ತಿ.ನರಸೀಪುರ: ಜನರ ಸಮಸ್ಯೆಗಳನ್ನು ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ವರುಣಾ ಶಾಸಕ ಡಾ.ಎಸ್.ಯತೀಂದ್ರ ಸೂಚನೆ ನೀಡಿದರು. ತಾಲೂಕಿನ ಕಿರಗಸೂರು ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಕಂದಾಯ ಇಲಾಖೆ ಸರ್ವೇ ವಿಭಾಗದ ವಿರುದ್ಧ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಸರ್ವೇಯರ್‌ಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಜನರ ಕೆಲಸ ನಿಗದಿತ ವೇಳೆಯಲ್ಲಿ ಪೂರ್ಣಗೊಳಿಸುವಂತೆ ತಹಶೀಲ್ದಾರ್‌ಗೆ ತಾಕೀತು ಮಾಡಿದರು.
ಪಟ್ಟಿ ಕೊಡಿ: ವಸತಿ ಯೋಜನೆಗಳಿಗೆ ಜಿಪಿಎಸ್‌ನಲ್ಲಿ ತಾಂತ್ರಿಕ ಸಮಸ್ಯೆಯಾಗಿ, ಅನುದಾನ ಸ್ಥಗಿತಗೊಂಡಿದ್ದರೆ, ಅನುದಾನ ತಡೆ ಹಿಡಿಯಲಾದ ಫಲಾನುಭವಿಗಳ ಪಟ್ಟಿ ಮಾಡಿಕೊಡಬೇಕು. ಪಡಿತರ ವಿತರಣೆಯಲ್ಲಿ ವ್ಯತ್ಯಯಕ್ಕೆ ಕಾರಣ ಮತ್ತು ಕಾರ್ಡುಗಳ ವಿತರಣೆಯಲ್ಲೂ ಸಮಸ್ಯೆ ಇರುವ ಬಗ್ಗೆ ಲಿಖೀತ ಮಾಹಿತಿ ನೀಡಿದರೆ ಸಂಬಂಧಪಟ್ಟ ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿ, ಸಮಸ್ಯೆ ಪರಿಹರಿಸಲಾಗುವುದು.
ಸಮುದಾಯ ಭವನ ಹಾಗೂ ಸ್ಮಶಾನಗಳಿಗೆ ನಿವೇಶನ ಕಲ್ಪಿಸುವ ಸಂಬಂಧ ಸರ್ಕಾರಿ ನಿವೇಶನಗಳನ್ನು ಗುರುತಿಸುವಂತೆಯೂ ಅಧಿಕಾರಿಗಳಿಗೆ ಸಲಹೆ ನೀಡಿದರು. ಗ್ರಾಮೀಣ ಜನರ ಸಮಸ್ಯೆ ಸ್ಥಳೀಯವಾಗಿ ಪರಿಹರಿಸಲು ಜನಸಂಪರ್ಕ ಸಭೆ ಉಪಯುಕ್ತವಾಗಿದೆ. ಹೋಬಳಿ ಮತ್ತು ಗ್ರಾಪಂ ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಲಾಗುವುದು. ತಾಲೂಕು ಮಟ್ಟದ ಅಧಿಕಾರಿಗಳು ಖುದ್ದು ಹಾಜರಿದ್ದು, ಜನರ ಸಮಸ್ಯೆಗೆ ಸ್ಥಳದಲ್ಲಿಯೇ ಸ್ಪಂದಿಸಿದಾಗ ಬಹುತೇಕ ಸಮಸ್ಯೆಗಳು ಪರಿಹಾರವಾಗಲಿವೆ ಎಂದು ಡಾ.ಎಸ್.ಯತೀಂದ್ರ ತಿಳಿಸಿದರು.
ಸಭೆಯಲ್ಲಿ ತಾಪಂ ಸದಸ್ಯ ಎಂ.ರಮೇಶ್, ತಹಶೀಲ್ದಾರ್ ಎಚ್.ಎಸ್.ಪರಮೇಶ್, ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಎಸ್.ನಂಜೇಶ್ ಮಹದೇವ ನಾಯಕ, ಬಿ.ಎನ್.ಬಸವರಾಜು, ಸಹಾಯಕ ತೋಟಗಾರಿಕೆ ನಿರ್ದೇಶಕ ಫಣೀಂದ್ರ ಚಿನ್ನಬುದ್ಧಿ, ನಂಜುಂಡೇಗೌಡ, ನಾಗರಾಜು, ಶ್ರೀಕಂಠ, ಮಸೂರ್ ಅಹಮ್ಮದ್, ಪ್ರದೀಪಸಿಂಗ್, ಲಕ್ಷ್ಮೀ, ಶ್ರುತಿ ಇತರರಿದ್ದರು.
ಗೈರಾದ ಅಧಿಕಾರಿಗಳಿಗೆ ನೋಟಿಸ್: ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಜನ ಸಂಪರ್ಕ ಸಭೆಗೆ ಗೈರಾದ ನಿರ್ಮಿತಿ ಕೇಂದ್ರ ಸೇರಿ ಇತರೆ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಡಾ.ಎಸ್.ಯತೀಂದ್ರ ಅವರು ತಹಶೀಲ್ದಾರ್ ಆದೇಶಿಸಿದರು. ಅಧಿಕಾರಿಗಳು ಬಾರದಿದ್ದರೆ ಜನರ ಸಮಸ್ಯೆ ಪರಿಹರಿಸೋರು ಯಾರು ಎಂದು ಪ್ರಶ್ನಿಸಿದರಲ್ಲದೆ, ನೋಟಿಸ್ ನಂತರ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.