Advertisement

ಪಚ್ಚನಾಡಿ ಶುದ್ಧೀಕರಿಸಿದ ತ್ಯಾಜ್ಯ ನೀರು ಹರಿಸಲು ಪ್ರತ್ಯೇಕ ಪೈಪ್‌ಲೈನ್‌

10:33 AM May 16, 2022 | Team Udayavani |

ಪಚ್ಚನಾಡಿ: ಬಹುಗ್ರಾಮ ಕುಡಿಯುವ ನೀರಿನ ಮರವೂರು ಡ್ಯಾಂಗೆ ಪಚ್ಚನಾಡಿ ಎಸ್‌ಟಿಪಿ ಪ್ಲಾಂಟ್‌ನಿಂದ ಹೆಚ್ಚುವರಿ ಶುದ್ಧೀಕರಿಸಿ ತ್ಯಾಜ್ಯ ನೀರು ಹರಿಯುವುದನ್ನು ತಡೆಗಟ್ಟಲು ಪ್ರತ್ಯೇಕ ಕೊಳವೆ ಮಾರ್ಗ ಅಳವಡಿಸಿ ಡ್ಯಾಂನ ಕೆಳಭಾಗಕ್ಕೆ ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ಹರಿಸುವ ಪೈಪ್‌ಪೈನ್‌ ಕಾಮಗಾರಿಗೆ ಮಂಗಳೂರು ಪಾಲಿಕೆ ನಿರ್ಧರಿಸಿದೆ.

Advertisement

ತ್ಯಾಜ್ಯ ನೀರನ್ನು ಶುದ್ಧೀಕರಿಸದೆ ಮರವೂರು ಡ್ಯಾಂಗೆ ಬಿಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎಚ್ಚೆತ್ತು ಕೊಂಡಿರುವ ಮನಪಾ ಪಚ್ಚನಾಡಿ ಎಸ್‌ ಟಿಪಿಯಲ್ಲಿ ಸಮಗ್ರ ವಾಗಿ ತ್ಯಾಜ್ಯ ನೀರು ಶುದ್ಧೀಕರಣಕ್ಕೆ ಒತ್ತು ನೀಡುತ್ತಿದೆ. ಇದರಂತೆ ಹೆಚ್ಚುವರಿ ಶುದ್ದೀಕರಿಸಿದ ನೀರನ್ನು ಡ್ಯಾಂನ ಕೆಳಭಾಗಕ್ಕೆ ಹರಿಸುವ ಪೈಪ್‌ಪೈನ್‌ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ.

ಪಚ್ಚನಾಡಿಯಲ್ಲಿರುವ ಒಳಚರಂಡಿಯ ತ್ಯಾಜ್ಯ ನೀರು ಶುದ್ಧೀಕರಣ ಘಟಕದಲ್ಲಿ (ಸೆಕೆಂಡರಿ ಟ್ರೀಟ್‌ಮೆಂಟ್‌ ಪ್ಲಾಂಟ್‌ -ಎಸ್‌ಟಿಪಿ) ಒಳಚರಂಡಿಯ ತ್ಯಾಜ್ಯ ನೀರನ್ನು ಶುದ್ಧೀಕರಿಸಲಾಗುತ್ತದೆ. ಇದನ್ನು ಪಿಲಿಕುಳದಲ್ಲಿರುವ ಟರ್ಶಿನರಿ ಟ್ರೀಟ್‌ ಮೆಂಟ್‌ ಪ್ಲಾಂಟ್‌ಗೆ (ಟಿಟಿಪಿ) ಬಿಡ ಲಾಗುತ್ತದೆ. ಅಲ್ಲಿ ಮತ್ತೆ ಸ್ವತ್ಛ ನೀರನ್ನಾಗಿ ಪರಿವರ್ತಿಸಿ ಪಿಲಿಕುಳ ನಿಸರ್ಗಧಾಮದಲ್ಲಿ ಗಿಡಗಳಿಗೆ ಬಳಸಲಾಗುತ್ತಿದೆ. ಪ್ರತೀದಿನ ಹೀಗೆ ಬರುವ 6.5 ಎಂ.ಎಲ್.ಡಿ. ತ್ಯಾಜ್ಯ ನೀರನ್ನು ಪಿಲಿಕುಳಕ್ಕೆ ಪ್ರತಿನಿತ್ಯ ನೀಡಲಾಗುತ್ತದೆ. ಉಳಿದ ಎಸ್‌ಟಿಪಿಯಿಂದ ಹರಿದ 2.22 ಎಂಎಲ್‌ಡಿ ಹೆಚ್ಚುವರಿ ನೀರನ್ನು ಪಾಲಿಕೆಯ ಸ್ವಾಭಾವಿಕ ನಾಲೆಯ ಮುಖಾಂತರ ಫಲ್ಗುಣಿ ನದಿಗೆ ಬಿಡಲಾಗುತ್ತಿತ್ತು.

ಹೆಚ್ಚುವರಿ ನೀರು ಗಾಲ್ಫ್ ಕ್ಲಬ್‌ಗೆ?

ಎಸ್‌ಟಿಪಿಯಿಂದ ಹೊರಗಡೆ ಹರಿದ ನೀರನ್ನು ಮರವೂರು ಸೇತುವೆಯ ಮೇಲ್ಭಾಗಕ್ಕೆ ಬಿಡದಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಜತೆಗೆ ನ್ಯಾಯಾಲಯ ಕೂಡ ಪಾಲಿಕೆಗೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಅದನ್ನು ಕೆಳಭಾಗಕ್ಕೆ ಬಿಡಲು ಕ್ರಮಕೈಗೊಳ್ಳಲಾಗುತ್ತಿದೆ. ಜತೆಗೆ ಹೆಚ್ಚುವರಿ ನೀರನ್ನು ತಮಗೆ ನೀಡುವಂತೆ ಪಿಲಿಕುಳ ಗಾಲ್ಫ್ ಕ್ಲಬ್‌ನಿಂದ ಪಾಲಿಕೆಗೆ ಮನವಿ ಬಂದಿರುವ ಹಿನ್ನೆಲೆಯಲ್ಲಿ ನದಿಗೆ ನೀರು ಹರಿಯುವ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

Advertisement

ನಗರದಲ್ಲಿ 4 ಸಂಸ್ಕರಣೆ ಘಟಕ

‌ಕುದ್ರೋಳಿ, ಪಾಂಡೇಶ್ವರ, ಪಡೀಲ್‌, ಎಕ್ಕೂರು, ಕೊಟ್ಟಾರಚೌಕಿ ಸಹಿತ ಮಂಗಳೂರಿನ ಒಟ್ಟು 22 ಕಡೆಗಳಲ್ಲಿ ವೆಟ್‌ವೆಲ್‌ ನಿರ್ಮಿಸಲಾಗಿದೆ. ಅಂದರೆ, ಶೌಚಾಲಯ, ಪಾತ್ರೆ ತೊಳೆಯುವ ನೀರು ಒಳಚರಂಡಿಯ ಮೂಲಕ ಮ್ಯಾನ್‌ಹೋಲ್‌ (ಒಟ್ಟು 25 ಸಾವಿರಕ್ಕೂ ಅಧಿಕ) ದಾಟಿ, ವೆಟ್‌ ವೆಲ್‌ಗೆ ಹರಿಯುತ್ತದೆ. ಅಲ್ಲಿಂದ ಮಂಗಳೂರಿನ ನಾಲ್ಕು ಕಡೆಗಳಲ್ಲಿ ಪಾಲಿಕೆ ವತಿಯಿಂದ ನಿರ್ಮಿಸಿರುವ ಎಸ್‌ಟಿಪಿಗೆ (ಸಂಸ್ಕರಣೆ ಘಟಕ) ಬರುತ್ತದೆ. 16 ಎಂಎಲ್‌ಡಿ ಸಾಮರ್ಥ್ಯದ ಸುರತ್ಕಲ್‌ ಎಸ್‌ಟಿಪಿ, 20 ಎಂಎಲ್‌ಡಿಯ ಜಪ್ಪಿನಮೊಗರು ಎಸ್‌ಟಿಪಿ, 44.4 ಎಂಎಲ್‌ಡಿಯ ಕಾವೂರು ಎಸ್‌ಟಿಪಿ ಹಾಗೂ 8.7 ಎಂಎಲ್‌ಡಿ ಸಾಮರ್ಥ್ಯದ ಪಚ್ಚನಾಡಿ ಎಸ್‌ಟಿಪಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣೆಯಾಗುತ್ತದೆ.

 ಶೀಘ್ರ ಕಾಮಗಾರಿ

ಪಚ್ಚನಾಡಿ ಎಸ್‌ಟಿಪಿ ಪ್ಲಾಂಟ್‌ನಿಂದ ಹೆಚ್ಚುವರಿ ಶುದ್ಧೀಕರಿಸಿ ತ್ಯಾಜ್ಯ ನೀರು ಹರಿಯುವುದನ್ನು ತಡೆಗಟ್ಟಲು ಪ್ರತ್ಯೇಕ ಕೊಳವೆ ಮಾರ್ಗ ಅಳವಡಿಸಿ ಡ್ಯಾಂನ ಕೆಳಭಾಗಕ್ಕೆ ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ಹರಿಸುವ ಪೈಪ್‌ಪೈನ್‌ ಕಾಮಗಾರಿಗೆ ನಿರ್ಧರಿಸಲಾಗಿದೆ. ಶೀಘ್ರ ಕಾಮಗಾರಿ ನಡೆಸಲಾಗುವುದು. – ಪ್ರೇಮಾನಂದ ಶೆಟ್ಟಿ, ಮೇಯರ್‌, ಪಾಲಿಕೆ

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next