Advertisement

ಸರಣಿ ಕ್ಲೀನ್‌ ಸ್ವೀಪ್‌: ಭಾರತದ ಗುರಿ: ಭಾರತ-ಶ್ರೀಲಂಕಾ ಇಂದು ಮೂರನೇ ಏಕದಿನ

11:23 PM Jan 14, 2023 | Team Udayavani |

ತಿರುವನಂತಪುರ: ಸರಣಿ ಕ್ಲೀನ್‌ ಸ್ವೀಪ್‌ ಗೈಯುವ ಗುರಿಯೊಂದಿಗೆ ಭಾರತವು ರವಿವಾರ ನಡೆಯುವ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ನಾಯಕ ರೋಹಿತ್‌ ಶರ್ಮ ಅವರು ಬ್ಯಾಟಿಂಗ್‌ ಕ್ರಮಾಂಕದ ಬದಲು ಬೌಲಿಂಗ್‌ ಆಯ್ಕೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುವ ಸಾಧ್ಯತೆಯಿದೆ.

Advertisement

ಗುವಾಹಾಟಿ ಮತ್ತು ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ ಅಮೋಘ ಗೆಲುವು ದಾಖಲಿಸಿ ಈಗಾಗಲೇ ಸರಣಿ ಗೆದ್ದಿರುವ ಭಾರತವು ಮೂರನೇ ಪಂದ್ಯದಲ್ಲೂ ಗೆಲ್ಲುವ ಮನಸ್ಸಿನಿಂದಲೇ ಹೋರಾಡಲಿದೆ. ಇದೇ ವೇಳೆ ಸರಣಿಯಲ್ಲಿ ಆಡದಿರುವ ಬ್ಯಾಟ್ಸ್‌ಮನ್‌ ಮತ್ತು ಬೌಲರ್‌ಗಳಿಗೆ ಅವಕಾಶ ಕಲ್ಪಿಸಲು ರೋಹಿತ್‌ ಚಿಂತನೆ ನಡೆಸುತ್ತಿದ್ದಾರೆ.

ಭಾರತವು ಮುಂದಿನ ವಾರದಿಂದ ನ್ಯೂಜಿಲ್ಯಾಂಡ್‌ ವಿರುದ್ಧ ಟಿ20 ಮತ್ತು ಏಕದಿನ ಸರಣಿಯಲ್ಲಿ ಆಡಲಿದೆ. ತಂಡ ಆತ್ಮವಿಶ್ವಾಸದಿಂದ ನ್ಯೂಜಿಲ್ಯಾಂಡ್‌ ತಂಡವನ್ನು ಎದುರಿಸಲು ಇಲ್ಲಿ ಸರಣಿ ಕ್ಲೀನ್‌ ಸ್ವೀಪ್‌ ಗೆಲುವು ಪಡೆಯುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸಲಿದೆ.

ತಂಡದ ಅಗ್ರ ಐವರು ಆಟಗಾರರು ಉತ್ತಮ ಫಾರ್ಮ್ ನಲ್ಲಿದ್ದಾರೆ. ರೋಹಿತ್‌, ಕೊಹ್ಲಿ, ಸೂರ್ಯಕುಮಾರ್‌ ಮೊದಲೆರಡು ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಆದರೆ ಇಲ್ಲಿನ ಪಿಚ್‌ ಬೌಲರ್‌ಗಳಿಗೆ ನೆರವಾಗುವ ಹಿನ್ನೆಲೆಯಲ್ಲಿ ಬೌಲಿಂಗ್‌ ಪಡೆಯಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆಯಿದೆ.

ನ್ಯೂಜಿಲ್ಯಾಂಡ್‌ ವಿರುದ್ಧ ಟಿ20 ಮತ್ತು ಏಕದಿನ ಸರಣಿ ಇರುವ ಕಾರಣ ಕೆಲವು ಬೌಲರ್‌ಗಳಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡುವ ನಿರೀಕ್ಷೆಯಿದೆ.

Advertisement

ಶ್ರೀಲಂಕಾ ತಂಡ ಅಂತಿಮ ಪಂದ್ಯದಲ್ಲಿ ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನಿಸುವ ಸಾಧ್ಯತೆಯಿದೆ. ಏಕದಿನಕ್ಕೆ ಪಾದಾರ್ಪಣೆಗೈದ ಪಂದ್ಯದಲ್ಲಿಯೇ ಅರ್ಧಶತಕ ದಾಖಲಿಸಿದ ನುವನಿದು ಫೆರ್ನಾಂಡೊ ಅವರ ಮೇಲೆ ತಂಡ ಹೆಚ್ಚಿನ ನಂಬಿಕೆ ಇರಿಸಿಕೊಂಡಿದೆ. ಅವರಲ್ಲದೇ ನಾಯಕ ದಸುನ್‌ ಶಣಕ, ಕುಸಲ್‌ ಮೆಂಡಿಸ್‌, ಪಥುನ್‌ ನಿಸ್ಸಂಕ ಉತ್ತಮ ನಿರ್ವಹಣೆ ನೀಡುವ ಸಾಧ್ಯತೆಯಿದೆ.

ಉಭಯ ತಂಡಗಳು
ಭಾರತ: ರೋಹಿತ್‌ ಶರ್ಮ (ನಾಯಕ), ಹಾರ್ದಿಕ್‌ ಪಾಂಡ್ಯ, ಶುಭ್‌ಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಶ್ರೇಯಸ್‌ ಅಯ್ಯರ್‌, ಕೆಎಲ್‌ ರಾಹುಲ್‌, ಇಶಾನ್‌ ಕಿಶನ್‌, ವಾಷಿಂಗ್ಟನ್‌ ಸುಂದರ್‌, ಯಜುವೇಂದ್ರ ಚಹಲ್‌, ಕುಲದೀಪ್‌ ಯಾದವ್‌, ಅಕ್ಷರ್‌ ಪಟೇಲ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌, ಉಮ್ರಾನ್‌ ಮಲಿಕ್‌, ಅರ್ಷದೀಪ್‌ ಸಿಂಗ್‌.

ಶ್ರೀಲಂಕಾ:
ದಸುನ್‌ ಶಣಕ (ನಾಯಕ), ಕುಸಲ್‌ ಮೆಂಡಿಸ್‌, ಪಥುನ್‌ ನಿಸ್ಸಂಕ, ಅವಿಷ್ಕಾ ಫೆರ್ನಾಂಡೊ, ಸದೀರ ಸಮರವಿಕ್ರಮ, ಚರಿತ ಅಸಲಂಕ, ಧನಂಜಯ ಡಿ’ಸಿಲ್ವ, ವನಿಂದು ಹಸರಂಗ, ಅಶೆನ್‌ ಬಂಡಾರ, ಮಹೀಶ್‌ ತೀಕ್ಷಣ, ಚಮಿಕ ಕರುಣರತ್ನ, ದಿಲ್ಶನ್‌ ಮದುಶಂಕ, ಕಸುನ್‌ ರಜಿತ, ನುವನಿದು ಫೆರ್ನಾಂಡೊ, ದುನಿತ್‌ ವೆಲ್ಲಲಗೆ, ಪ್ರಮೋದ್‌ ಮದುಶನ್‌, ಲಹಿರು ಕುಮಾರ.

Advertisement

Udayavani is now on Telegram. Click here to join our channel and stay updated with the latest news.

Next