕ್ಕೆ ಮೀಸಲಿರಿಸಿರುವ ಅನುದಾನದಿಂದ ಭೂ ಮಾಲೀಕರಿಗೆ 1.85 ಕೋಟಿ ರೂ. ಪರಿಹಾರ ನೀಡಲಾಗುತ್ತದೆ. 

ಸೌತ್‌ ಎಂಡ್‌ ರಸ್ತೆಗೆ ಪಾರ್ವತಮ್ಮ ಹೆಸರು.
ಸೌತ್‌ ಎಂಡ್‌ ವೃತ್ತದಿಂದ ಜಯನಗರ 3ನೇ ಹಂತದ ಕಡೆಗೆ ಹೋಗುವ ರಸ್ತೆಗೆ ನಿರ್ಮಾಪಕಿ ಡಾ.ಪಾರ್ವತಮ್ಮ ರಾಜ್‌ಕುಮಾರ್‌ ಅವರ ಹೆಸರಿಡುವ ನಿರ್ಣಯಕ್ಕೆ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು. ಇದರೊಂದಿಗೆ ಹೊಸಕರೆಹಳ್ಳಿ ವೃತ್ತಕ್ಕೆ ನಟ ಟೈಗರ್‌ ಪ್ರಭಾಕರ್‌ ಮತ್ತು ರಾಜಾಜಿನಗರ 2ನೇ ಬ್ಲಾಕ್‌ 36ನೇ ಅಡ್ಡರಸ್ತೆಯಿಂದ ರಾಜಾಜಿನಗರ 5ನೇ ಬ್ಲಾಕ್‌ ಡಾ.ರಾಜ್‌ಕುಮಾರ್‌ ರಸ್ತೆವರೆಗಿನ 10ನೇ ಮುಖ್ಯ ರಸ್ತೆಗೆ ಮೇಯರ್‌ ಜಿ.ಪದ್ಮಾವತಿ ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರ ಗೋಪಾಲ್‌ ಅವರ ಹೆಸರಿಡಲು ನಿರ್ಧರಿಸಲಾಯಿತು. 

ವಾರ್ಡ್‌ ಸಮಿತಿ ನೇಮಕದಲ್ಲಿ ಸಂಬಂಧಿಕರಿಗೆ ಮಣೆ: ಕೋರ್ಟ್‌ಗೆ ಮೌಖೀಕ ದೂರು
ಬೆಂಗಳೂರು:
ವಾರ್ಡ್‌ ಸಮಿತಿಗಳ ಸದಸ್ಯರ ನೇಮಕದಲ್ಲಿ ಕಾರ್ಪೋರೇಟರ್‌ ಸಂಬಂಧಿಕರನ್ನೇ ನೇಮಿಸಿಕೊಳ್ಳುವ ಯತ್ನ ನಡೆಸಲಾಗಿದೆ ಎಂದು ಹೈಕೋರ್ಟ್‌ಗೆ ಮೌಖೀಕ ದೂರು ಸಲ್ಲಿಕೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್‌ ಪಟೇಲ್‌ ಹಾಗೂ ನ್ಯಾಯಮೂರ್ತಿ ಎಸ್‌. ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಅರ್ಜಿದಾರರು ಈ  ದೂರು ಸಲ್ಲಿಸಿದರು.

ವಾರ್ಡ್‌ ಸಮಿತಿ ಸದಸ್ಯ ಸ್ಥಾನಕ್ಕೆ 500 ಹೆಸರುಗಳನ್ನು ಶಿಫಾರಸು ಮಾಡಲಾಗಿದ್ದರೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಒಬ್ಬರೇ ಒಬ್ಬ ಸದಸ್ಯರ ಹೆಸರನ್ನು ಅಂತಿಮಗೊಳಿಸಿಲ್ಲ.ಜೊತೆಗೆ ಕಾರ್ಪೋರೇಟರ್‌ಗಳು ವಾರ್ಡ್‌ ಸಮಿತಿಗಳ ಸದಸ್ಯರ ನೇಮಕದಲ್ಲಿ ಕಾರ್ಪೋರೇಟರ್‌ ಸಂಬಂಧಿಕರನ್ನೇ ನೇಮಿಸಿಕೊಳ್ಳುವ ಯತ್ನ ನಡೆಸುತ್ತಿದ್ದಾರೆ ಎಂದು ದೂರಿದರು.

ಇದೇ ವೇಳೆ ಬಿಬಿಎಂಪಿ ಪರ ವಕೀಲರು, 198 ವಾರ್ಡ್‌ಗಳ ಪೈಕಿ,  131 ವಾರ್ಡ್‌ ಸಮಿತಿ ಸದಸ್ಯರ ನೇಮಕ ಪ್ರಕ್ರಿಯೆ ಪೂರ್ಣಗೊಸಿರುವುದಾಗಿ ನ್ಯಾಯಪೀಠಕ್ಕೆ  ಸಲ್ಲಿಸಿದರು
ವಾದ -ಪ್ರತಿವಾದ ಆಲಿಸಿದ  ನ್ಯಾಯಪೀಠ, ಬಿಬಿಎಎಂಪಿ ವಾರ್ಡ್‌ಕಮಿಟಿ ಸದಸ್ಯರ ನೇಮಕದಲ್ಲಿಯೇ ಸಂಬಂಧಿಕರಿಗೇ ಮಣೆ  ಹಾಕಿರುವ ಸಂಬಂಧ , ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ಅಫಿಡವಿಟ್‌ ಸಲ್ಲಿಸಿ ಎಂದು ನಿರ್ದೇಶನ ನೀಡಿತು. ಜುಲೈ 19ಕ್ಕೆ ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next