ಮುಂಬಯಿ : ವಿದೇಶಿ ಬಂಡವಾಳದ ಒಳ ಹರಿವು, ಇಂದು ಬಿಡುಗಡೆಗೊಳ್ಳಲಿರುವ ದೇಶದ ಸ್ಥೂಲ ಆರ್ಥಿಕಾಭಿವೃದ್ಧಿ ಅಂಕಿ ಅಂಶಗಳು, ಮುಂಚೂಣಿ ಶೇರುಗಳ ವ್ಯಾಪಕ ಖರೀದಿಯ ಕಾರಣದಿಂದಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 250ಕ್ಕೂ ಅಧಿಕ ಅಂಕಗಳ ಭರ್ಜರಿ ಜಿಗಿತವನ್ನು ದಾಖಲಿ ಹೊಸ ದಾಖಲೆಯ ಮಟ್ಟವನ್ನು ತಲುಪಿತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 11,000 ಅಂಕಗಳ ಮಟ್ಟವನ್ನು ದಾಟುವ ಮೂಲಕ ದಾಖಲೆ ನಿರ್ಮಿಸಿತು.
ಈ ವರ್ಷ ಜನವರಿ 29ರಂದು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ವಹಿವಾಟಿನ ನಡುವೆ ಕಂಡಿದ್ದ 36,443.98 ಅಂಕಗಳ ದಾಖಲೆಯನ್ನು ಎತ್ತರವನ್ನು ಇಂದಿನ ಆರಂಭಿಕ ವಹಿವಾಟಿನಲ್ಲಿ ಹಿಂದಿಕ್ಕಲಾಯಿತು.
ಬೆಳೆಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 261.60 ಅಂಕಗಳ ಏರಿಕೆಯೊಂದಿಗೆ 36,527.53 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 81.90 ಅಂಕಗಳ ಏರಿಕೆಯೊಂದಿಗೆ 11,030.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಿಸಿಎಸ್, ರಿಲಯನ್ಸ್, ಇನ್‌ಫೋಸಿಸ್, ಎಚ್ ಸಿ ಎಲ್ ಟೆಕ್, ಎಸ್ ಬ್ಯಾಂಕ್ ಶೇರುಗಳು ಉತ್ತಮ ಮುನ್ನಡೆಯನ್ನು ಕಂಡು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಎಚ್‌ಪಿಸಿಎಲ್, ಬಿಪಿಸಿಎಲ್, ಎಸ್ ಬ್ಯಾಂಕ್, ಡಾ. ರೆಟ್ಟಿ, ಬಜಾಜ್ ಫಿನ್ ಸರ್ವ್; ಟಾಪ್ ಲೂಸರ್‌ಗಳು : ಭಾರ್ತಿ ಇನ್‌ಫ್ರಾಟೆಲ್, ಇನ್‌ಫೋಸಿಸ್, ಮಹೀಂದ್ರ, ವೇದಾಂತ, ಐಟಿಸಿ.
ಭಾರತ ಫ್ರಾನ್ಸ್ ದೇಶವನ್ನು ಹಿಂದಿಕ್ಕಿ ವಿಶ್ವದ ಆರನೇ ಬೃಹತ್ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಿರುವ ನೆಲೆಯಲ್ಲಿ ಡಾಲರ್ ಎದುರು ರೂಪಾಯಿ ಇಂದು 19 ಪೈಸೆಯಷ್ಟು ಚೇತರಿಸಿ 68.58 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಬ್ಯಾಂಕಿಂಗ್ ರಂಗದ ಎಸ್‌ಬಿಐ, ಎಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಇಂಡಸ್ ಇಂಡ್ ಬ್ಯಾಂಕ್ ಶೇರುಗಳು ಶೇ.2ರಷ್ಟು ಏರಿದವು.