ಬೆಂಗಳೂರು: ಶಾಲೆಗಳಲ್ಲಿ ಆಟ, ಪಾಠ ಹಾಗೂ ಊಟಕ್ಕೆ ಪ್ರತ್ಯೇಕ ಬೆಲ್ ಇರುವಂತೆ ಇನ್ನು ಮುಂದೆ ಮಕ್ಕಳು ಶಾಲಾ ಅವಧಿಯಲ್ಲಿ ಕಡ್ಡಾಯವಾಗಿ ಶುದ್ಧ ನೀರು ಕುಡಿಯಲು 10 ನಿಮಿಷದ ಅವಧಿ ಇರಲಿದೆ ಹಾಗೂ ಇದಕ್ಕಾಗಿ ಬೆಲ್ ಕೂಡ ಭಾರಿಸಲಾಗುತ್ತದೆ.
ಮಾನವನ ಆರೋಗ್ಯಕ್ಕೆ ನೀರು ಅತಿ ಮುಖ್ಯ. ಅದರಲ್ಲೂ ಮಕ್ಕಳು ಸಮಯಕ್ಕೆ ಸರಿಯಾಗಿ ನೀರು ಸೇವಿಸಬೇಕು. ಇಲ್ಲದಿದ್ದರೆ ಮಕ್ಕಳ ಬೆಳವಣಿಗೆಗೆ ಮತ್ತು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಇದನ್ನೆಲ್ಲ ಮನಗಂಡ ಶಿಕ್ಷಣ ಇಲಾಖೆಯು, ಇನ್ನು ಮುಂದೆ ರಾಜ್ಯದ ಪ್ರತಿ ಶಾಲೆಯಲ್ಲೂ ಕುಡಿಯುವ ನೀರಿನ ಬೆಲ್ ಅವಧಿಯನ್ನು ನಿಗದಿಪಡಿಸಿದೆ.
ಪ್ರತಿ ದಿನ ಶಾಲಾ ಅವಧಿಯಲ್ಲಿ ಬೆಳಗ್ಗೆ ಎರಡನೇ ಅವಧಿ ಮತ್ತು ಮೂರನೇ ಅವಧಿಯ ನಡುವಿನ 10 ನಿಮಿಷ ಮತ್ತು ಮಧ್ಯಾಹ್ನದ ಮೂರು ಮತ್ತು ನಾಲ್ಕನೇ ಅವಧಿಯ ನಡುವಿನ 10 ನಿಮಿಷವನ್ನು ಮಕ್ಕಳಿಗೆ ನೀರು ಕುಡಿಯಲು ಮೀಸಲಿಡಬೇಕು. ಆದ್ದರಿಂದ ಬೆಳಗ್ಗೆ ಮತ್ತು ಮಧ್ಯಾಹ್ನ ಈ ಅವಧಿಯಲ್ಲಿ ಮಕ್ಕಳು ನೀರು ಕುಡಿಯುವುದಕ್ಕಾಗಿ 10 ನಿಮಿಷ ಕುಡಿಯುವ ನೀರಿನ ಬೆಲ್ ಹೊಡೆಯಬೇಕೆಂದು ಸುತ್ತೂಲೆಯಲ್ಲಿ ಸೂಚಿಸಿದ್ದಾರೆ.
ಶಾಲೆಗಳಿಗೆ ಸೂಚನೆ: ಶಾಲೆಗಳಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಮಕ್ಕಳೇ ಬಾಟಲಿನಲ್ಲಿ ನೀರು ತಂದು ಉಪಯೋಗಿದರೆ ಈ ಅವಧಿ ಸದುಪಯೋಗಕ್ಕೆ ತಿಳಿಸಬೇಕು. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ ಸ್ಥಳೀಯ ಸಂಸ್ಥೆ, ಗ್ರಾಪಂ, ಪಟ್ಟಣ ಪಂಚಾಯಿತಿ, ಎಸ್‌ಡಿಎಂಸಿ ಇತರೆ ಸಂಸ್ಥೆಗಳ ನೆರವಿನೊಂದಿಗೆ ಆರ್‌ಒ ಘಟಕ ಉಪಯೋಗಕ್ಕೆ ಅಳವಡಿಸಲು ಕ್ರಮ ವಹಿಸುವುದು,
ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಕುಡಿವ ನೀರಿನ ವ್ಯವಸ್ಥೆ ಮಾಡುವುದು. ನೀರು ಕುಡಿಯುವ ಅವಧಿ ಹೊರತು ಪಡಿಸಿ ಮಕ್ಕಳು ನೀರು ಕುಡಿಯಲು ಇಚ್ಚಿಸಿದರೆ ನೀರಿನ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ, ಪ್ರಾದೇಶಿಕ ಕಚೇರಿ ಆಯುಕ್ತರಿಗೆ, ಜಿಲ್ಲಾ ಉಪನಿರ್ದೇಶಕರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.