Advertisement

ಲಂಚದ ಕೇಸು ಸಿಬಿಐಗೆ; ತೆಲಂಗಾಣ ಹೈಕೋರ್ಟ್‌ ಆದೇಶ ; ಬಿಆರ್‌ಎಸ್‌ಗೆ ಹಿನ್ನಡೆ

01:26 AM Dec 27, 2022 | Team Udayavani |

ಹೈದರಾಬಾದ್‌: ತೆಲಂಗಾಣದ ಆಡಳಿತಾರೂಢ ಪಕ್ಷ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷದ ಶಾಸಕರಿಗೆ ಬಿಜೆಪಿ ಲಂಚದ ಆಮಿಷ ಒಡ್ಡಿತ್ತು ಎಂಬ ಪ್ರಕರಣದ ತನಿಖೆಯ ಹೊಣೆಯನ್ನು ಸಿಬಿಐ ವಹಿಸಲಿದೆ. ಜತೆಗೆ ರಾಜ್ಯ ಸರಕಾರ ತನಿಖೆಗಾಗಿ ನೇಮಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಯನ್ನು ರದ್ದುಗೊಳಿಸಿ ತೆಲಂಗಾಣ ಹೈ ಕೋರ್ಟ್‌ ಸೋಮ ವಾರ ತೀರ್ಪು ನೀಡಿದೆ.

Advertisement

ನ್ಯಾ| ವಿಜಯ ಸೆನ್‌ ರೆಡ್ಡಿ ನೇತೃತ್ವದ ಏಕ ಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಇದರಿಂದಾಗಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ನೇತೃತ್ವದ ಸರಕಾರ‌ಕ್ಕೆ ಭಾರೀ ಮುಖಭಂಗ ಉಂಟಾಗಿದೆ.

ಹೈಕೋರ್ಟ್‌ನ ಆದೇಶವನ್ನು ಸ್ವಾಗತಿಸಿದ ಬಿಜೆಪಿ ನಾಯಕ ಮತ್ತು ನ್ಯಾಯವಾದಿ ಎನ್‌. ರಾಮಚಂದ್ರರಾವ್‌,”ರಾಜ್ಯ ಸರಕಾರ ರಚನೆ ಮಾಡಿದ ಎಸ್‌ಐಟಿ ಯಿಂದ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಿಲ್ಲ ಎನ್ನುವುದು ನಮ್ಮ ವಾದವಾಗಿತ್ತು. ಹೈಕೋರ್ಟ್‌ ತೀರ್ಪಿನಿಂದ ಅದು ಸಾಬೀತಾಗಿದೆ’ ಎಂದು ಹೇಳಿದ್ದಾರೆ.

ಆಮಿಷ ಒಡ್ಡಿದ್ದರ ಬಗ್ಗೆ ಎಲ್ಲ ರೀತಿಯ ದಾಖಲೆಗಳು ನಮ್ಮ ಬಳಿ ಇವೆ ಎಂದು ಸಿಎಂ ಚಂದ್ರಶೇಖರ ರಾವ್‌ ಪ್ರತಿಪಾದಿಸಿದ್ದರು ಎಂದು ರಾವ್‌ ಹೇಳಿದ್ದಾರೆ. ಪ್ರಕರಣದ ಬಗ್ಗೆ ಸಿಬಿಐ ಮೂಲಕ ತನಿಖೆ ನಡೆಸಬೇಕು ಎಂದು ಐದು ಅರ್ಜಿಗಳು ಸಲ್ಲಿಕೆಯಾಗಿದ್ದವು.

ಬಿಆರ್‌ಎಸ್‌ ಲೇವಡಿ: ಹೈಕೋರ್ಟ್‌ ನೀಡಿದ ತೀರ್ಪಿನ ಬಗ್ಗೆ ಬಿಆರ್‌ಎಸ್‌ನ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಕೃಷಾಂಕ್‌ ಪ್ರತಿಕ್ರಿಯೆ ನೀಡಿ

Advertisement

“ಶಾಸಕರ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ಏಳು ಬಾರಿ ಪ್ರಯತ್ನ ಮಾಡಿತ್ತು.ಕೊನೆಗೂ ಅದಕ್ಕೆ ನೆಮ್ಮದಿ ಸಿಕ್ಕಿದೆ. ಎಸ್‌ಐಟಿ ವಿಚಾರಣೆ ಯಿಂದ ಪಾರಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ನಾಳೆ ಸಂತೋಷ್‌ ಹೈದರಾಬಾದ್‌ಗೆ: ಈ ಎಲ್ಲ ಬೆಳವಣಿಗೆಗಳ ನಡುವೆ ಬಿಜೆಪಿ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಬುಧವಾರ ಹೈದರಾಬಾದ್‌ಗೆ ಭೇಟಿ ನೀಡಲಿದ್ದಾರೆ.

ಎರಡು ದಿನ ನಡೆಯಲಿರುವ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಕರ್ನಾಟಕ ಸಹಿತ ಹಲವು ರಾಜ್ಯಗಳ 90 ಲೋಕಸಭಾ ಕ್ಷೇತ್ರಗಳ ಬಗ್ಗೆ ಅಲ್ಲಿ ಸಮಾಲೋಚನೆ ನಡೆಯಲಿದೆ.

ಏನಿದು ಪ್ರಕರಣ?
ಸದ್ಯ ಭಾರತ ರಾಷ್ಟ್ರೀಯ ಸಮಿತಿಯಾಗಿ ಪರಿವರ್ತನೆಗೊಂಡಿರುವ ಹಿಂದಿನ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಕೆಲವು ಶಾಸಕರಿಗೆ ಬಿಜೆಪಿ ತಲಾ 100 ಕೋಟಿ ರೂ. ಆಮಿಷ ಒಡ್ಡಿ, ಪಕ್ಷ ಸೇರ್ಪಡೆಗೆ ಆಹ್ವಾನ ನೀಡಿತ್ತು ಎಂದು ಆರೋಪಿಸಲಾಗಿತ್ತು. ಅದಕ್ಕೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ಕೇರಳದ ವೈದ್ಯ ಡಾ| ಜಗ್ಗು ಸ್ವಾಮಿ ಸಹಿತ ಹಲವರ ವಿರುದ್ಧ ಕೇಸು ದಾಖಲಿಸಲಾಗಿತ್ತು. ತನಿಖೆಗೆ ರಚಿಸಲಾಗಿದ್ದ ವಿಶೇಷ ತನಿಖಾ ಸಮಿತಿ ಸಂತೋಷ್‌ ಅವರಿಗೆ ನೋಟಿಸ್‌ ಕೂಡ ಜಾರಿ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಯಿನಾಬಾದ್‌ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಮಾಡಿದ್ದ ಆರೋಪವನ್ನು ಬಿಜೆಪಿ ತಿರಸ್ಕರಿಸಿತ್ತು.  ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next