Advertisement

Karkala: ಈದು ಬೊಳ್ಳೆಟ್ಟು; ಇನ್ನೆಷ್ಟು ದಿನ ಈ ಸಂಕಷ್ಟದ ಬದುಕು?

01:32 PM Nov 12, 2024 | Team Udayavani |

ಕಾರ್ಕಳ: ರಾಜ್ಯದ ಮೊದಲ ನಕ್ಸಲ್‌ ಎನ್‌ಕೌಂಟರ್‌ನಲ್ಲಿ ಹಾಜಿಮಾ ಮತ್ತು ಪಾರ್ವತಿ ಎಂಬ ಇಬ್ಬರನ್ನು ಕೊಂದು ಹಾಕಿದ ಘಟನೆಗೆ ನಾಡಿದ್ದು ನವೆಂಬರ್‌ 17ಕ್ಕೆ 21 ವರ್ಷ. ಆವತ್ತು ನಕ್ಸಲ್‌ ಹಾವಳಿಗೆ ತುತ್ತಾಗಿದ್ದ ಕಾರ್ಕಳ ತಾಲೂಕಿನ ಈದು ಗ್ರಾಮದ ಬೊಳ್ಳೆಟ್ಟು ಪರಿಸರದಲ್ಲಿ ಈಗಲೂ ನಕ್ಸಲ್‌ ಓಡಾಟದ ವದಂತಿ ಇದೆ. ಅಂದು ಎನ್‌ಕೌಂಟರ್‌ ನಡೆದಾಗ ಬೊಳ್ಳೆಟ್ಟು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಅನೇಕಾನೇಕ ಅಭಿವೃದ್ಧಿ ಯೋಜನೆಗಳು, ಕೋಟಿ ಕೋಟಿ ಮೊತ್ತಗಳು ಘೋಷಣೆಯಾಗಿದ್ದವು. ಆದರೆ, ಅದ್ಯಾವುದೂ ಬೊಳ್ಳೆಟ್ಟಿಗೆ-ಈದುವಿಗೆ ಬರಲೇ ಇಲ್ಲ. ಅಂದಿಗೂ ಇಂದಿಗೂ ಒಂದಿಂಚೂ ವ್ಯತ್ಯಾಸ ವಿಲ್ಲದೆ ಸಂಕಷ್ಟದ, ಕತ್ತಲ ಬದುಕಿನಲ್ಲಿ ಬೊಳ್ಳೆಟ್ಟು ಬೇಯುತ್ತಿದೆ. 60-65 ಮನೆಗಳು, 300ರಷ್ಟಿರುವ ಜನರಿಗೆ ಬದುಕೆಂದರೆ ನಿತ್ಯ ಸಂಕಷ್ಟ.

Advertisement

ಕನಿಷ್ಠ ಸರಿಯಾದ ರಸ್ತೆ ಸೌಕರ್ಯವೂ ಇಲ್ಲ
ನಕ್ಸಲ್‌ ಪೀಡಿತ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಈ ಭಾಗದಲ್ಲಿ ಅಭಿವೃದ್ಧಿ ನಡೆಸುವ ಭರವಸೆಯನ್ನು ಅಂದು ನೀಡಲಾಗಿತ್ತು. ಆದರೆ, ಈ ಊರಿಗೆ ಒಂದು ಸರಿಯಾದ ರಸ್ತೆ ಸೌಕರ್ಯವೂ ಇದುವರೆಗೆ ಸಿಕ್ಕಿಲ್ಲ. ಬೊಳ್ಳೆಟ್ಟಿನಿಂದ ಗ್ರಾಮ ಕೇಂದ್ರವಾದ ಈದುವಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯೂ ಇಲ್ಲಿ ಸರಿಯಾಗಿಲ್ಲ. ಸುವರ್ಣ ನದಿಗೆ ಕಟ್ಟಿರುವ ಕಿರುಸೇತುವೆ ಈಗಲೋ ಆಗಲೋ ಎನ್ನುವಂತಿದೆ. ಇದರಲ್ಲಿ ನಡೆದುಕೊಂಡು ಮಾತ್ರ ಅತ್ತಿತ್ತ ಹೋಗಬಹುದು. ಬೊಳ್ಳೆಟ್ಟಿನ ಜನರು ಈದುವಿಗೆ ಹೋಗಲು ಒಂದೋ ಈ ಕಿರುಸೇತುವೆ ದಾಟಿ 4-5 ಕಿ.ಮೀ. ನಡೆದುಕೊಂಡೇ ಹೋಗಬೇಕು. ಇಲ್ಲವಾದರೆ ಬೊಳ್ಳೆಟ್ಟಿನಿಂದ ನಾರಾವಿಗೆ ಕಿರು ರಸ್ತೆಯಲ್ಲಿ ಸಾಗಿ ನೂರಾಳಬೆಟ್ಟಿನ ಮೂಲಕ ಈದುವಿಗೆ ಹೋಗಬೇಕು. ಇದು ಸುಮಾರು 10-12 ಕಿ.ಮೀ. ದಾರಿ!

ಗ್ರಾಮ ಪಂಚಾಯತ್‌ನಲ್ಲಿ ಆಗಬೇಕಾದ ಕೆಲಸಗಳು, ಪಡಿತರ, ಸೊಸೈಟಿಗಳು, ಶಾಲೆ, ಆಸ್ಪತ್ರೆ ಸೇರಿದಂತೆ ಅಗತ್ಯದ ಕೆಲಸಗಳಿಗೆಲ್ಲ ಬೊಳ್ಳೆಟ್ಟಿನ ಜನರು ವಸ್ತುಶಃ ಪರದಾಡಬೇಕಾದ ಸ್ಥಿತಿ ಇದೆ.

 

Advertisement

ಕಿರು ರಸ್ತೆಗೆ ಡಾಮರಿಲ್ಲ, ಕಲ್ಲುರಾಶಿ ಹಾದಿ
ಬೊಳ್ಳೆಟ್ಟು ಕಾರ್ಕಳ ತಾಲೂಕಿನ ಪ್ರದೇಶವಾದರೂ ರಸ್ತೆ ಸೌಕರ್ಯಗಳ ಕೊರತೆಯಿಂದ ಅದು ಭಾವ ನಾತ್ಮಕವಾಗಿ ಬೆಳ್ತಂಗಡಿಯ ನಾರಾವಿ ಜತೆ ಸಂಬಂಧ ಹೊಂದಿದೆ. ಹಾಗಂತ ನಾರಾವಿಗೂ ಇಲ್ಲಿಂದ ಸರಿ ಯಾದ ಸಂಪರ್ಕವಿಲ್ಲ. ಬೊಳ್ಳೆಟ್ಟು ಮತ್ತು ನಾರಾವಿ ನಡುವಿನ 5-6 ಕಿ.ಮೀ. ರಸ್ತೆ ಅತ್ಯಂತ ಕಿರಿದಾಗಿದೆ. ರಸ್ತೆ ತುಂಬ ಗುಂಡಿಗಳು, ದೊಡ್ಡ ಗಾತ್ರದ ಕೆಂಪು ಕಲ್ಲು, ಕಲ್ಲಿನ ಪುಡಿಯ ರಾಶಿಯ ನಡುವೆ ಸಾಗಬೇಕು.

ಇದು ಜನರೇ ತಮ್ಮ ಜಾಗವನ್ನು ಬಿಟ್ಟುಕೊಟ್ಟು ನಿರ್ಮಿಸಿದ ರಸ್ತೆ. ಹಾಗಂತ ಆಡಳಿತ ಇದಕ್ಕೆ ಕನಿಷ್ಠ ಒಂದು ಸರಿಯಾದ ಡಾಮರು ಹಾಕುವ ಸೌಜನ್ಯವನ್ನೂ ತೋರು ತ್ತಿಲ್ಲ. ಕೇವಲ ಆಟೋ, ಕಾರು ಮತ್ತು ಸಣ್ಣ ಗೂಡ್ಸ್‌ ವಾಹನ ಸಾಗಬಹುದಾದ ಅತಿ ಸಣ್ಣ ರಸ್ತೆ ಇದು.

ಇಲ್ಲಿನ ಬಹುತೇಕರು ಸಣ್ಣ ಕೃಷಿಕರು, ಕೂಲಿ ಮಾಡಿಕೊಂಡು ಬದುಕುವವರು. ತಮ್ಮ ಬದುಕಿಗೆ ಪೂರಕವಾಗಿ ಒಂದು ರಸ್ತೆ ಸಿಕ್ಕಿದ್ದೇ ಭಾಗ್ಯ ಎಂಬಂತಿದ್ದಾರೆ. ಈ ರಸ್ತೆಯಲ್ಲಿ ಮಳೆಗಾಲದಲ್ಲಿ ಸಾಗುವುದೇ ಕಷ್ಟ. ಯಾವ ವಾಹನವೂ ಓಡಾಡುವ ಸ್ಥಿತಿ ಇಲ್ಲಿಲ್ಲ. ಮಳೆಗಾಲದಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಶಾಲೆ ವಿದ್ಯಾರ್ಥಿಗಳು ನಡೆಯುವಾಗ ಎಡವಿ ಬೀಳುವ ಸ್ಥಿತಿ ಇದೆ. ಮಳೆಗಾಲದಲ್ಲಿ ಹೊಂಡ ಗುಂಡಿ, ಕೆಸರು. ಬೇಸಗೆ ಯಲ್ಲಿ ಧೂಳು.

ನಮಗೆ ಸರಕಾರ ಯಾವುದೇ ಯೋಜನೆ ಒದಗಿ ಸದೇ ಇದ್ದರೂ ಪರವಾಗಿಲ್ಲ. ಕನಿಷ್ಠ ರಸ್ತೆಯನ್ನಾದರೂ ಸರಿ ಮಾಡಿಕೊಡಿ, ಡಾಮರು ಹಾಕಿಕೊಡಿ ಎಂದು ಕೇಳಿಕೊಳ್ಳುತ್ತಾರೆ ಸ್ಥಳೀಯರು. ಇದು ಕಿರಿದಾದ ಜಾಗ. ಜಾಗದ ವ್ಯವಸ್ಥೆ ಸಮರ್ಪಕವಾದಲ್ಲಿ ರಸ್ತೆ ನಿರ್ಮಾಣ ಯೋಜನೆ ರೂಪಿಸಬಹುದು ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳುತ್ತಾರೆ. ಆದರೆ ಸದ್ಯಕ್ಕೆ ಇರುವ ಜಾಗದ ರಸ್ತೆಗೆ ಡಾಮರಾದರೂ ಹಾಕಿಸಿಕೊಡಿ ಎನ್ನುತ್ತಾರೆ ಸ್ಥಳೀಯರು.

 

ಕಿರುಸೇತುವೆ ಬದಲು ಪೂರ್ಣ ಸೇತುವೆ ಬೇಕು
ಈದುವಿನಿಂದ ಬೊಳ್ಳೆಟ್ಟನ್ನು ನೇರವಾಗಿ ಸಂಪರ್ಕಿಸಲು ಈಗ ಇರುವ ದಾರಿ ಎಂದರೆ, ಸುವರ್ಣ ನದಿಗೆ ಅಡ್ಡ ಕಟ್ಟಿರುವ ಕಿರುಸೇತುವೆ. ಇದರಲ್ಲಿ ನಡೆದುಕೊಂಡು ಮಾತ್ರ ಹೋಗಬಹುದು. ಬೈಕ್‌ ಕೂಡಾ ಹೋಗು ವುದಿಲ್ಲ. ಇಲ್ಲಿ ಪೂರ್ಣ ಪ್ರಮಾಣದ ಸೇತುವೆ ಬೇಕು ಎನ್ನುವುದು ಜನರ ಬೇಡಿಕೆ. ಅದರ ಜತೆಗೆ ಸೇತುವೆ ಎರಡೂ ಬದಿಗಳಲ್ಲಿ ರಸ್ತೆ ಸಂಪರ್ಕ ಮಾಡಬೇಕಾಗಿದೆ. ಇಲ್ಲಿ ಸೇತುವೆ ನಿರ್ಮಾಣಕ್ಕೆ ಲೋಕೊ
ಪಯೋಗಿ ಇಲಾಖೆ 4 ಕೋ. ರೂ. ಅನುದಾನ ಬಿಡುಗಡೆಗೊಳಿಸಿದ್ದು, ಇನ್ನೂ ಸಹ ಟೆಂಡರ್‌ ಹಂತದಲ್ಲಿದೆ!

ಹೆದ್ದಾರಿಗೆ ಬಂದರೂ ರಸ್ತೆ ಗುಂಡಿ ತಪ್ಪುವುದಿಲ್ಲ
ಬೊಳ್ಳೆಟ್ಟಿನ ಜನ ಈದುವಿಗೆ ಬರ ಬೇಕಾದರೆ ನಾರಾವಿಗೆ ಬಂದು ಹೊಸ್ಮಾರು ಕಡೆಗೆ ಹೆದ್ದಾರಿಯಲ್ಲಿ ಬಂದು ಈದು ಕಡೆಗೆ ತಿರುಗಬೇಕು. ದುರಂತವೆಂದರೆ ಈ ರಾಜ್ಯ ಹೆದ್ದಾರಿ ಕೂಡ ಹೊಂಡಮಯವಾಗಿದೆ. ನಾರಾವಿ ಪೇಟೆ ಸಂಪರ್ಕಿಸುವ ತಿರುವು ಮತ್ತು ಉದ್ದಕ್ಕೆ ಜಲ್ಲಿ ಕಲ್ಲುಗಳು ರಸ್ತೆಯೆಲ್ಲ ಹರಡಿಕೊಂಡಿವೆ.

ರೋಗಿಗಳನ್ನು ಹೊತ್ತುಕೊಂಡೇ ಸಾಗಬೇಕು
ಈ ಗ್ರಾಮಕ್ಕೆ ರಸ್ತೆ ವ್ಯವಸ್ಥೆ ಇಲ್ಲದಿರುವುದರಿಂದ ಆ್ಯಂಬುಲೆನ್ಸ್‌ ಕೂಡ ಬರುವುದಿಲ್ಲ. ಯಾರಿಗಾದರೂ ಆರೋಗ್ಯ ಹದಗೆಟ್ಟರೆ, ಬಾಣಂತಿಯರನ್ನು ಹೊತ್ತುಕೊಂಡೆ ಪೇಟೆಗೆ ನಡೆಯಬೇಕು ಎನ್ನುತ್ತಾರೆ ಇಲ್ಲಿನ ಸ್ಥಳೀಯರಾದ ಸುಧಾಕರ್‌ ಮೂಲ್ಯ.

ಬೊಳ್ಳೆಟ್ಟಿನ ಜನರಿಗೆ ಹತ್ತಾರು ಸಮಸ್ಯೆ
– ಈದು-ಬೊಳ್ಳೆಟ್ಟು ನೇರ ಸಂಪರ್ಕ ರಸ್ತೆ ಇಲ್ಲದೆ ಗ್ರಾಮ ಕೇಂದ್ರಕ್ಕೆ ಸುತ್ತುಬಳಸಿಯೇ ಹೋಗಬೇಕು.
– ಪಡಿತರ ಅಕ್ಕಿ ಸಹಿತ ಇನ್ನಿತರೆ ಸಾಮಗ್ರಿ ಖರೀದಿ ತರಲು ಸಾಕಷ್ಟು ದೂರ
– ಕೃಷಿ ಯಂತ್ರಗಳು, ಗೊಬ್ಬರ ಸಾಗಾಟಕ್ಕೆ ವಾಹನಗಳ ಓಡಾಟಕ್ಕೆ ಸಮಸ್ಯೆ
– ಕಿರಿದಾದ ರಸ್ತೆಯೂ ಸಂಪೂರ್ಣ ಹಾಳಾಗಿ ಹೋಗಿದೆ.

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next