Advertisement

ಸೂಕ್ಷ್ಮ ಮನಸ್ಸಗಳು

06:35 AM Aug 25, 2017 | |

ಒಂದು ಮಗು ಈ ಸಮಾಜದ ಮುಖ್ಯವಾಹಿನಿಗೆ ಬರುವ ಮೊದಲು ತನ್ನ ಮನೆಯಲ್ಲಿ ಮೊದಲ ಪಾಠ ಕಲಿಯುತ್ತದೆ. ಮಕ್ಕಳನ್ನು ಬೆಳೆಸುವಾಗ ತಾಯಿಯಾದವಳು ಎಷ್ಟು ಜಾಗ್ರತೆ ವಹಿಸಿದರೂ ಸಾಲದು! ಮಗುವಿಗೆ ಮನೆಯಲ್ಲಿ ಒಂದು ಉತ್ತಮ ಸಂಸ್ಕಾರ ಸಿಕ್ಕಿದರೆ ಅದು ಮುಂದೆ ಒಬ್ಬ ಒಳ್ಳೆಯ ಪ್ರಜೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Advertisement

ಇತ್ತೀಚೆಗೆ ಗೆಳತಿಯೊಬ್ಬಳ ಮನೆಗೆ ಹೋಗಿದ್ದೆ. ಅಲ್ಲೇ ತನ್ನ ಗೊಂಬೆ ಜತೆ ಆಟವಾಡುತ್ತಿದ್ದ ಅವಳ ಐದು ವರ್ಷದ ಮಗಳು ಆ ಗೊಂಬೆಗೆ, “ಕತ್ತೆ, ತಿನ್ನು ಎಂದರೆ ತಿನ್ನಬೇಕು. ಹೀಗೆ ಹಠ ಮಾಡಿದರೆ ಪೊಲೀಸ್‌ ಮಾಮನ ಹತ್ತಿರ ಬಿಟ್ಟು ಬರುತ್ತೇನೆ. ಆಗ ಅವರು ಸರಿಯಾಗಿ ಬಡಿಯುತ್ತಾರೆ. ಕತ್ತಲೆ ಕೋಣೆಯಲ್ಲಿ ಹಾಕುತ್ತಾರೆ ನೋಡು’ ಎಂದು ತನ್ನ ಗೊಂಬೆಗೆ ಒಂದು ಖಾಲಿ ಪುಟಾಣಿ ಬಟ್ಟಲು, ಚಮಚ ಹಿಡಿದುಕೊಂಡು ತಿನ್ನಿಸುವ ನಾಟಕವಾಡುತ್ತಿತ್ತು. ಆ ಮಗು ಅವಳ ತಾಯಿಯನ್ನು ಅನುಕರಿಸುತ್ತಿತ್ತು. ಟೀ ಮಾಡಿಕೊಂಡು ಬಂದ ಗೆಳತಿ ನನ್ನೆದುರು ಅವಳ ಅತ್ತೆ, ನಾದಿನಿ, ಗಂಡನ ಬಗ್ಗೆ ದೂರಲು ಶುರುಮಾಡಿದಳು. ಆ ಮಗು ಆಟವಾಡುವುದನ್ನು ಬಿಟ್ಟು ತನ್ನ ತಾಯಿಯ ಮಾತನ್ನೇ ಕೇಳಿಸಿಕೊಳ್ಳಲು ಶುರುಮಾಡಿತು. ನಾನಾಗ, ಹೀಗೆಲ್ಲಾ ಮಾತನಾಡಬೇಡ. ಮಗು ಕೇಳಿಸಿಕೊಳ್ಳುತ್ತಿದೆ ಎಂದಾಗ, “ಹೇಯ್‌… ಅದಕ್ಕೇನೂ ಗೊತ್ತಾಗಲ್ಲ ಬಿಡು. ಅವಳು ಅವಳ ಪಾಡಿಗೆ ಆಡಿಕೊಳ್ಳುತ್ತಿದ್ದಾಳೆ’ ಎಂದು ಮತ್ತೆ ತನ್ನ ಪುರಾಣ ಶುರುವಿಟ್ಟುಕೊಂಡಳು.

ಈ ರೀತಿಯ ವರ್ತನೆಯನ್ನು ನಮ್ಮಲ್ಲಿ ಸುಮಾರು ಜನ ತಾಯಂದಿರು ಮಾಡುತ್ತಾರೆ. ಇದನ್ನು ಅವರು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ ಎಂದರ್ಥವಲ್ಲ. ಆದರೆ ನಮ್ಮೊಂದಿಗೆ ಇರುವ ಎಳೆಕಂದಮ್ಮಗಳು ಅಮ್ಮನ ಬಾಯಲ್ಲಿ ಬರುವ ಪದಗಳನ್ನೇ ಹೆಕ್ಕಿ ತನ್ನ ಶಬ್ದಭಂಡಾರದೊಳಗೆ ಸೇರಿಸಿಕೊಳ್ಳುತ್ತವೆ. ಮಕ್ಕಳನ್ನು ಬೆಳೆಸುವಾಗ ತಾಯಿಯಾದವಳು ಎಷ್ಟು ಜಾಗ್ರತೆ ವಹಿಸಿದರೂ ಸಾಲದು! ಮಗುವಿಗೆ ಮನೆಯಲ್ಲಿ ಒಂದು ಉತ್ತಮ ಸಂಸ್ಕಾರ ಸಿಕ್ಕಿದರೆ ಅದು ಮುಂದೆ ಒಬ್ಬ ಒಳ್ಳೆಯ ಪ್ರಜೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಮನೆಯೇ ಮೊದಲ ಪಾಠಶಾಲೆ
ಒಂದು ಮಗು ಈ ಸಮಾಜದ ಮುಖ್ಯವಾಹಿನಿಗೆ ಬರುವ ಮೊದಲು ತನ್ನ ಮನೆಯಲ್ಲಿ  ಮೊದಲ ಪಾಠ ಕಲಿಯುತ್ತದೆ. ಅಲ್ಲಿ ತಂದೆ-ತಾಯಿ, ಅಜ್ಜ-ಅಜ್ಜಿ ಇವರೆಲ್ಲರೂ ಆ ಮಗುವಿಗೆ ಗುರುಗಳಾಗಿರುತ್ತಾರೆ. ಹೀಗೆ ತಿನ್ನಬೇಡ, ಹಾಗೆ ನಡೆಯಬೇಡ, ಕೆಟ್ಟ ಪದ ನುಡಿಯಬೇಡ ಎಂದು ಹೇಳಿಕೊಡುವುದು ಹೆತ್ತವರ ಕರ್ತವ್ಯ. “ಬೆಳೆಯುವ ಸಿರಿ ಮೊಳಕೆ’ಯಲ್ಲಿಯೇ ಎಂಬಂತೆ ತಂದೆ-ತಾಯಿಯಾದವರು ಮಕ್ಕಳ ಬೆಳವಣಿಗೆಗೆ ಒಂದು ಪೂರಕ ವಾತಾವರಣ ಕಲ್ಪಿಸಿಕೊಟ್ಟರೆ ಆ ಮಗು ನಾಳೆ ಈ ದೇಶಕ್ಕೆ ಒಂದು ಆಸ್ತಿ ಇದ್ದ ಹಾಗೆ.

ನಿಮ್ಮ ನಡೆ-ನುಡಿ ಸರಿಯಾಗಿರಲಿ
ಮಗುವಿಗೆ ನೀನು ಮಾಡುತ್ತ ಇರುವುದು ಸರಿಯಲ್ಲ ಎನ್ನುವ ಮೊದಲು ನಿಮ್ಮ ವರ್ತನೆ ಸರಿಯಾಗಿದೆಯಾ ಎಂಬುದನ್ನು ಗಮನಿಸಿಕೊಳ್ಳಿ. ಮಗು ದೊಡ್ಡವರನ್ನು ನೋಡಿಯೇ ಕಲಿಯುವುದರಿಂದ ನಿಮ್ಮಲ್ಲಿನ ಕುಂದುಗಳನ್ನು ಸರಿಮಾಡಿಕೊಂಡರೆ ಮಗು ಕೂಡ ಸರಿಯಾದ ರೀತಿಯಲ್ಲಿ ನಡೆದುಕೊಳ್ಳುತ್ತದೆ. ಇನ್ನು ಕೆಲವರು ಮಕ್ಕಳ ಎದುರು ಕೆಟ್ಟ ಪದಗಳ ಬಳಕೆ ಮಾಡುತ್ತಾರೆ. ಯಾರಿಗಾದರೂ ಬೈಯುವುದು, ಇನ್ನೊಬ್ಬರ ಬಗ್ಗೆ ಚಾಡಿ ಹೇಳುವುದು, ಸುಳ್ಳು ಹೇಳುವುದು, ಇನ್ನೊಬ್ಬರನ್ನು ಲೇವಡಿ ಮಾಡುವುದು… ಇಂತಹ ನಡತೆಯನ್ನು ಮಗು ಗಮನಿಸುತ್ತ ಇರುತ್ತದೆ ಎಂಬ ಸೂಕ್ಷ್ಮದ ಅರಿವಿರಲಿ.

Advertisement

ಸರಿ, ತಪ್ಪುಗಳನ್ನು ತಿಳಿಸಿ ಹೇಳಿ
ಎಡವಿದವನು ಮಾತ್ರ ಸರಿಯಾಗಿ ನಡೆಯಲು ಸಾಧ್ಯ. ಮಕ್ಕಳು ತಪ್ಪು ಮಾಡುವುದು ಸಹಜ. ಆ ತಪ್ಪಿನಲ್ಲಿ ಮನೆಯವರ ಪಾತ್ರವೂ ಇರುತ್ತದೆ. ಮಕ್ಕಳು ತಪ್ಪು ಮಾಡಿದಾಗ ಶಿಕ್ಷೆ ಕೊಡುವ ಮೊದಲು ಆ ತಪ್ಪು ಯಾಕಾಯಿತು ಎಂದು ಕೇಳುವ ಸಂಯಮ ಹೆತ್ತವರಿಗೆ ಇರಬೇಕು. ಕೂಲಂಕಷವಾಗಿ ತಿಳಿದು ಆಮೇಲೆ ಅವರಿಗೆ ತಿಳಿ ಹೇಳಬೇಕು. ಅತಿಯಾದ ಶಿಕ್ಷೆಯಿಂದ ಮಕ್ಕಳಲ್ಲಿ ಒರಟು ಗುಣ ಜಾಸ್ತಿಯಾಗುತ್ತದೆ. ತಪ್ಪು ಮಾಡಿದರೆ ಎರಡೇಟು ಹೊಡೆಯುತ್ತಾರೆ ಅಷ್ಟೇ ತಾನೆ ಎಂಬ ಅಸಡ್ಡೆ ಭಾವನೆ ಬೆಳೆಯುತ್ತದೆ.

ಮಕ್ಕಳೆದುರು ಜೋರಾಗಿ ಕಿರುಚುವುದು/ಜಗಳವಾಡುವುದು ಬೇಡ
ಇನ್ನು ಕೆಲವರು ಒಂದು ಸಣ್ಣ ವಿಷಯಕ್ಕೆ ಸಿಕ್ಕಾಪಟ್ಟೆ ಕೂಗಾಡುವುದು, ಜಗಳವಾಡುವುದು ಮಾಡುತ್ತಾರೆ. ಅವರನ್ನು ನೋಡುತ್ತ ಮಕ್ಕಳು ಕೂಡ ಇದೇ ಗುಣ ಬೆಳೆಸಿಕೊಳ್ಳುತ್ತಾರೆ. ತಂದೆ-ತಾಯಿಯರು ಯಾವುದೇ ಮನಸ್ತಾಪ ಇದ್ದರೂ, ಮಕ್ಕಳು ಮಲಗಿದ ಮೇಲೆ ಅಥವಾ ಅವರು ಹೊರಗಡೆ ಇದ್ದಾಗ ಕುಳಿತು ಪರಿಹರಿಸಿಕೊಳ್ಳಬೇಕು. ಮಕ್ಕಳ ಎದುರು ಜಗಳವಾಡಿದರೆ ನಾಳೆ ಅವರು ನಿಮ್ಮಂತೆ ವರ್ತಿಸುತ್ತಾರೆ. ತಂದೆ-ತಾಯಿ ಅನ್ಯೋನ್ಯವಾಗಿದ್ದರೆ ಮಕ್ಕಳು ಕೂಡ ಅದೇ ದಾರಿಯಲ್ಲಿ ಸಾಗುತ್ತಾರೆ.

ಗುರುಹಿರಿಯರನ್ನು ಗೌರವಿಸುವುದನ್ನು ಕಲಿಸಿರಿ
ಮನೆಯಲ್ಲಿರುವ ಹಿರಿಯರೊಂದಿಗೆ ನೀವು ಚೆನ್ನಾಗಿ ಮಾತನಾಡಿದರೆ ಮಕ್ಕಳೂ ಕೂಡ ಅವರಿಗೆ ಗೌರವ ಕೊಡುತ್ತಾರೆ. ಈಗ ವಿಭಕ್ತ ಕುಟುಂಬಗಳೇ ಜಾಸ್ತಿಯಾಗಿರುವುದರಿಂದ ಮಕ್ಕಳಿಗೆ ಕಥೆ ಹೇಳುವ ಅಜ್ಜಿ ಅಜ್ಜನೂ ಇಲ್ಲ. ಸಂಬಂಧಗಳ ಬೆಲೆನೂ ಮಕ್ಕಳಿಗೆ ಗೊತ್ತಾಗುತ್ತಿಲ್ಲ. ಪರವೂರಿನಲ್ಲಿ ಇದ್ದವರು ತಮ್ಮ ಮಕ್ಕಳನ್ನು ಆಗಾಗ ಹಳ್ಳಿಯಲ್ಲಿರುವ ಅಜ್ಜಿ-ಅಜ್ಜಂದಿರೊಂದಿಗೆ ಬೆರೆಯಲು ಬಿಡಿ.

ಮಕ್ಕಳನ್ನು ಹೆದರಿಸಬೇಡಿ
ಅವರು ಊಟ ತಿನ್ನದೇ ಇದ್ದಾಗ ಅಥವಾ ನಿಮ್ಮ ಮಾತನ್ನು ಕೇಳದೇ ಇದ್ದಾಗ ಪೊಲೀಸ್‌, ಕತ್ತಲು ಕೋಣೆ, ಗೊಗ್ಗಯ್ಯ ಬರುತ್ತಾನೆ ಹೀಗೆ ಏನೇನೋ ಸಬೂಬು ಹೇಳಿ ಅವರನ್ನು ಹೆದರಿಸಬೇಡಿ. ಇದು ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮುಂದೆ ಅವರಲ್ಲಿ ಪುಕ್ಕಲುತನ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಹಣಕಾಸಿನ ವ್ಯವಹಾರದ ಬಗ್ಗೆ ತಿಳಿಸಿ ಹೇಳಿ
ಮಕ್ಕಳ ಕೈಗೆ ಐದು, ಹತ್ತು ರೂಪಾಯಿ ಕೊಟ್ಟು ಅದನ್ನು ಕೂಡಿಡುವ ಅಭ್ಯಾಸ ಬೆಳೆಸಿ. ಆಗ ಅವರು ಮುಂದೆ ದುಂದುವೆಚ್ಚ ಮಾಡುವುದನ್ನು ತಪ್ಪಿಸಬಹುದು. ಹಣದ ಮೌಲ್ಯದ ಬಗ್ಗೆ ತಿಳಿಹೇಳಿ.

– ಪವಿತ್ರಾ ಈರೋಡ್‌

Advertisement

Udayavani is now on Telegram. Click here to join our channel and stay updated with the latest news.

Next