Advertisement

ರಾಜ್ಯದಲ್ಲಿ 100 ಮಿನಿ ಎಂಆರ್‌ಎಫ್ ಘಟಕ ಸ್ಥಾಪನೆಗೆ ಸಿದ್ಧತೆ   

01:52 AM Mar 27, 2022 | Team Udayavani |

ಮಂಗಳೂರು: ಒಣ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಮರುಬಳಕೆಗೆ ಸಿದ್ಧಪಡಿಸುವ ಉದ್ದೇಶದಿಂದ ರಾಜ್ಯದಲ್ಲಿ 100ಕ್ಕೂ ಅಧಿಕ “ಮಿನಿ ಎಂಆರ್‌ಎಫ್’ (ಮೆಟೀರಿಯಲ್ಸ್‌ ರಿಕವರಿ ಫೆಸಿಲಿಟಿ) ಘಟಕಗಳ ಸ್ಥಾಪನೆಗೆ ನಿರ್ಧರಿಸಲಾಗಿದ್ದು 4 ಜಿಲ್ಲೆಗಳಲ್ಲಿ ಈಗಾಗಲೇ ಅನುಷ್ಠಾನಗೊಂಡಿರುವ ಎಂಆರ್‌ಎಫ್ ಘಟಕಗಳ ಮಾದರಿಯಲ್ಲಿಯೇ ಕಾರ್ಯಾಚರಿಸಲಿವೆ.

Advertisement

ಉಡುಪಿ, ದ.ಕ., ಬಳ್ಳಾರಿ ಮತ್ತು ರಾಮನಗರ ಜಿಲ್ಲೆಗಳಲ್ಲಿ ಪೈಲಟ್‌ ಯೋಜನೆಯಾಗಿ ತಲಾ ಒಂದು “ಎಂಆರ್‌ಎಫ್ ಘಟಕ’ಗಳನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು. ಉಡುಪಿ ಜಿಲ್ಲೆಯ ನಿಟ್ಟೆಯಲ್ಲಿ ಎಂಆರ್‌ಎಫ್ ಘಟಕ 4 ತಿಂಗಳುಗಳಿಂದ ಪ್ರಾಯೋಗಿಕವಾಗಿ ಕಾರ್ಯಾಚರಿಸುತ್ತಿದೆ. ದ.ಕ.ದ ತೆಂಕ ಎಡಪದವಿನಲ್ಲಿ ನಿರ್ಮಾಣವಾಗುತ್ತಿದ್ದು 5 ತಿಂಗಳಲ್ಲಿ ಕಾರ್ಯಾರಂಭಿಸುವ ನಿರೀಕ್ಷೆ ಇದೆ. ಬಳ್ಳಾರಿ ಮತ್ತು ರಾಮನಗರದಲ್ಲಿಯೂ ಘಟಕದ ಕಟ್ಟಡ ಸಿದ್ಧಗೊಂಡಿದೆ.

ದ.ಕ: ತಾಲೂಕಿಗೊಂದು ಘಟಕ
ದ.ಕ. ಜಿಲ್ಲೆಯಲ್ಲಿ ತಾಲೂಕಿಗೊಂದು ಮಿನಿ ಎಂಆರ್‌ಎಫ್ ಘಟಕ ಸ್ಥಾಪನೆಗೆ ನಿರ್ಧರಿಸಲಾಗಿದೆ. ಉಡುಪಿ ಜಿಲ್ಲೆಯ
4 ಕಡೆ ಮಿನಿ ಎಂಆರ್‌ಎಫ್ ಘಟಕ ನಿರ್ಮಾಣ ವಾಗಲಿದೆ. 80 ಬಡಗಬೆಟ್ಟು ಘಟಕ ಮುಂದಿನ 3-4 ತಿಂಗಳಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ತ್ರಾಸಿಯಲ್ಲಿಯೂ ಶೀಘ್ರದಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಅನಂತರ ಹೆಬ್ರಿ, ಕೆದೂರು ಭಾಗದಲ್ಲಿಯೂ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಳಮಟ್ಟದಲ್ಲಿ ಸಿದ್ಧತೆ
ಎಂಆರ್‌ಎಫ್ ಘಟಕದ ತಾಂತ್ರಿಕ ಸಲಹೆಗಾರ ಸಂಸ್ಥೆಯಾಗಿರುವ “ಸಾಹಸ್‌’ ಎನ್‌ಜಿಒ 4 ಜಿಲ್ಲೆಗಳ ಎಂಆರ್‌ಎಫ್ ಘಟಕಗಳ ಯಶಸ್ಸಿಗೆ ಪೂರಕವಾಗಿ ಈಗಾಗಲೇ ಗ್ರಾಮ ಮಟ್ಟದಲ್ಲಿ ಜಾಗೃತಿ, ತರಬೇತಿ, ಪ್ರಾತ್ಯಕ್ಷಿಕೆ, ಡಾಕ್ಯುಮೆಂಟೇಷನ್‌ ಮೊದಲಾದವುಗಳನ್ನು ನಡೆಸುತ್ತಿದೆ. “ಸಾಹಸ್‌’ಗೆ ಬೆಂಗಳೂರಿನ ಎಚ್‌ಸಿಎಲ್‌ ಫೌಂಡೇಶನ್‌ 5 ಕೋ.ರೂ. ಅನುದಾನ ನೀಡಿದೆ.

ಯಾಕಾಗಿ ಮಿನಿ ಎಂಆರ್‌ಎಫ್?
ಎಂಆರ್‌ಎಫ್ ಘಟಕಗಳಲ್ಲಿ ಕೆಮಿಕಲ್‌ ಮತ್ತು ಮೆಡಿಕಲ್‌ಗೆ ಸಂಬಂಧಿ ಸಿದ ಅಪಾಯಕಾರಿ ವಸ್ತು ಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಒಣ ತ್ಯಾಜ್ಯ ಗಳನ್ನು ವೈಜ್ಞಾನಿಕವಾಗಿ ಸಂಸ್ಕ ರಿಸಿ ಮೌಲ್ಯವರ್ಧನೆಗೊಳಿಸಿ ಮರು ಬಳಕೆಗೆ ಸಿದ್ಧಪಡಿಸಿಕೊಡಲಾಗುತ್ತದೆ. ಇದು ಗ್ರಾ.ಪಂ.ಗಳ ಒಣತ್ಯಾಜ್ಯ ನಿರ್ವಹಣೆಯ ಭಾರವನ್ನು ಇಳಿಸಲು ಸಹಕಾರಿ. ಆದರೆ ಒಂದು ಎಂಆರ್‌ಎಫ್ ಘಟಕ 10 ಮೆಟ್ರಿಕ್‌ ಮೆಟ್ರಿಕ್‌ ಟನ್‌ ಸಾಮರ್ಥ್ಯ ಮಾತ್ರ ಹೊಂದಿದ್ದು ಗರಿಷ್ಠ ವೆಂದರೆ ಸುಮಾರು 40 ಗ್ರಾ.ಪಂ.ಗಳ ವ್ಯಾಪ್ತಿಯ ಒಣಕಸವನ್ನು ಸಂಸ್ಕರಿ ಸಲು ಸಾಧ್ಯವಾಗುತ್ತದೆ. ಉಳಿದ ಗ್ರಾ.ಪಂಗಳ ಒಣಕಸ ಸಂಸ್ಕರಣೆ ಇದರಿಂದ ಸಾಧ್ಯ ವಾಗದು. ಈ ಹಿನ್ನೆಲೆಯಲ್ಲಿ 5-10 ಗ್ರಾ.ಪಂ.ಗಳಿಗೆ ಒಂದರಂತೆ “ಮಿನಿ ಎಂಆರ್‌ಎಫ್’ ಘಟಕಗಳನ್ನು ಸ್ಥಾಪಿಸಬೇಕೆಂಬ ಬೇಡಿಕೆ ವ್ಯಕ್ತವಾಗಿತ್ತು.

Advertisement

ಉಡುಪಿಯ 2 ಘಟಕ ಶೀಘ್ರ
ಉಡುಪಿ ಜಿಲ್ಲೆಯಲ್ಲಿ ಎಂಆರ್‌ಎಫ್ ಘಟಕ ಈಗಾಗಲೇ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುತ್ತಿದ್ದು ಯಶಸ್ವಿಯಾಗಿದೆ. ಇನ್ನು ನಾಲ್ಕು ಮಿನಿ ಎಂಆರ್‌ಎಫ್ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು ಅವುಗಳಲ್ಲೆರಡು ಶೀಘ್ರ ಆರಂಭಗೊಳ್ಳುವ ನಿರೀಕ್ಷೆ ಇದೆ. ಕೇಂದ್ರ ಸರಕಾರದಿಂದ “ಪ್ಲಾಸ್ಟಿಕ್‌ ಮ್ಯಾನೇಜ್‌ಮೆಂಟ್‌ ಯುನಿಟ್‌’ಗೆ ತಾಲೂಕಿಗೆ 15 ಲ.ರೂ. ಅನುದಾನ ದೊರೆಯಲಿದೆ. ಅದನ್ನು ಘಟಕಕ್ಕೆ ಬಳಸಿ ಉಳಿದ ಮೊತ್ತವನ್ನು ಗ್ರಾ.ಪಂ., ತಾ.ಪಂ.ಗಳಿಂದ ಪಡೆದು ಘಟಕ ಸ್ಥಾಪಿಸಲಾಗುವುದು.
– ನವೀನ್‌ ಭಟ್‌, ಸಿಇಒ, ಜಿ.ಪಂ. ಉಡುಪಿ

ಸ್ಥಳ ಗುರುತಿಸುವ ಪ್ರಕ್ರಿಯೆ
ದ.ಕ. ಜಿಲ್ಲೆಯಲ್ಲಿ ಎಂಆರ್‌ಎಫ್ ಘಟಕ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಜತೆಗೆ ತಾಲೂಕಿಗೊಂದು ಮಿನಿ ಎಂಆರ್‌ಎಫ್ ಘಟಕಗಳನ್ನು ನಿರ್ಮಿಸಲು ಸ್ಥಳ ಗುರುತಿಸುತ್ತಿದ್ದೇವೆ. ಎಲ್ಲ ಗ್ರಾ.ಪಂ.ಗಳ ಒಣತ್ಯಾಜ್ಯವನ್ನು ವ್ಯವಸ್ಥಿತವಾಗಿ ಸಂಸ್ಕರಿಸಲು ಇದು ಸಹಕಾರಿ.
– ಡಾ| ಕುಮಾರ್‌, ಸಿಇಒ, ದ.ಕ. ಜಿ.ಪಂ.

 

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next