ಮಂಗಳೂರು: ಪ್ರತ್ಯೇಕ ರಾಜ್ಯದ ಬೇಡಿಕೆಯ ವಿವಾದದ ಹಿಂದೆ ರಾಜ್ಯದ ಬಿಜೆಪಿ ನಾಯಕರು ನೇರವಾಗಿ ಭಾಗಿಯಾಗಿದ್ದಾರೆ; ಇದು ಚುನಾವಣ ಗಿಮಿಕ್ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಆರೋಪಿಸಿದ್ದಾರೆ. ಶಾಸಕ ಶ್ರೀರಾಮುಲು ರಾಜೀನಾಮೆಗೂ ಸಿದ್ಧ ಎಂದು ಹೇಳಿ 99 ಶಾಸಕರನ್ನು ಸೇರಿಸಿ ಪ್ರತಿಭಟನೆಗೆ ಮುಂದಾಗಿರುವುದು ಪ್ರತ್ಯೇಕ ರಾಜ್ಯದ ಬೇಡಿಕೆಯಲ್ಲಿ ಬಿಜೆಪಿ ಪಾತ್ರ ಇದೆ ಎನ್ನುವುದನ್ನು ಸೂಚಿಸುತ್ತದೆ ಎಂದು ಐವನ್ ಸೋಮವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅನುದಾನ ಹಂಚಿಕೆಯಲ್ಲಿ ರಾಜ್ಯ ಸರಕಾರ ಅಥವಾ ಮುಖ್ಯಮಂತ್ರಿಗಳು ತಾರತಮ್ಯ ಎಸಗಿಲ್ಲ; ರಾಜ್ಯದ ಎಲ್ಲ 30 ಜಿಲ್ಲೆಗಳಿಗೂ ಸಮಾನವಾಗಿ ಹಂಚಿಕೆ ಮಾಡಲಾಗಿದೆ. ರಾಜ್ಯದ ಏಕೀಕರಣಕ್ಕೆ ಬಹಳಷ್ಟು ವರ್ಷಗಳೇ ಹಿಡಿದಿದ್ದು, 1956ರಿಂದ ಅನುದಾನ ವಿತರಣೆಯಲ್ಲಿ ತಾರತಮ್ಯ ಮಾಡಿಲ್ಲ. ಬಜೆಟ್‌ನ ಶೇ. 60ನ್ನು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನೀಡಲಾಗುತ್ತಿದೆ ಎಂದರು.
ಸಾಲ ಮನ್ನಾ ವಿಚಾರದಲ್ಲಿ 13 ಜಿಲ್ಲೆಗಳ ರೈತರನ್ನು ಸೇರಿಸಿ ಪ್ರತಿಭಟನೆ ನಡೆಸಲಾಗುವುದು ಎಂಬ ಬಿಜೆಪಿ ನಾಯಕರ ಹೇಳಿಕೆಯನ್ನು ಪ್ರಸ್ತಾವಿಸಿದ ಐವನ್ ಡಿ’ಸೋಜಾ, ಇನ್ನುಳಿದ ಜಿಲ್ಲೆಗಳಲ್ಲಿ ರೈತರಿಲ್ಲವೇ? ಪ್ರತ್ಯೇಕ ರಾಜ್ಯ ಬೇಡಿಕೆ ವಿಚಾರಕ್ಕೆ ತಮ್ಮ ಬೆಂಬಲ ಇಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಹೇಳುತ್ತಾರೆ. ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿರುವ ಶ್ರೀರಾಮುಲು, ಉಮೇಶ್ ಕತ್ತಿ ಮೇಲೆ ಯಾವ ಕ್ರಮ ಕೈಗೊಳ್ಳುವಿರಿ ಎಂದು ಪ್ರಶ್ನಿಸಿದರು.
ಬಿಜೆಪಿಗೆ ತಕ್ಕ ಪಾಠ
ಅಭಿವೃದ್ಧಿಯ ಹೆಸರಿನಲ್ಲಿ ಬಿಜೆಪಿ ರಾಜ್ಯವನ್ನು ಒಡೆಯುತ್ತಿದೆ. ವಿಧಾನಸಭೆ ಚುನಾವಣೆ ವೇಳೆ ಭಾವನಾತ್ಮಕ ವಿಚಾರಗಳನ್ನು ಎತ್ತಿಕೊಂಡ ಬಿಜೆಪಿ ಈಗ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟು ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ. ಆದರೆ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.