ಬೆಂಗಳೂರು: “ಪೀಣ್ಯ ಡಿಪೋದಲ್ಲಿ (ಘಟಕ-22) ಬಸ್‌ಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಆ ಡಿಪೋ ವ್ಯಾಪ್ತಿಗೆ ಬರುವ ವಿಧಾನಸೌಧ ಬಡಾವಣೆ ಮತ್ತು ಲಕ್ಷ್ಮೀದೇವಿ ನಗರಕ್ಕೆ ಬಸ್ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿಲ್ಲ.”
– ಹೀಗೆಂದು ಸ್ವತಃ ಬಿಎಂಟಿಸಿಯೇ ನಾಗರಿಕರಿಗೆ ತಿಳಿಸಿದೆ. ಬಸ್ ಸೇವೆ ಇಲ್ಲದ್ದರ ಬಗ್ಗೆ ಅಲ್ಲಿನ ನಾಗರಿಕರು ಬೆಸ್ಕಾಂಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಂಸ್ಥೆ, “ಬಸ್‌ಗಳ ಕೊರತೆ ಇರುವುದರಿಂದ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ’ ಎಂದು ಲಿಖೀತವಾಗಿ ತಿಳಿಸಿದೆ.
ವಿಧಾನಸೌಧ ಬಡಾವಣೆ ಮತ್ತು ಲಕ್ಷ್ಮೀದೇವಿ ನಗರವು ಮುಖ್ಯರಸ್ತೆಯಿಂದ 2 ಕಿ.ಮೀ. ಒಳಗಿದೆ. ಈ ಪ್ರದೇಶಕ್ಕೆ ತೆರಳುತ್ತಿದ್ದ 77ಡಿ/1, 77ಎ/1, 98ಇ/2 ಬಸ್‌ಗನ್ನು ಬಿಎಂಟಿಸಿ ಇತ್ತೀಚೆಗೆ ಏಕಾಏಕಿ ಸ್ಥಗಿತಗೊಂಡಿದೆ. ಇದರಿಂದ ಸ್ಥಳೀಯ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ನಿವಾಸಿಗಳು ಮಾಹಿತಿ ಹಕ್ಕಿನಡಿ ಕಾರಣ ಕೇಳಿದಾಗ ನಿಗಮವು ಬಸ್‌ಗಳ ಕೊರತೆಯ ಸಮಸ್ಯೆ ಮುಂದಿಟ್ಟಿದೆ.
ಉದ್ದೇಶಿತ ಮಾರ್ಗದಲ್ಲಿ ಅಂದರೆ ಮಹಾಲಕ್ಷಿ ಲೇಔಟ್‌ನಿಂದ ಟಿವಿಎಸ್ ಕ್ರಾಸ್‌ವರೆಗೆ ಖಾಸಗಿ ವಾಹನಗಳಾದ ಟೆಂಪೊ ಟ್ರಾವೆಲರ್, ಇಂಡಿಕಾ ಕ್ಯಾಬ್, ಆಟೋಗಳು ಹೆಚ್ಚಾಗಿ ಸಂಚರಿಸುತ್ತಿದ್ದು, ಇದರಿಂದ ಬಿಎಂಟಿಸಿಗೆ ನಷ್ಟವಾಗುತ್ತಿದೆ. ಆದರೆ, ನಿಗಮವು ಹೆಚ್ಚು ಬಸ್‌ಗಳ ಸೇವೆ ಕಲ್ಪಿಸಿ, ಖಾಸಗಿ ವಾಹನಗಳ ಹಾವಳಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡುತ್ತಿಲ್ಲ ಎಂದು ವಿಧಾನಸೌಧ ಬಡಾವಣೆ ಮತ್ತು ಲಕ್ಷ್ಮೀದೇವಿ ನಗರ ನಿವಾಸಿಗಳು, ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ರಾತ್ರಿ 8ರ ನಂತರ ಕಾಲ್ನಡಿಗೆಯೇ ಗತಿ
ಬೆಳಗ್ಗೆ 6ರಿಂದ 8 ಹಾಗೂ ಮಧ್ಯಾಹ್ನ 12.30ರಿಂದ 3 ಮತ್ತು ರಾತ್ರಿ 8ರ ನಂತರ ಈ ಪ್ರದೇಶಕ್ಕೆ ಯಾವುದೇ ಬಸ್‌ಗಳಿಲ್ಲ. ಹೀಗಾಗಿ ರಾತ್ರಿ 8ರ ನಂತರ ಸೋನಲ್ ಗಾರ್ಮೆಂಟ್ ಅಥವಾ ರಾಜ್‌ಕುಮಾರ್ ಸಮಾಧಿ ಬಳಿಯ ಬಸ್ ನಿಲ್ದಾಣದಲ್ಲೇ ಇಳಿಯಬೇಕಾದ ನಾಗರಿಕರು, 2 ಕಿಮೀ ನಡೆದೇ ಮನೆಗಳಿಗೆ ತಲುಪಬೇಕಾಗಿದೆ. ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಾಕಗರಿಕರು ಸಿಎಂ, ಸಾರಿಗೆ ಸಚಿವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.