Advertisement

ಲುಂಗಿ ಮಾರಿ ದೊಡ್ಡವರಾಗಿ!

11:40 AM Feb 02, 2018 | Team Udayavani |

ಯುವಕರು ಸ್ವಉದ್ಯೋಗ ಮಾಡಿದರೆ ಭವಿಷ್ಯ ಚೆನ್ನಾಗಿರುತ್ತದೆ ಎಂಬ ಸಂದೇಶವನ್ನು ಸಿನಿಮಾ ತಂಡವೊಂದು ಲುಂಗಿ ಮೂಲಕ ಹೇಳಲು ಹೊರಟಿದೆ! ಲುಂಗಿ ಮತ್ತು ಸ್ವ ಉದ್ಯೋಗಕ್ಕೆ ಏನು ಸಂಬಂಧ ಎಂದು ನೀವು ಕೇಳಬಹುದು. ಹೊಸಬರ ತಂಡ ಇಡೀ ಸಿನಿಮಾದಲ್ಲಿ ಲುಂಗಿಯ ಮಹತ್ವವನ್ನು ಹೇಳಲು ಹೊರಟಿದೆ. ಆ ಸಿನಿಮಾಕ್ಕೆ ಅವರಿಟ್ಟ ಹೆಸರು ಕೂಡಾ “ಲುಂಗಿ’. ಏನಿದು ಚಿತ್ರದ ಟೈಟಲ್‌ ವಿಚಿತ್ರವಾಗಿದೆಯಲ್ಲ ಎಂದು ನೀವಂದುಕೊಳ್ಳಬಹುದು. ಆದರೆ, ಚಿತ್ರತಂಡ ಮಾತ್ರ ಆ ಟೈಟಲ್‌ನಡಿ ಸಿನಿಮಾ ಮಾಡಿ ಖುಷಿಯಾಗಿದೆ. ಮಂಗಳೂರಿನ ಅಕ್ಷಿತ್‌ ಶೆಟ್ಟಿ ಈ ಚಿತ್ರದ ನಿರ್ದೇಶಕರು.

Advertisement

ಇಂಜಿನಿಯರಿಂಗ್‌ ಓದಿರುವ ನಾಯಕನಿಗೆ ಸ್ವಂತ ಉದ್ಯೋಗ ಮಾಡಬೇಕೆಂಬ ಆಸೆ ಇರುತ್ತದೆಯಂತೆ. ಹಾಗಾಗಿ, ತಂದೆ ಕೊಡಿಸಿರುವ ಕೆಲಸಕ್ಕೂ ಹೋಗದೇ ನಿರುದ್ಯೋಗಿಯಾಗಿರುತ್ತಾನಂತೆ. ಇಂತಿಪ್ಪ ನಾಯಕನಿಗೆ ಲವ್‌ ಆಗುತ್ತದೆ. ಜವಾಬ್ದಾರಿಯೂ ಹೆಚ್ಚುತ್ತದೆ. ಹಾಗಾಗಿ, ನಾಯಕ ಲುಂಗಿ ಬಿಝಿನೆಸ್‌ ಆರಂಭಿಸಿ ಅದರಲ್ಲಿ ಉನ್ನತ ಪ್ರಗತಿ ಸಾಧಿಸುತ್ತಾನಂತೆ. ನಿರ್ದೇಶಕರು ಹೇಳುವಂತೆ  ಇದು ಎಲ್ಲಾ ಕಾಲಕ್ಕೂ ಹೊಂದಿಕೆಯಾಗುವಂತಹ ಕಥೆಯಾಗಿದ್ದು, ಯುವಕರು ಸ್ವ ಉದ್ಯೋಗ ಮಾಡಿದರೆ ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ ಎಂಬ ಅಂಶದ ಜೊತೆಗೆ ಯಕ್ಷಗಾನ ಕಲೆ ಉಳಿಸಿ ಎಂಬ ಸಂದೇಶವನ್ನು ಹೇಳಲಾಗಿದೆಯಂತೆ.

ಈಗಾಗಲೇ ಎರಡು ತುಳು ಸಿನಿಮಾಗಳನ್ನು ನಿರ್ಮಿಸಿರುವ ಮುಖೇಶ್‌ ಹೆಗ್ಡೆ ಈ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ ನಿರ್ಮಾಪಕರ ಮಗ ಪ್ರಣವ್‌ ಹೆಗ್ಡೆ ನಾಯಕರಾಗಿ ನಟಿಸಿದ್ದಾರೆ. ಕ್ಯಾಮರಾ ಮುಂದೆ ನಿಲ್ಲುವ ಮೊದಲು “ಒಂದು ಮೊಟ್ಟೆಯ ಕಥೆ’ಯ ರಾಜ್‌ ಬಿ ಶೆಟ್ಟಿಯವರಿಂದ ನಟನೆಯ ತರಬೇತಿ ಪಡೆದಿದ್ದಾರಂತೆ. ಚಿತ್ರದಲ್ಲಿ ನಾಯಕಿಯರಾಗಿ ಅಹಲ್ಯ ಸುರೇಶ್‌ ಹಾಗೂ ರಾಧಿಕಾ ರಾವ್‌ ನಟಿಸಿದ್ದಾರೆ. ಅರ್ಜುನ್‌ ಲೂಯಿಸ್‌ ಕತೆ ಬರೆದು ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಚಿತ್ರಕ್ಕೆ  ಪ್ರಸಾದ್‌.ಕೆ.ಶೆಟ್ಟಿ ಸಂಗೀತ, ರಾಜ್‌.ಪಿ.ಜಾನ್‌ ಛಾಯಾಗ್ರಹಣ, ಮನು ಶೇಡಿಗಾರ್‌  ಸಂಕಲನವಿದೆ.  ಚಿತ್ರದಲ್ಲಿ  ವಿ.ಮನೋಹರ್‌, ದೀಪಕ್‌ ರೈ, ರೂಪಾ ವರ್ಕಾಡಿ, ಜಯ ಕೃಷ್ಣನ್‌  ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next