ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯ ಧನಾತ್ಮಕ ವಹಿವಾಟಿನ ಪರಿಣಾಮ ಮಂಗಳವಾರ (ಅಕ್ಟೋಬರ್ 19) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸುಮಾರು 400 ಅಂಕ ಏರಿಕೆ ಕಂಡಿದ್ದು, 62,000 ಅಂಕಗಳ ಸಾರ್ವಕಾಲಿಕ ಗರಿಷ್ಠ ದಾಖಲೆ ಬರೆದಿದೆ.
ಇದನ್ನೂ ಓದಿ:ಕಾಂಗ್ರೆಸ್-ಬಿಜೆಪಿ ಎರಡೂ ಪರ್ಸೆಂಟೆಜ್ ಪಕ್ಷಗಳು: ಮಾಜಿ ಸಿಎಂ ಕುಮಾರಸ್ವಾಮಿ
ಇಂದು ಆರಂಭಿಕ ವಹಿವಾಟಿನ ವೇಳೆ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 62,159.78 ಅಂಕಗಳ ಗಡಿ ದಾಟುವ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿತ್ತು. ನಂತರ 357.88 ಅಂಕಗಳ ಏರಿಕೆಯೊಂದಿಗೆ 62,13.47 ಅಂಕಗಳಲ್ಲಿ ವಹಿವಾಟು ನಡೆಸಿದೆ.
ಅದೇ ರೀತಿ ಎನ್ ಎಸ್ ಇ ನಿಫ್ಟಿ 101.05 ಅಂಕಗಳಷ್ಟು ಏರಿಕೆಯಾಗಿದ್ದು, 18,578.10 ಅಂಕಗಳ ದಾಖಲೆ ಮಟ್ಟ ತಲುಪಿದೆ. ಮಧ್ಯಂತರದ ವೇಳೆಯ ವಹಿವಾಟಿನಲ್ಲಿ ನಿಫ್ಟಿ 18,604.45ಕ್ಕೆ ಏರಿಕೆಯಾಗಿತ್ತು.
ಸೆನ್ಸೆಕ್ಸ್, ನಿಫ್ಟಿ ಭರ್ಜರಿ ಏರಿಕೆಯಿಂದ ಎಲ್ ಆ್ಯಂಡ್ ಟಿ, ಟೆಕ್ ಮಹೀಂದ್ರ, ಎಚ್ ಸಿಎಲ್ ಟೆಕ್, ಎಚ್ ಯುಎಲ್, ಆ್ಯಕ್ಸಿಸ್ ಬ್ಯಾಂಕ್ ಮತ್ತು ಭಾರ್ತಿ ಏರ್ ಟೆಲ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಐಟಿಸಿ, ಆಲ್ಟ್ರಾ ಟೆಕ್ ಸಿಮೆಂಟ್, ಟೈಟಾನ್, ಪವರ್ ಗ್ರಿಡ್ ಮತ್ತು ಕೋಟಕ್ ಬ್ಯಾಂಕ್ ಷೇರು ನಷ್ಟ ಕಂಡಿದೆ.
ಸೋಮವಾರ ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ 459.64 ಅಂಕ ಏರಿಕೆಯೊಂದಿಗೆ ಸಾರ್ವಕಾಲಿಕ ಗರಿಷ್ಠ ದಾಖಲೆಯ 61,765.59ರ ಗಡಿ ತಲುಪಿತ್ತು. ಎನ್ ಎಸ್ ಇ ನಿಫ್ಟಿ 138.50 ಅಂಕಗಳ ಏರಿಕೆಯೊಂದಿಗೆ 18,477.05 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಳಿಸಿತ್ತು.