ಹೊಳೆಹೊನ್ನೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಸೆ. 17 ರಿಂದ ಅ.2 ರವರಗೆ 15 ದಿನಗಳ ಕಾಲ ಸೇವಾ ಪಾಕ್ಷಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಹೊಳೆಹೊನ್ನೂರು ಮಂಡಲದ ಅಧ್ಯಕ್ಷ ಕಲ್ಲಜ್ಜನಾಳ್ ಡಿ. ಮಂಜುನಾಥ ತಿಳಿಸಿದರು.
ಅವರು ಸಮೀಪದ ಅಹತೊಳಲು ಕೈಮರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಸೆ.17 ರಂದು ಪಟ್ಟಣದ ಸಮುದಾಯ ಭವನದಲ್ಲಿ ರಕ್ತದಾನ ಶಿಬಿರ ಹಾಗೂ 15 ದಿನಗಳ ಕಾಲ ಕೋವಿಡ್ ಉಚಿತ ಲಸಿಕಾ ಕಾರ್ಯಕ್ರಮ, ಸೆ.21 ಹಾಗೂ 22 ರಂದು ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಸೆ.25 ರಂದು ಪ್ರತಿ ಬೂತ್ ನಲ್ಲೂ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜಯಂತಿ ಆಚರಣೆ ಹಾಗೂ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ ಮಾಡುವುದರ ಮೂಲಕ ಕಮಲೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸೆ. 25 ರಿಂದ 28 ರವರಗೆ ಫಲಾನುಭವಿಗಳ ಸಮಾವೇಶ, ಸೆ.26 ಹಾಗೂ 27 ರಂದು ಜಲಮೂಲಗಳ ಸ್ವಚ್ಛತೆ, ಅರಳಿ ಸಸಿ ಹಾಗೂ ಹಣ್ಣಿನ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸೆ. 29 ರಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿರಿಗೆ ಗೌರವ ಸಮರ್ಪಣೆ, ಸೆ. 30 ರಂದು ಎಸ್.ಟಿ. ಮೋರ್ಚಾದ ವತಿಯಿಂದ ಎಸ್.ಟಿ. ಕಾಲೋನಿಯಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್ ವಿತರಿಸಲಾಗುವುದು. ಅ.2 ರಂದು ಗಾಂಧಿ ಜಯಂತಿ ಪ್ರಯುಕ್ತ ಖಾದಿ ಉಡುಪುಗಳನ್ನು ಖರೀದಿಸುವ ಖಾದಿ ಉತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಉಪಾಧ್ಯಕ್ಷರುಗಳಾದ ವಿಜಯಮ್ಮ, ನಾಗರತ್ನಮ್ಮ, ವೀರೇಶಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಉಜ್ಜನಪ್ಪ, ಮಲ್ಲಾಪುರದ ಮಲ್ಲೇಶಪ್ಪ ಹಾಜರಿದ್ದರು.