ದೀಪಾವಳಿ ಇದರ ಹೆಸರೇ ಸೂಚಿಸುವಂತೆ ಇದು ಬೆಳಕಿನ ಸಂಭ್ರಮ ಎಂದು ಹೇಳಬಹುದು.ಭಾರತೀಯ ಸಂಸ್ಕೃತಿಯಲ್ಲಿ ಈ ಹಬ್ಬ ಪ್ರಮುಖವಾಗಿದೆ.ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಸಂಕೇತವಾಗಿದೆ. ಒಂದರ್ಥದಲ್ಲಿ ಕತ್ತಲೆಂಬ ಅಂದಕಾರವನ್ನು ತೊಡೆದು ನಮ್ಮಲ್ಲಿ ಧನಾತ್ಮಕ ಆಲೋಚನೆ, ಚೈತನ್ಯ ತುಂಬುವ ನೆಲೆಯಲ್ಲಿ ದೀಪಾವಳಿ ಹಬ್ಬ ಬಹಳ ಪ್ರಾ,ಮುಖ್ಯತೆಯನ್ನು ಪಡೆದಿದೆ.
ದೀಪಾವಳಿಯಲ್ಲಿ ಸಾಮಾನ್ಯವಾಗಿ ಬೆಳಗ್ಗೆ ಬೇಗ ಎದ್ದು ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆಗಳನ್ನು ಧರಿಸಿ, ದೀಪಗಳನ್ನು ಹಚ್ಚಿ ದೇವರ ಪೂಜೆ ಮಾಡುವ ಮೂಲಕ ಹಬ್ಬ ಆಚರಿಸುತ್ತೇವೆ. ಪಟಾಕಿಗಳನ್ನು ಹಚ್ಚಿ ಅದರ ಶಬ್ದಗಳೊಂದಿಗೆ ಮನೆಯವರೆಲ್ಲರು ಸೇರಿ ಒಟ್ಟಿಗೆ ಹಬ್ಬದ ಸಡಗರದಲ್ಲಿ ಪಾಲ್ಗೊಳ್ಳುತ್ತೇವೆ. ಈ ಹಬ್ಬಕ್ಕೆ ಪುರಾಣಗಳಲ್ಲಿ ಹಲವಾರು ಕಾರಣಗಳು ಇರಬಹುದು ಆದರೆ ಇತ್ತೀಚಿನ ದಿನಗಳಲ್ಲಿ ಇದು ದೀಪಗಳ ಹಬ್ಬವಾಗಿದೆ. ದೊಡ್ಡ ಸಂಭ್ರಮವಾಗಿ ಊರಿಗೆ ಊರೇ ದೀಪಗಳ ಬೆಳಕಿನಿಂದ ತುಂಬುವಂತೆ ಈ ಬೆಳಕಿನ ಹಬ್ಬ ಕಾಣಿಸಿಗುತ್ತದೆ. ಕೆಲಸದ ಒತ್ತಡದಲ್ಲಿ ಇರುವ ಜನರಿಗೆ ಈ ಹಬ್ಬವು ಒಟ್ಟಿಗೆ ಸೇರುವ ಅವಕಾಶವನ್ನು ಕಲ್ಪಿಸಿ ಕೊಡುತ್ತದೆ.
ಇಷ್ಟೇ ಅಲ್ಲದೆ ಬೆಳಕಿನ ಸಂಭ್ರಮವನ್ನು ಸಂಭ್ರಮಿಸುವುದು ಒಂದೆಡೆಯಾದರೆ, ಈ ಪಟ್ಟಣ ಪ್ರದೇಶಗಲ್ಲಿ ಸುಡುಮದ್ದುಗಳಿಂದ ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯವನ್ನು ನೋಡಬಹುದು. ಆದರೆ ಈ ಬಾರಿ ಅದಕ್ಕೂ ಕೂಡ ತೆರೆ ಬಿದ್ದಿದೆ. ಅನೇಕ ನಿರ್ಬಂಧಗಳು ಕೂಡ ಬಂದಿವೆ. ಹಸುರು ಪಟಾಕಿಗೆ ಮೊದಲ ಆಧ್ಯತೆ ನೀಡಲಾಗುತ್ತಿದೆ. ಹಾಗಿದ್ದು ಪಟಾಕಿ ಸಿಡಿಸುವವರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಪಟಾಕಿಗಳ ಅಪಾಯದಿಂದ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು. ಕಿವಿ ಕಣ್ಣುಗಳಿಗೆ ಹಾನಿಯಾಗಬಹುದು ಪ್ರಾಣಿ ಪಕ್ಷಿಗಳಿಗೂ ಪಟಾಕಿಗಳ ಸದ್ದಿನಿಂದ ತೊಂದರೆ ಉಂಟಾಗುತ್ತದೆ ಅದನ್ನು ಗಮನಿಸಬೇಕು. ಆದಷ್ಟು ಪರಿಸರಕ್ಕೆ ಹಾನಿಯಾಗದಂತೆ, ಪರಿಸರ ಮಾಲಿನ್ಯವನ್ನು ತಡೆಗಟ್ಟುವ ರೀತಿಯಲ್ಲಿ ಹಬ್ಬದ ಆಚರಣೆಯನ್ನು ಮಾಡೋಣ.
ಬೆಳಕಿನ ಹಬ್ಬವನ್ನು ಕತ್ತಲಿಂದ ಬೆಳಕಿನೆಡೆಗೆ ಸಾಗಿಸುವ, ಬದಲಿಗೆ ಕೆಟ್ಟ ಅಪಘಾತಗಳಿಂದ ಕತ್ತಲೆಗೆ ಸಾಗುವುದಲ್ಲ. ಈ ಹಬ್ಬವನ್ನು ಎಲ್ಲರೂ ದುಃಖಗಳೆಲ್ಲವನ್ನು ಮರೆತು ಸಂಭ್ರಮದಿಂದ ಮನಗಳಲ್ಲಿ ಮನೆಗಳಲ್ಲಿ ಧನಾತ್ಮಕ ತರಂಗಗಳನ್ನು ಎಬ್ಬಿಸುತ್ತ ಆಚರಿಸುವಂತಾಗಲಿ, ಈ ದೀಪಾವಳಿಯನ್ನು ಹೊಸ ರೀತಿಯಲ್ಲಿ ಹೊಸ ಹುರುಪಿನೊಂದಿಗೆ ಸಂಭ್ರಮಿಸೋಣ.
-ಸುಶ್ಮಿತಾ, ವಿ.ವಿ. ಮಂಗಳೂರು