ಸುಂದರ್‌ರಾಜ್ ಅಂದು ಸಖತ್ ಜೋಶ್‌ನಲ್ಲಿದ್ದರು. ಅವರ ಆ ಖುಷಿಗೆ ಮತ್ತು ಉತ್ಸಾಹಕ್ಕೆ ಕಾರಣ “ಲಿಫ್ಟ್ ಮ್ಯಾನ್’. ಇದು ಸಾಮಾನ್ಯ ಮನುಷ್ಯನೊಬ್ಬನ ಕಥೆ. ಅವರ ವೃತ್ತಿಜೀವದಲ್ಲಿ ಮರೆಯದ ಪಾತ್ರ ಈ ಸಿನಿಮಾದಲ್ಲಿ ಸಿಕ್ಕಿದೆಯಂತೆ. ಹಾಗಾಗಿ ಸುಂದರ್‌ರಾಜ್ ಉತ್ಸಾಹದಲ್ಲೇ ಇದ್ದರು. ಅಂದಹಾಗೆ, “ಲಿಫ್ಟ್ ಮ್ಯಾನ್’ ಈ ವಾರ ತೆರೆ ಕಾಣುತ್ತಿದೆ. ಸುಂದರ್‌ರಾಜ್ ಅವರಿಗೆ ಸಹಜವಾಗಿಯೇ ಈ ಚಿತ್ರದ ಮೇಲೆ ವಿಶ್ವಾಸವಿದೆ. ಸಾಮಾನ್ಯವಾಗಿ ರೌಡಿಯೊಬ್ಬನ ಕಥೆ ಅಥವಾ ಸಾಧಕನ ಕಥೆ ಇಟ್ಟುಕೊಂಡ ಸಿನಿಮಾಗಳು ಬರುತ್ತವೆ. ಆದರೆ, ಒಬ್ಬ “ಲಿಫ್ಟ್ ಮ್ಯಾನ್’ವೊಬ್ಬನ ಅಪರೂಪದ ಕಥೆ ಇಟ್ಟುಕೊಂಡು ಮೂಡಿಬಂದಿರುವ ಈ ಚಿತ್ರದಲ್ಲಿ ಸುಂದರ್‌ರಾಜ್ ಅವರೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
“ವಿಧಾನಸೌದದಲ್ಲಿ ಸುಮಾರು 35ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿ, ನಿವೃತ್ತಿಯಾಗಿರುವ “ಲಿಫ್ಟ್ ಮ್ಯಾನ್’ ಜೀವನ ಚರಿತ್ರೆ ಇಲ್ಲಿ ಅನಾವರಣಗೊಂಡಿದೆ. ಭಾರತೀಯ ಚಿತ್ರರಂಗದಲ್ಲಿ ಈ ರೀತಿಯ ಕಥೆಯನ್ನೂ ಮಾಡಬಹುದು ಅಂತ ಯಾರೊಬ್ಬರೂ ಯೋಚನೆ ಮಾಡಿಲ್ಲ. ನಿರ್ದೇಶಕ ಕಾರಂಜಿ ಶ್ರೀಧರ್ ಅಂಥದ್ದೊಂದು ಅಪರೂಪ ಎನಿಸುವ ಕಥೆ ಮಾಡಿರುವುದು ಖುಷಿ ಕೊಟ್ಟಿದೆ. ನನಗೀಗ ವಯಸ್ಸು 66. ನಾಲ್ಕು ದಶಕಗಳ ಕಾಲ ಚಿತ್ರರಂಗದಲ್ಲಿ ಜರ್ನಿ ಮಾಡಿದ್ದೇನೆ. ಈವರೆಗೆ ನನ್ನ ಜೀವನದಲ್ಲಿ ಸಾಕಷ್ಟು “ಏರಿಳಿತ’ಗಳಾಗಿವೆ. ಈ “ಲಿಫ್ಟ್’ ಕೂಡ ಇನ್ನೊಂದು ಹಂತಕ್ಕೆ ಕರೆದೊಯ್ಯುವ ಸಿನಿಮಾ ಆಗಲಿದೆ. ಇದು ನನ್ನ 200ನೇ ಸಿನಿಮಾ ಅನ್ನೋದು ವಿಶೇಷ. ಬಯಸದೆಯೇ ಬಂದ ಪಾತ್ರವಿದು. ಸುಮಾರು ಎಂಟು ತಿಂಗಳಿಂದಲೂ ನನಗೆ ಈ ಪಾತ್ರ ಕಾಡುತ್ತಲೇ ಇದೆ ಎಂದು ಕ್ಷಣಕಾಲ ಭಾವುಕರಾದರು ಸುಂದರ್‌ರಾಜ್.
“ಇದು ಚಂದ್ರ ಬಾಕೂìರು ಅವರು ಬರೆದ ಪುಸ್ತಕದ ಕಥೆ. ತೆರೆಯ ಮೇಲೆ ಚೆನ್ನಾಗಿಯೇ ಮೂಡಿಬಂದಿದೆ’ ಎಂಬುದು ನಿರ್ದೇಶಕ ಶ್ರೀಧರ್ ಕಾರಂಜಿ ಅವರ ಮಾತು. ಇದು ಲಿಫ್ಟ್ಮ್ಯಾನ್‌ವೊಬ್ಬನ ಕಥೆ ಮತ್ತು ವ್ಯಥೆ. ಒಂದೇ ಕಡೆ ಸೇವೆ ಸಲ್ಲಿಸಿರುವ ನೌಕರನೊಬ್ಬನ ಏಳುಬೀಳು, ನೋವು, ನಲಿವು ಇಲ್ಲಿದೆ. ಈಗಾಗಲೇ ಗೋವಾ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿದ್ದು, ಒಂದು ಕುಟುಂಬ ಈ ಚಿತ್ರ ನೋಡಿದರೆ, ಖಂಡಿತವಾಗಿಯೂ ಇಷ್ಟಪಡುತ್ತೆ ಎಂಬ ನಂಬಿಕೆ ನನ್ನದು. ಮುಂದಿನವಾರ ಅಮೇರಿಕಾದಲ್ಲೂ ಚಿತ್ರ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ. ಅಲ್ಲಿಂದಲೂ ಚಿತ್ರಕ್ಕೆ ಬೇಡಿಕೆ ಬಂದಿದೆ ಎನ್ನುತ್ತಾರೆ ನಿರ್ದೇಶಕರು.
ನಿರ್ಮಾಪಕ ರಾಮ್‌ಗೆ “ಲಿಫ್ಟ್ ಮ್ಯಾನ್ ಚಿತ್ರ ಮಾಡಿದ್ದಕ್ಕೂ ಸಾರ್ಥಕ ಎನಿಸಿದೆಯಂತೆ. ಇಲ್ಲಿ ಭಾವನೆ ಮತ್ತು ಭಾವುಕತೆ ತುಂಬಿಕೊಂಡಿದೆ ಅದನ್ನು ತಿಳಿಯಬೇಕಾದರೆ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು ಅವರು. ಚಿತ್ರದಲ್ಲಿ ಸುರೇಶ್‌ಹೆಬ್ಳೀಕರ್, ಶೀತಲ್ ಶೆಟ್ಟಿ, ಸುನಿಲ್ ಪುರಾಣಿಕ್, ಅರುಣ ಬಾಲ್‌ರಾಜ್ ಇತರರು ನಟಿಸಿದ್ದಾರೆ. ಅಂದಹಾಗೆ, ಪ್ರವೀಣ್ ಗೋಡಿRಂಡಿ ಸಂಗೀತವಿರುವ ಹಾಡುಗಳನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.