Advertisement
ಈಗಾಗಲೇ ಸಚಿವಾಕಾಂಕ್ಷಿಗಳು ದೆಹಲಿಗೆ ತಲುಪಿದ್ದು ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಹಿರಿಯ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರೂ ದೆಹಲಿಗೆ ತೆರಳಲಿದ್ದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ರಾಹುಲ್ ಗಾಂಧಿ ಜೊತೆಗೆ ರಾಜ್ಯ ನಾಯಕರ ಸಭೆ ನಡೆಯಲಿದೆ.
Related Articles
Advertisement
ವೀರಶೈವ ಲಿಂಗಾಯತ ಕೋಟಾದಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಸ್ಥಾನ ದೊರೆಯಲಿದೆ. ಎಂ.ಬಿ. ಪಾಟೀಲ್ ಸಂಪುಟ ಸೇರುವುದಕ್ಕೆ ಸ್ಥಳೀಯ ಶಾಸಕರ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ. ಆದರೂ, ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬಳಸಿ ಎಂ.ಬಿ.ಪಾಟೀಲ್ ಸಂಪುಟ ಸೇರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಮಹಿಳಾ ಕೋಟಾದಲ್ಲಿ ಲಕ್ಷ್ಮೀ ಹೆಬ್ಟಾಳ್ಕರ್ ಹಾಗೂ ಕೆಜಿಎಫ್ ಶಾಸಕಿ ರೂಪಾ ಶಶಿಧರ್ ನಡುವೆ ಪೈಪೋಟಿ ಏರ್ಪಟ್ಟಿದ್ದು, ಇಬ್ಬರೂ ಮೊದಲ ಬಾರಿ ಆಯ್ಕೆಯಾಗಿದ್ದರೂ, ಜಾತಿ ಲೆಕ್ಕಾಚಾರದಲ್ಲಿ ಹೈ ಕಮಾಂಡ್ ಯಾರಿಗೆ ಮಣೆ ಹಾಕುತ್ತದೆಯೋ ಎನ್ನುವುದು ಕುತೂಹಲ ಮೂಡಿಸಿದೆ.
ಸತೀಶ್ ಜಾರಕಿಹೊಳಿ, ಸಂಡೂರಿನ ತುಕಾರಾಮ್ ಅಥವಾ ನಾಗೇಂದ್ರ, ಚಳ್ಳಕೆರೆ ರಘು ಮೂರ್ತಿ, ಚಾಮರಾಜನಗರ ಪುಟ್ಟರಂಗಶೆಟ್ಟಿ, ಸಿ.ಎಸ್. ಸಿವಳ್ಳಿ ಅಥವಾ ಎಂ.ಟಿ.ಬಿ ನಾಗರಾಜ್, ಪ್ರಿಯಾಂಕ್ ಖರ್ಗೆ, ಬಸವರಾಜ್ ಪಾಟೀಲ್ ಹುಮ್ನಾಬಾದ್ ಅವರ ಹೆಸರುಗಳು ಸಚಿವರಾಗುವವರ ಪಟ್ಟಿಯಲ್ಲಿದೆ ಎಂದು ತಿಳಿದು ಬಂದಿದೆ. ವಿಧಾನ ಪರಿಷತ್ ಸದಸ್ಯರಾದ ಎಸ್.ಆರ್.ಪಾಟೀಲ್, ಎಚ್.ಎಂ. ರೇವಣ್ಣ ಹಾಗೂ ಆರ್.ಬಿ. ತಿಮ್ಮಾಪುರ ತೀವ್ರ ಪೈಪೋಟಿ ನಡೆಸಿದ್ದಾರೆ.
ಮೊದಲ ಹಂತದಲ್ಲಿ ಎಲ್ಲಾ ಸ್ಥಾನಗಳನ್ನು ಭರ್ತಿ ಮಾಡುವ ಬದಲು ನಾಲ್ಕೈದು ಸ್ಥಾನಗಳನ್ನು ಖಾಲಿ ಇಟ್ಟುಕೊಳ್ಳಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ನಾನು ಅದೃಷ್ಟದ ರಾಜಕಾರಣಿ“ಈ ರಾಜ್ಯದಲ್ಲಿ ನಾನೊಬ್ಬ ಅದೃಷ್ಟದ ರಾಜಕಾರಣಿ, ರಾಜಕೀಯ ಸನ್ನಿವೇಶದ ಸಾಂಧರ್ಬಿಕ ಶಿಶು, ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿದ್ದೇನೆ ಅನ್ನುವುದು ವಾಸ್ತವ ಸಂಗತಿ. ಈ ಮಾತನ್ನು ಪದೇ ಪದೇ ಹೇಳುತ್ತೇನೆ. ಅದಾಗ್ಯೂ ನಾನು ಈ ರಾಜ್ಯದ ಜನಸಾಮಾನ್ಯರ ಮುಖ್ಯಮಂತ್ರಿ. ಹಾಗಂತ ಮುಖ್ಯಮಂತ್ರಿ ಹುದ್ದೆ ಬಗ್ಗೆ ತಲೆಯಲ್ಲಿ ಹುಳ ಬಿಟ್ಟುಕೊಂಡು ಭ್ರಮೆಗಳನ್ನು ಇಟ್ಟುಕೊಂಡವನೂ ನಾನಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಗುರುವಾರ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಎಷ್ಟು ದಿನ ನಾನು ಮುಖ್ಯಮಂತ್ರಿ ಆಗಿರುತ್ತೇನೆ, ಎಷ್ಟು ದಿನ ಕಾಂಗ್ರೆಸ್ ಪಕ್ಷ ಬೆಂಬಲ ಕೊಡುತ್ತದೆ ಅನ್ನುವುದು ಮುಖ್ಯವಲ್ಲ. ಒಳ್ಳೆಯ ಆಡಳಿತ ನೀಡುತ್ತೇನೆ ಎಂದರು.