Advertisement

ಹಿರಿಯ ಸಚಿವರಿಗೆ ವೇಣುಗೋಪಾಲ ತರಾಟೆ

09:27 AM Sep 01, 2017 | Team Udayavani |

ಬೆಂಗಳೂರು: ಪಕ್ಷದ ಸೂಚನೆಯನ್ನು ನಿರ್ಲಕ್ಷ ಮಾಡುತ್ತಿರುವ ಹಿರಿಯ ಸಚಿವರನ್ನು ಕೆ.ಸಿ. ವೇಣುಗೋಪಾಲ್‌ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ ವೇಣುಗೋಪಾಲ, ಹಿರಿಯ ಸಚಿವರು
ಸರ್ಕಾರದ ವಿರುದ್ಧ ಬಿಜೆಪಿ ಮಾಡುತ್ತಿರುವ ಆರೋಪಕ್ಕೆ ಪ್ರತಿಕ್ರಿಯೆಯನ್ನೇ ನೀಡುತ್ತಿಲ್ಲ. ಕೆಪಿಸಿಸಿ ಕಚೇರಿಗೆ ಬಂದು ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ಸಾಧನೆಗಳನ್ನು ಹೇಳುತ್ತಿಲ್ಲ ಎಂದು ಹಿರಿಯ ಸಚಿವರಾದ ಕಾಗೋಡು ತಿಮ್ಮಪ್ಪ, ಆರ್‌.ವಿ. ದೇಶಪಾಂಡೆ, ಎಚ್‌.ಸಿ. ಮಹದೇವಪ್ಪ, ಎಚ್‌.ಕೆ. ಪಾಟೀಲ್‌ ಅವರ ಬಗ್ಗೆ ವೇಣುಗೋಪಾಲ ಅಸಮಾಧಾನ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಬೆಳಿಗ್ಗೆಯಿಂದ ಪಕ್ಷದ ಪದಾಧಿಕಾರಿಗಳ ಚಳಿ ಬಿಡಿಸಿದ್ದ
ಕೆ.ಸಿ.ವೇಣುಗೋಪಾಲ ಸಂಜೆ ಸಚಿವರಿಗೂ ಚಳಿ ಬಿಡಿಸಿದ್ದು, 24/7 ಪಕ್ಷದ ಸಂಘಟನೆ ಮಾಡುವಂತೆ ತಾಕೀತು ಮಾಡಿದ್ದಾರೆ.

Advertisement

ಪಕ್ಷದ ಕೆಲಸ ಮಾಡಲು ಸಚಿವರಿಗೆ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಸಚಿವರು ಕೇವಲ ಸರ್ಕಾರದ ಕೆಲಸ ಮಾಡುವುದಲ್ಲ. ನಿಮಗೆ ವಹಿಸಿರುವ ಉಸ್ತುವಾರಿ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆಯನ್ನೂ ಮಾಡಬೇಕೆಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಸಭೆ ಬಳಿಕ ಕೆ.ಸಿ.ವೇಣುಗೋಪಾಲ ರಾತ್ರಿಯೇ ಕೇರಳಕ್ಕೆ ವಾಪಸ್‌ ತೆರಳಿದರು. 

ಬೆಂಗಳೂರು-ಮೈಸೂರು ವೀಕ್‌: ಬೂತ್‌ ಮಟ್ಟದ ಕಾರ್ಯಕರ್ತರ ಸಮಿತಿ ರಚನೆಯಲ್ಲಿ ಬೆಂಗಳೂರು ಹಾಗೂ ಮೈಸೂರು ವಿಭಾಗ ಬಹಳ ಹಿಂದೆ ಉಳಿದಿವೆ ಎಂದು ತಿಳಿದು ಬಂದಿದೆ. ಬೆಳಗಾವಿ ವಿಭಾಗ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದು, ಕಲಬುರುಗಿ ವಿಭಾಗ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ವಿಭಾಗದ ಕೆಲವು ಕ್ಷೇತ್ರಗಳಲ್ಲಿ ಶಾಸಕರು ಮತ್ತು ಕಳೆದ ಬಾರಿಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಸಮಿತಿ ರಚನೆಯಲ್ಲಿ ಸಹಕಾರ
ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ಸಂಬಂಧಪಟ್ಟ ಸಚಿವರನ್ನೂ ವೇಣುಗೋಪಾಲ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಸಮಿತಿ ರಚನೆ ಮಾಡದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರನ್ನೂ ಬದಲಾಯಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಬೇಡಿಕೆ  ಇಟ್ಟಿರುವುದು ಆ ಸಮುದಾಯದ ಹಕ್ಕು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವರ ಹಕ್ಕು ಪಡೆದುಕೊಳ್ಳಲು ಅವಕಾಶವಿದೆ. ಇದರ ಹಿಂದೆ ಕಾಂಗ್ರೆಸ್‌ ಪಾತ್ರ ಇಲ್ಲ. ಹಿಂದಿ ಹೇರಿಕೆ ಕೇಂದ್ರ ಸರ್ಕಾರದ ಕುತಂತ್ರವಾಗಿದ್ದು, ಅದಕ್ಕೂ
ಕಾಂಗ್ರೆಸ್‌ಗೂ ಸಂಬಂಧವಿಲ್ಲ.  

ಕೆ.ಸಿ.ವೇಣುಗೋಪಾಲ, ಕಾಂಗ್ರೆಸ್‌ ಉಸ್ತುವಾರಿ

ಅಕ್ರಮ ಗಣಿ ಪ್ರಕರಣ ಶೀಘ್ರ ವರದಿ: ಪರಂ
ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅಕ್ರಮ ಗಣಿಗಾರಿಕೆ ಕುರಿತು ಸರ್ಕಾರ ನೇಮಿಸಿರುವ ಅಧಿಕಾರಿಗಳ ಸಮಿತಿ ಇನ್ನೂ ವರದಿ ನೀಡಿಲ್ಲ. ಹೀಗಾಗಿ, ತಪ್ಪಿತಸ್ಥರ ವಿರುದ್ಧ ಇನ್ನೂ ಕಠಿಣ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಿಜೆಪಿಯವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಹೇಳಿದ್ದ ರಾಜ್ಯ ಸರ್ಕಾರ ಚುನಾವಣೆ ಸಮೀಪಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ವಿಳಂಬವಾಗಿರುವ ಬಗ್ಗೆ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಅವರನ್ನು ಪತ್ರಕರ್ತರು ಪ್ರಶ್ನಿಸಿದರು. ಆಗ ಪರಮೇಶ್ವರ್‌ ಮಧ್ಯಪ್ರವೇಶಿಸಿ ಈ ಉತ್ತರ ನೀಡಿದರು. ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ ಶೇ.80ರಷ್ಟು ಭರವಸೆಯನ್ನು ಈಡೇರಿಸಿದ್ದೇವೆ ಎಂದು ವೇಣುಗೋಪಾಲ್‌ ಹೇಳಿದಾಗ, ಅದಕ್ಕೆ ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಸರ್ಕಾರ ಮಾತು ತಪ್ಪಿದ್ದನ್ನು ಪತ್ರಕರ್ತರು ನೆನಪಿಸಿದರು. ಈ ಪ್ರಶ್ನೆಗೆ ಪರಮೇಶ್ವರ್‌ ಉತ್ತರಿಸುತ್ತಾ, ನಮ್ಮ ಅವಧಿಯಲ್ಲಿಯೇ ಅಕ್ರಮ ಗಣಿಗಾರಿಕೆ ಮಾಡಿದವರ ವಿರುದ್ಧ ಕ್ರಮ
ಕೈಗೊಳ್ಳುತ್ತೇವೆ ಎಂದು ಹೇಳಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next