Advertisement
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವ ಮುನ್ನ ಮನೆ ಬಾಗಿಲಿಗೆ ತೆರಳಿ ಸಮೀಕ್ಷೆ ನಡೆಸ ಬೇಕೆಂದು ರಾಜ್ಯ ಹೈಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 2020ರಲ್ಲಿ ಸರ್ವೇಗೆ ಚಾಲನೆ ನೀಡಿದ್ದರು. ಈ ನಡುವೆ ಕೋವಿಡ್ ಹಿನ್ನೆಲೆ ಸಮೀಕ್ಷೆ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಸಮೀಕ್ಷೆ ಆರಂಭಿಸಲು ಜಿಲ್ಲಾಡಳಿತಕ್ಕೆ ಸರಕಾರದ ಸುತ್ತೋಲೆ ಬಂದಿದೆ.
Related Articles
Advertisement
ಸ್ಥಳೀಯಾಡಳಿತಕ್ಕೆ ಒತ್ತಡ! :
ಸರಕಾರ ಸಮೀಕ್ಷೆಯನ್ನು ಹೇಗಾ ದರೂ ಮಾಡಿ ಪೂರ್ಣಗೊಳಿಸಲು ಸ್ಥಳೀಯಾಡಳಿತಕ್ಕೆ ಜವಾಬ್ದಾರಿ ನೀಡಿದೆ. ಪೌರಾಡಳಿತ ಇಲಾಖೆ ತನ್ನ ವ್ಯಾಪ್ತಿ ಯಲ್ಲಿ ಬರುವ ನಗರಾಡಳಿತ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಸಿಬಂದಿಗಳನ್ನು ಬಳಸಿಕೊಂಡು ಸರ್ವೇ ನಡೆಸಲು ಮುಂದಾಗಿದೆ. ಪ್ರಸ್ತುತ ಸಿಬಂದಿ ಕೊರತೆಯಿಂದ ನಲುಗು ತ್ತಿರುವ ನಗರಾಡಳಿತಕ್ಕೆ ಈ ಆದೇಶದ ನುಂಗಲಾರದ ತುತ್ತಾಗಿದೆ. ಗ್ರಾ.ಪಂ.ಗಳಲ್ಲಿ ಪಿಡಿಒಗಳಿಗೆ ಸರ್ವೇ ಜವಾಬ್ದಾರಿ ನೀಡಿದ್ದು, ಅಂಗನವಾಡಿ ಕಾರ್ಯಕರ್ತರು ಸಹಕಾರ ನೀಡದ ಹಿನ್ನೆಲೆಯಲ್ಲಿ ಕೆಲ ಗ್ರಾ.ಪಂ.ಗಳಲ್ಲಿ ಸಮೀಕ್ಷೆ ಕಾರ್ಯ ಪ್ರಾರಂಭವಾಗಿಲ್ಲ.
ಅರ್ಜಿ ಭರ್ತಿಗೆ 45 ನಿಮಿಷ :
ಒಂದು ಅರ್ಜಿಯನ್ನು ಭರ್ತಿ ಮಾಡಲು ಕನಿಷ್ಠವೆಂದರೂ 45 ನಿಮಿಷ ತೆಗೆದುಕೊಳ್ಳುತ್ತದೆ. ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 55 ಸಾವಿರ ಮನೆಗಳಿವೆ. ಪ್ರತಿಯೊಂದು ಮನೆಗೆ ತೆರಳಿ ಸರ್ವೇ ಮುಗಿಸುವ ವೇಳೆಗೆ ವರ್ಷ ಕಳೆಯಲಿದೆ ಎಂದು ಸಿಬಂದಿಯೊಬ್ಬರು ಉದಯವಾಣಿಗೆ ಮಾಹಿತಿ ನೀಡಿದರು.
ಜಿಪಿಎಸ್ ಸೇರಿದಂತೆ ವಿವಿಧ ತಾಂತ್ರಿಕ ಸಮಸ್ಯೆ! :
ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಗೆ ಆ್ಯಪ್‌ನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ ಪ್ರತಿಯೊಂದು ಮನೆಯ 0-18 ವರ್ಷದೊಳಗಿನ ಮಕ್ಕಳ ಮಾಹಿತಿಯನ್ನು ಜಿಪಿಎಸ್ ಮೂಲಕ ಆಪ್‌ಲೋಡ್ ಮಾಡಬೇಕು. ಏಕಕಾಲ ರಾಜ್ಯಾದ್ಯಂತ ಈ ಆ್ಯಪ್ ಕಾರ್ಯಾಚರಿಸುತ್ತಿರುವುದರಿಂದ ಜಿಪಿಎಸ್ ಕಡಿತ ಸೇರಿದಂತೆ ವಿವಿಧ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಇದರಿಂದಾಗಿ ಒಂದು ಅರ್ಜಿ ಭರ್ತಿ ಮಾಡಲು 1 ಗಂಟೆ ಹಿಡಿಯುತ್ತಿದೆ. ಈ ತಾಂತ್ರಿಕ ಸಮಸ್ಯೆಯಿಂದ ಕೇವಲ 8 ಅರ್ಜಿಗಳನ್ನು ಭರ್ತಿ ಮಾಡಲು ಸಾಧ್ಯ ಎಂದು ಸಿಬಂದಿ ಕಳವಳ ವ್ಯಕ್ತಪಡಿಸಿದ್ದಾರೆ.
ಉಡುಪಿ ನಗರಾಡಳಿತ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವ ಸಿಬಂದಿಗಳನ್ನು 60 ವಾರ್ಡ್‌ಗಳಿಗೆ ನೇಮಕ ಮಾಡಲಾಗಿದೆ. ಅವರಿಗೆ ತರಬೇತಿ ನೀಡಲಾಗಿದ್ದು ಸರ್ವೆ ಕೆಲಸ ಆರಂಭವಾಗಿದೆ. –ಸಂತೋಷ್, ಉಪ ಆಯುಕ್ತರು,ಜಿಲ್ಲಾ ನಗರಾಭಿವೃದ್ಧಿ ಕೋಶ, ಉಡುಪಿ.