Advertisement

ಕೇಂದ್ರದ ಲಸಿಕಾ ಉತ್ಸವಕ್ಕೆ ಹಿನ್ನಡೆ! ಗೊಂದಲ ಸೃಷ್ಟಿಸುವ ಆರೋಗ್ಯ ಇಲಾಖೆಯ ಎರಡು ವರದಿಗಳು

01:46 AM Apr 16, 2021 | Team Udayavani |

ಎಪ್ರಿಲ್‌ 11ರಿಂದ 14ರ ವರೆಗೆ ದೇಶಾದ್ಯಂತ ಕೊರೊನಾ ಲಸಿಕಾ ಉತ್ಸವವನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಆದರೆ ಈ ಅವಧಿಯಲ್ಲಿ ವ್ಯಾಕ್ಸಿನೇಶನ್‌ ಹೆಚ್ಚಾಗುವ ಬದಲು ಶೇ. 12ರಷ್ಟು ಕಡಿಮೆಯಾಗಿದೆ. ಆದರೆ ಈ ಮಧ್ಯೆ 1.28 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರಕಾರ ಹೇಳಿಕೊಂಡಿದೆ.

Advertisement

ಎಷ್ಟಾಯಿತು?
ಲಸಿಕಾ ಉತ್ಸವದ ಸಮಯದಲ್ಲಿ ದೇಶಾದ್ಯಂತ 99.64 ಲಕ್ಷ ಡೋಸ್‌ ಲಸಿಕೆಗಳನ್ನು ನೀಡಲಾಗಿದೆ. ಅಂದರೆ ಎಪ್ರಿಲ್‌ 11ರಿಂದ 14ರ ವರೆಗೆ. ಈ ಮೊದಲು ಎ. 7ರಿಂದ 10ರ ವರೆಗೆ 1.13 ಕೋಟಿ, ಎ. 3ರಿಂದ 6ರ ನಡುವೆ 1.10 ಕೋಟಿ ಮತ್ತು ಮಾ. 30ರಿಂದ  ಎ. 2ರ ವರೆಗೆ 99.99 ಲಕ್ಷ ಲಸಿಕೆಗಳನ್ನು ನೀಡಲಾಗಿತ್ತು. ಲಸಿಕೆ ಉತ್ಸವದಲ್ಲಿ ವ್ಯಾಕ್ಸಿನೇಶನ್‌ ಗಮನಾರ್ಹವಾಗಿ ಕಡಿಮೆಯಾಗಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಸಾಧ್ಯವಾದಷ್ಟು ಹೆಚ್ಚಿನ ಜನರಿಗೆ ಲಸಿಕೆಯನ್ನು ನೀಡುವ ಉದ್ದೇಶದೊಂದಿಗೆ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ವಿಪರ್ಯಾಸ ಎಂದರೆ ಲಸಿಕಾ ಉತ್ಸವದ ಪ್ರತೀ ದಿನ ಸಂಜೆ ಬಿಡುಗಡೆ ಮಾಡುವ ದತ್ತಾಂಶಗಳಿಗೆ ಹಾಗೂ ಅಭಿಯಾನದ ಕೊನೆಯಲ್ಲಿ ಬಿಡುಗಡೆ ಮಾಡಿದ ದತ್ತಾಂಶಗಳಿಗೆ ತಾಳೆಯಾಗುತ್ತಿಲ್ಲ. ಈ ಕುರಿತಂತೆ ಎರಡು ವಾದಗಳು ಎದ್ದಿವೆ.

ವರದಿ 1 :
ಎಪ್ರಿಲ್‌ 15ರಂದು ಬಿಡುಗಡೆ ಮಾಡಲಾದ ವರದಿಯಂತೆ, 1.28 ಕೋಟಿ ಲಸಿಕೆ ಹಾಕಲಾಯಿತು. ಅಭಿಯಾನದ ಮೊದಲ ದಿನ 29.33 ಲಕ್ಷ ಲಸಿಕೆ, ಎರಡನೇ ದಿನ 40.04 ಲಕ್ಷ, ಮೂರನೇ ದಿನ 26.46 ಲಕ್ಷ ಮತ್ತು ನಾಲ್ಕನೇ ದಿನ 33.13 ಲಕ್ಷ ಲಸಿಕೆ ನೀಡಲಾಗಿದೆ.

ವರದಿ 2 :
ಈ ಅಂಕಿ ಅಂಶಗಳು ಪ್ರತೀ ದಿನ ಸಂಜೆ ಹೊರಡಿಸುವ ಬುಲೆಟಿನ್‌ ಆಗಿದೆ. ಇದರಲ್ಲಿ ಆರೋಗ್ಯ ಸಚಿವಾಲಯವು ದೈನಂದಿನ ವ್ಯಾಕ್ಸಿನೇಶನ್‌ಗಳ ಡೇಟಾವನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಈ 4 ದಿನಗಳಲ್ಲಿ 12 ಮಿಲಿಯನ್‌ ಲಸಿಕೆ ಪ್ರಮಾಣವನ್ನು ಅನ್ವಯಿಸಲಾಗಿದೆ. ಎಪ್ರಿಲ್‌ 11ರ ಬುಲೆಟಿನ್‌ನಲ್ಲಿ, ಉತ್ಸವದ ಮೊದಲ ದಿನದಂದು 27 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ ಎಂದು ವರದಿಯಾಗಿದೆ. ಎರಡನೇ ದಿನ 37 ಲಕ್ಷ, ಮೂರನೇ ದಿನ 25 ಲಕ್ಷ ಮತ್ತು ನಾಲ್ಕನೇ ದಿನ 31.39 ಲಕ್ಷ ಡೋಸ್‌ ನೀಡಲಾಗಿತ್ತು.

Advertisement

ಲಸಿಕೆಯ ಕೊರತೆ ಜಗಳ
ಇತ್ತೀಚಿನ ದಿನಗಳಲ್ಲಿ ಲಸಿಕೆ ನೀಡುವಿಕೆ ಪ್ರಮಾಣ ಕಡಿಮೆಯಾಗಿರುವುದರ ಕುರಿತು ತಜ್ಞರು ಮತ್ತು ರಾಜ್ಯಗಳು ಅಪಸ್ವರ ಎತ್ತಿವೆ. ಲಸಿಕೆ ಕೊರತೆಯ ಕಾರಣದಿಂದಾಗಿ ಲಸಿಕೆ ನೀಡುವಿಕೆ ಪ್ರಮಾಣ ಕಡಿಮೆಯಾಗಿದೆ ಎಂದು ಕೆಲವೊಂದು ರಾಜ್ಯ ಸರಕಾರಗಳು ಪ್ರತಿಪಾದಿಸಿದರೆ ದೇಶದಲ್ಲಿ ಲಸಿಕೆಗಳ ಕೊರತೆಯಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್‌ ಹೇಳಿದ್ದಾರೆ. ಲಸಿಕೆ ಪೂರೈಕೆಯ ಕೊರತೆ ಇದೆ ಎಂದು ಮಹಾರಾಷ್ಟ್ರ, ಛತ್ತೀಸ್‌ಗಢ, ಆಂಧ್ರಪ್ರದೇಶ, ಪಂಜಾಬ್‌, ತೆಲಂಗಾಣ, ರಾಜಸ್ಥಾನ ಮತ್ತು ಒಡಿಶಾ ರಾಜ್ಯಗಳು ದೂರಿವೆ.

Advertisement

Udayavani is now on Telegram. Click here to join our channel and stay updated with the latest news.

Next