ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿ ಎರಡು ವಾರಗಳು ಕಳೆದಿವೆ. ಅದಕ್ಕೆ ಸಂಬಂಧಿಸಿದಂತೆ ಕೆಲವೊಂದು ಗೊಂದಲಗಳು ಇನ್ನೂ ಮುಂದುವರಿದಿವೆ. ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿರುವ ಹೊಸ ಮಾಹಿತಿ ಪ್ರಕಾರ, ವಿದ್ಯಾರ್ಥಿಗಳ ಹಾಸ್ಟೆಲ್ ವೆಚ್ಚ, ಹಳೆಯ ಚಿನ್ನ ಮಾರಾಟ, ಕಚೇರಿಗಳಲ್ಲಿ ನೀಡುವ ಉಡುಗೊರೆ ಮತ್ತು ಹಳೆಯ ಕಾರುಗಳ ಮಾರಾಟಕ್ಕೆ ಹೊಸ ತೆರಿಗೆ ವ್ಯವಸ್ಥೆ ಅನ್ವಯವಾಗುವುದಿಲ್ಲ. ಈ ಬಗ್ಗೆ ಕೇಂದ್ರ ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಟ್ವೀಟ್ ಮಾಡಿದ್ದಾರೆ.
ಹಳೆಯ ಚಿನ್ನಕ್ಕಿಲ್ಲ: ಹಳೆಯ ಚಿನ್ನ ಮಾರುವುದಿದ್ದರೆ ಅದಕ್ಕೆ ಜಿಎಸ್‌ಟಿ ಅನ್ವಯವಾಗುವುದಿಲ್ಲ. ಆದರೆ, ಚಿನ್ನದ ಅಂಗಡಿ ಮಾಲಕರು ಸಾರ್ವಜನಿಕರಿಂದ ಹಳೆಯ ಚಿನ್ನ ಖರೀದಿ ಮಾಡುವುದಿದ್ದರೆ ಶೇ.3ರ ತೆರಿಗೆ ಅನ್ವಯವಾಗುತ್ತದೆ. ಅದೇ ರೀತಿ ಹಳೆಯ ದ್ವಿಚಕ್ರ ಮತ್ತು ಚತುಶ್ಚಕ್ರ ವಾಹನಗಳಿಗೂ ಇದೇ ನಿಯಮಗಳು ಅನ್ವಯವಾಗುತ್ತವೆೆ.
ನಿಗದಿತ ಗೃಹ ಕಲ್ಯಾಣ ಸಂಘ (ಆರ್‌ಡಬ್ಲ್ಯೂ)ಗಳು ನೀಡುವ ಸೇವೆಗಳಿಗೂ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಆದರೆ ಅವುಗಳು ವಿಧಿಸುವ ಶುಲ್ಕ 5 ಸಾವಿರ ರೂ.ಗಳಿಗಿಂತ ಕಡಿಮೆ ಇರಬಾರದು ಎಂಬ ನಿಯಮ ವಿಧಿಸಲಾಗಿದೆ. ಶೈಕ್ಷಣಿಕ ಸಂಸ್ಥೆಗಳ ಹಾಸ್ಟೆಲ್‌ಗಳಿಗೆ ಕೂಡ ಶೇ.18ರಷ್ಟು ತೆರಿಗೆ ವಿಧಿಸಲಾಗುತ್ತಿದೆ ಎಂಬ ವರದಿಯನ್ನು ಸರಕಾರ ತಳ್ಳಿ ಹಾಕಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವಿನಾಯಿತಿ ಮುಂದುವರಿಸ ಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
50 ಸಾವಿರ ವರೆಗಿನ ಉಡುಗೊರೆಗೆ ವಿನಾಯಿತಿ
ಉದ್ಯೋಗದಾತ ತನ್ನ ಕೈಕೆಳಗಿನ ಉದ್ಯೋಗಸ್ಥರಿಗೆ 50 ಸಾವಿರ ರೂ. ಮೌಲ್ಯದವರೆಗಿನ ಉಡುಗೊರೆಗಳನ್ನು ನೀಡಲು ಅವಕಾಶ ಇದೆ. ಅದಕ್ಕೆ ಹೊಸ ತೆರಿಗೆ ಪದ್ಧತಿಯಲ್ಲಿ ವಿನಾಯ್ತಿ ಇದೆ.