ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಪಡಿತರ ಚೀಟಿಗಳ ತಿದ್ದಿಪಡಿ ಹಾಗೂ ಸೇರ್ಪಡೆಗೆ ಅವಕಾಶ ನೀಡಿದರೂ, ಸರ್ವರ್ ಸಮಸ್ಯೆಯಿಂದ ಜಿಲ್ಲೆಯಲ್ಲಿ ಎರಡು ದಿನದಲ್ಲಿ ಕೇವಲ 800 ಅರ್ಜಿ ಮಾತ್ರ ಸಲ್ಲಿಕೆ ಆಗಿದ್ದು ಸಾವಿರಾರು ಮಂದಿಗೆ ತಿದ್ದುಪಡಿ ಹಾಗೂ ಸೇರ್ಪಡೆಗೆ ಅವಕಾಶ ಗ್ಯಾರಂಟಿ ಯೋಜನೆಗಳು ಕೈ ತಪ್ಪುವ ಆತಂಕ ಎದುರಾಗಿದೆ.
ಹೌದು, ರಾಜ್ಯ ಸರ್ಕಾರ ಮಹತ್ವಕಾಂಕ್ಷಿ ಗೃಹಲಕ್ಷ್ಮೀ ಯೋಜನೆಗೆ ಪಡಿತರ ಚೀಟಿಯಲ್ಲಿ ಯಾಜಮಾನಿ ಎಂದು ನಮೂದಾಗಿರುವರನ್ನು ಮಾತ್ರ ಪರಿಗಣಿಸಿ ಅರ್ಜಿ ಸ್ಪೀಕರಿಸಿದ್ದು, ಇದರಿಂದ ಜಿಲ್ಲೆಯಲ್ಲಿ ಸಾವಿರಾರು ಮಂದಿ ಮಹಿಳೆಯರು ಗೃಹಲಕ್ಷ್ಮಿಯಿಂದ ವಂಚಿತರಾಗಿದ್ದಾರೆ. ಆದರೆ, ಸರ್ಕಾರ ಪಡಿತರ ಚೀಟಿ ತಿದ್ದುಪಡಿ ಹಾಗೂ ಕುಟುಂಬಸ್ಥರ ಹೆಚ್ಚುವರಿ ಸೇರ್ಪಡೆಗೆ ಅವಕಾಶ ಕಲ್ಪಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿಕೆ ಅವಕಾಶ ಕಲ್ಪಿಸಿದರೂ, ಅರ್ಜಿ ಸ್ಪೀಕಾರ ಆರಂಭಗೊಂಡ ದಿನದಿಂದಲೂ ಕೂಡ ತಾಂತ್ರಾಂಶದ ಸರ್ವರ್ ಕಿರಿಕಿರಿಯ ಪರಿಣಾಮ ಸೈಬರ್ ಕೇಂದ್ರಗಳಲ್ಲಿ ಸಾರ್ವಜನಿಕರು ಪಡಿತರ ಚೀಟಿ ತಿದ್ದುಪಡಿ ಹಾಗೂ ಸೇರ್ಪಡೆಗೆ ಅವಕಾಶ ಸಿಗದೇ ತೀವ್ರ ಸಮಸ್ಯೆ ಎದುರಾಗಿದೆ. ಜಿಲ್ಲೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನೀಡಿದ್ದ ಗಡವು ಸೆ.8ಕ್ಕೆ ಕೊನೆಗೊಂಡಿದೆ. ಕೇವಲ ಎರಡು ದಿನದಲ್ಲಿ ಮಾತ್ರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಸರ್ಕಾರ ಅವಕಾಶ ನೀಡಿತ್ತು.
ಗುಡಿಬಂಡೆಯಲ್ಲಿ ಬರೀ 8 ಅರ್ಜಿ ಸಲ್ಲಿಕೆ: ಆನ್ ಲೈನ್ ತಿದ್ದುಪಡಿಗೆ ಸರ್ವರ್ ಸಮಸ್ಯೆ ಬಹುವಾಗಿ ಕಾಡಿದ ಪರಿಣಾಮ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ಬರೀ 8 ಅರ್ಜಿ ಸಲ್ಲಿಕೆ ಆಗಿದೆ. ನೂರಾರು ಫಲಾನುವಿಗಳು ಗಂಟೆಗಟ್ಟಲೇ ಸೈಬರ್ ಕೇಂದ್ರಗಳ ಮುಂದೆ ತಿದ್ದುಪಡಿ ಹಾಗೂ ಕುಟುಂಬಸ್ಥರ ಹೆಸರು ಸೇರ್ಪಡೆಗೆ ಕಾದು ಕೊನೆಗೂ ಸಾಧ್ಯವಾಗದೇ ವಾಪಸ್ ಹೋಗಿದ್ದಾರೆ. ಇದೇ ರೀತಿಯ ಪರಿಸ್ಥಿತಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕಂಡು ಬಂದಿದೆ.
ಜಿಲ್ಲೆಯಲ್ಲಿ ಗ್ಯಾರಂಟಿ ಸೌಲಭ್ಯಗಳು ಮರೀಚಿಕೆ: ಜಿಲ್ಲೆಯಲ್ಲಿ ಪಡಿತರ ಚೀಟಿಗೆ ಸೇರ್ಪಡೆ ಹಾಗೂ ತಿದ್ದುಪಡಿಗೆ ಸಾಕಷ್ಟು ಮಂದಿ ಹಲವು ದಿನಗಳಿಂದ ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದರು. ಆದರೆ ಸರ್ಕಾರ ಪಡಿತರ ಚೀಟಿಯಲ್ಲಿನ ಮಾಹಿತಿ ತಿದ್ದುಪಡಿ ಹಾಗೂ ಹೆಚ್ಚುವರಿ ಕುಟುಂಬದ ಸದಸ್ಯರ ಸೇರ್ಪಡೆಗೆ ಅವಕಾಶ ಕಲ್ಪಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದರೂ ಜಿಲ್ಲೆಯಲ್ಲಿ ಸರ್ವರ್ ಸಮಸ್ಯೆಯಿಂದ ಇನ್ನೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಸಿಗದೇ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಗಳಿಂದ ವಂಚಿತರಾಗುವಂತಾಗಿದೆ.
ಜಿಲ್ಲೆಯಲ್ಲಿ ಪಡಿತರ ಚೀಟಿ ತಿದ್ದುಪಡಿ ಹಾಗೂ ಹೆಸರು ಸೇರ್ಪಡೆಗೆ ಸೆ.6 ರಿಂದ ಸೆ.8ರ ವರೆಗೂ ಒಟ್ಟು 800 ಅರ್ಜಿಗಳು ಜಿಲ್ಲಾದ್ಯಂತ ಸಲ್ಲಿಕೆಯಾಗಿವೆ. ಜಿಲ್ಲೆಗೆ ಎರಡನೇ ಹಂತದಲ್ಲಿ ಅನ್‌ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ಸಿಗಬಹುದು.
-ಸವಿತಾ, ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
-ಕಾಗತಿ ನಾಗರಾಜಪ್ಪ