ಬೆಂಗಳೂರು: ದೇಶ ಸೇವೆ, ಸಮಾಜ ಸೇವಾ ಮನೋಭಾವ ಹೊಂದಿರುವ ವ್ಯಕ್ತಿಗಳು ದೇಶದ ಆಸ್ತಿಯಾಗಿದ್ದಾರೆ ಎಂದು ರಾಜ್ಯಪಾಲ ವಿ.ಆರ್.ವಾಲಾ ಅಭಿಪ್ರಾಯಪಟ್ಟರು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಶಾಖೆಯಿಂದ ರಾಜಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚತುರ್ಥ ಚರಣ್, ಹೀರಕ್ ಪಂಕ್ ಮತ್ತು ರಾಜ್ಯ ಪುರಸ್ಕಾರ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಬಾಲ್ಯದಲ್ಲಿ ರೂಢಿಸಿಕೊಂಡ ಉತ್ತಮ ಸಂಸ್ಕಾರವನ್ನು ಯೌವನದವರೆಗೆ ಕಾಯ್ದುಕೊಳ್ಳುವವರು ದೇಶದ ಆಸ್ತಿ ಎಂದರು. ಮಾನವ ಸೇವೆಯ ಗುರಿ ಹೊಂದಿರುವ ಸ್ಕೌಟ್ಸ್ ಮತ್ತು ಗೈಡ್ಸ್‌ಗಳು ವಿಶ್ವದೆಲ್ಲೆಡೆ ಸಂಚರಿಸುತ್ತಿದ್ದಾರೆ. ದೇಶ ಸೇವೆಯ ಸಂಕಲ್ಪ ಹೊಂದುವ ಮೂಲಕ ಮಾನವೀಯತೆ ಮೈಗೂಡಿಸಿಕೊಂಡ ಅವರು, ಮಾನವ ಸೇವೆಯ ಗುರಿ ಬೆನ್ನತ್ತಿ ಓಡುತ್ತಿದ್ದಾರೆ.
ಅದರಂತೆ ಶ್ರವಣಬೆಳಗೊಳದಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಜನತೆಯ ಸೇವೆಗಾಗಿ 2 ಸಾವಿರ ಸ್ಕೌಟ್ಸ್ ಮತ್ತು ಗೈಡ್ಸ್‌ಗಳು ತೆರಳುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೈಯಲ್ಲಿ ಬಂದೂಕು ಇದ್ದರೂ ಅದನ್ನು ಚಲಾಯಿಸಲು ಗುಂಡಿಗೆ ಇಲ್ಲದ ವ್ಯಕ್ತಿಗಳಿಂದ ಏನು ಪ್ರಯೋಜನವಿಲ್ಲ.
ಧೈರ್ಯವೇ ನಮ್ಮ ಶಕ್ತಿಯಾಗಿದ್ದು, ಧೈರ್ಯವಂತ ಮಕ್ಕಳು ನಮ್ಮ ದೇಶದ ಆಸ್ತಿಯಾಗಿದ್ದಾರೆ. ಹೀಗಾಗಿ ದೇಶದ ಒಳಿತಿಗಾಗಿ ಪ್ರಾಣ ಇರುವವರೆಗೂ ಕೆಲಸ ಮಾಡೋಣ ಎಂದು ಯುವಕರಿಗೆ ಕರೆ ನೀಡಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷರೂ ಆದ ಕೆ.ರತ್ನಪ್ರಭಾ ಮಾತನಾಡಿ, ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್‌ಗಳಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ಅವರಲ್ಲಿ ಶಿಸ್ತು, ಜವಾಬ್ದಾರಿ ಮತ್ತು ದೇಶ ಕಟ್ಟುವ ಮನೋಭಾವನೆ ಬೆಳೆದು ಉತ್ತಮ ಪ್ರಜೆಗಳಾಗಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 2017-18ನೇ ಸಾಲಿನ 33 ಜಿಲ್ಲೆಗಳ ಕಬ್ಸ್, ಬುಲ್‌ಬುಲ್ಸ್, ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್‌ಗಳಿಗೆ ಸಾಂಕೇತಿಕವಾಗಿ ಚತುರ್ಥ ಚರಣ್, ಹೀರಕ್ ಪಂಕ್ ಮತ್ತು ರಾಜ್ಯ ಪುರಸ್ಕಾರ ಪ್ರಮಾಣ ಪತ್ರಗಳನ್ನು ರಾಜ್ಯಪಾಲರು ವಿತರಿಸಿದರು. ಈ ವೇಳೆ ಭಾರತ ಸ್ಕೌಟ್ಸ್ ಮತ್ತು ಗೌಡ್ಸ್‌ನ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ರಾಜ್ಯ ಆಯುಕ್ತೆ ಗೀತಾ ನಟರಾಜ್, ಉಪಾಧ್ಯಕ್ಷ ಕೊಂಡಜ್ಜಿ ಷಣ್ಮುಖಪ್ಪ ಹಾಜರಿದ್ದರು.