ಬೆಂಗಳೂರು: ದೀಪಾವಳಿ ಹಬ್ಬದ ಕೊನೆಯ ದಿನವಾದ ಗುರುವಾರ ಒಂದೇ ದಿನ 40ಕ್ಕೂ ಹೆಚ್ಚು ಮಂದಿಗೆ ಪಟಾಕಿಯಿಂದ ಹಾನಿಗೊಳಗಾಗಿದ್ದು, ನಾಲ್ಕು ಮಂದಿ ಕಣ್ಣಿಗೆ ಗಂಭೀರ ಗಾಯವಾಗಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಮೂಲಕ ಹಬ್ಬದ ಮೊದಲೆರಡು ದಿನ (ನ.6,7)ಇಪ್ಪತ್ತಕ್ಕೂ ಹೆಚ್ಚು ಮಂದಿ ಸೇರಿದಂತೆ ಈ ಬಾರಿಯ ದೀಪಾವಳಿಗೆ ಒಟ್ಟು 69 ಮಂದಿ ಪಟಾಕಿಯಿಂದ ಗಾಯಗೊಂಡಿದ್ದಾರೆ. ಅವರಲ್ಲಿ ಏಳು ಪ್ರಕರಣಗಳು ಗಂಭೀರವಾಗಿವೆ. ಈಗಾಗಲೇ ಸಾದಿಕಾ (13) ಹಾಗೂ ಮೌನೇಶ (7) ಎಂಬುವವರು ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದು, ಅವರ ಬಾಳಲ್ಲಿ ಅಂಧಕಾರ ಮೂಡಿದಂತಾಗಿದೆ.
ಈ ಪೈಕಿ ಚಾಮರಾಜಪೇಟೆಯ ಮಿಂಟೋ ಆಸ್ಪತ್ರೆಯಲ್ಲಿ 29 ಮಂದಿ (4 ಗಂಭೀರ), ನಾರಾಯಣ ನೇತ್ರಾಲಯಗಳಲ್ಲಿ 30 (2ಗಂಭೀರ), ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ನಾಲ್ಕು, ಮೋದಿ ಕಣ್ಣಿನ ಆಸ್ಪತ್ರೆಯಲ್ಲಿ 3, ನೇತ್ರದಾಮದಲ್ಲಿ 3 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಕಣ್ಣಿಗೆ ಗಂಭೀರ ಹಾನಿ ಮಾಡಿಕೊಂಡಿರುವ ಏಳು ಮಂದಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಉಳಿದಂತೆ ಸಣ್ಣಪುಟ್ಟ ಗಾಯಗಳಾದವರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ಆಸ್ಪತ್ರೆಗಳ ವೈದ್ಯರು ತಿಳಿಸಿದ್ದಾರೆ.
ಗುರುವಾರ ವರದಿಯಾದ ಪ್ರಕರಣಗಳಲ್ಲಿ ದೊಡ್ಡ ಬಳ್ಳಾಪುರ ಬಳಿಯ ನಿವಾಸಿ ಅವಿನಾಶ್ (7) ಹಾಗೂ ವಾಸುದೇವ ಎಂಬುವವರ ವ್ಯಕ್ತಿಗಳ ಕಣ್ಣಿಗೆ ತೀವ್ರ ಹಾನಿ ಉಂಟಾಗಿದೆ. ಮತ್ತೂಂದು ಪ್ರಕರಣದಲ್ಲಿ ಸೈಯದ್ (3) ಎಂಬ ಬಾಲಕನಿಗೆ ಯಾರೋ ಸಿಡಿಸಿದ ಪಟಾಕಿ ತಗುಲಿ ಕಣ್ಣಿಗೆ ಗಾಯವಾಗಿದೆ ಎಂದು ಮಿಂಟೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
40ಕ್ಕೂ ಹೆಚ್ಚು ಮಕ್ಕಳು: ಈ ಬಾರಿ ದೀಪಾವಳಿ ಪಟಾಕಿಯಿಂದ ಹಾನಿಗೊಳಗಾದ 66 ಮಂದಿಯಲ್ಲಿ 40ಕ್ಕೂ ಹೆಚ್ಚು ಮಂದಿ ಮಕ್ಕಳೇ ಇರುವುದು ಬೇಸರದ ಸಂಗತಿ. ಮಿಂಟೋ ಆಸ್ಪತ್ರೆಯಲ್ಲಿ 26 ಮಂದಿ ಚಿಕಿತ್ಸೆ ಪಡೆದಿದ್ದು, ಅವರಲ್ಲಿ 18 ಮಂದಿ ಮಕ್ಕಳೇ ಆಗಿದ್ದಾರೆ.
ಅದರಲ್ಲೂ 10 ವರ್ಷದೊಳಗಿನ 12 ಮಕ್ಕಳು ಪಟಾಕಿಯಿಂದ ಹಾನಿ ಮಾಡಿಕೊಂಡಿದ್ದಾರೆ. ಇಲ್ಲಿನ 16ಕ್ಕೂ ಹೆಚ್ಚು ಮಂದಿ ಬೇರೊಬ್ಬರು ಸಿಡಿಸಿದ ಪಟಾಕಿಯಿಂದ ತಮ್ಮದಲ್ಲದ ತಪ್ಪಿಗೆ ನೋವನ್ನು ಅನುಭವಿಸುತ್ತಿದ್ದಾರೆ. ಇನ್ನು ಮುಖ್ಯವಾಗಿ ಲಕ್ಷ್ಮೀ ಪಟಾಕಿ, ಹೂವಿನ ಕುಂಡ, ಆಟಂಬಾಂಬ್ ಸಿಡಿತದಿಂದಲೇ ಬಹುತೇಕರಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಮೊದಲೆರಡು ದಿನಗಳಿಗಿಂತ ಮೂರನೇ ದಿನ ಹೆಚ್ಚು ಮಂದಿ ಹಾನಿ ಮಾಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಒಟ್ಟು 26 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ 4 ಮಂದಿಗೆ ಗಂಭೀರ ಗಾಯವಾಗಿದ್ದು, ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಅವಗಡದಲ್ಲಿ ಕಾರ್ನಿಯಾ ಸಂಬಂಧಿಸಿದಂತೆ ಹಾನಿಯಾಗಿದ್ದರೆ, ಅವರಿಗೆ ದೃಷ್ಟಿ ಮರಳು ಸಾಧ್ಯತೆ ತೀರ ಕಡಿಮೆ.
-ಡಾ. ಸುಜಾತಾ ರಾಥೋಡ್, ನಿರ್ದೇಶಕಿ ಮಿಂಟೋ ಆಸ್ಪತ್ರೆ.