Advertisement

ಕರಾವಳಿ ಯುವಜನರ ಒಲವು ಕೇಂದ್ರ ಪುರಸ್ಕೃತ ಯೋಜನೆ ಕಡೆ: ನಿರೀಕ್ಷೆ ಮೀರಿದ ಸ್ಪಂದನೆ

01:30 AM Dec 12, 2022 | Team Udayavani |

ಉಡುಪಿ: ಸ್ವೋದ್ಯೋಗಕ್ಕೆ ಉತ್ತೇಜನ ನೀಡುವುದು ಮತ್ತು ಅದಕ್ಕೆ ಪೂರಕವಾಗಿ ಸಾಲಸೌಲಭ್ಯ ಕಲ್ಪಿಸುವ ಕೇಂದ್ರ ಸರಕಾರ ವಿವಿಧ ಯೋಜನೆಗಳಿಗೆ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತ ವಾಗುತ್ತಿದೆ. ಕರಾ ವಳಿಯ ಯುವ ಜನತೆ ಕೇಂದ್ರ ಪುರಸ್ಕೃತ ಯೋಜನೆಗಳಡಿ ಸ್ವೋದ್ಯೋಗ ಆರಂಭಿಸುವ ಜತೆಗೆ ಉದ್ಯೋಗದಾತ ರಾಗಲು ಹೆಚ್ಚಿನ ಆಸಕ್ತಿ ಹೊಂದುತ್ತಿದ್ದಾರೆ.

Advertisement

ಮುದ್ರಾ ಯೋಜನೆ, ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಘಟಕ ಯೋಜನೆ (ಪಿಎಂಎಫ್ಎಂಇ), ಪಿಎಂ ಉದ್ಯೋಗ ಸೃಜನ ಕಾರ್ಯಕ್ರಮ (ಪಿಎಂಇಜಿಪಿ), ಪಿಎಂ ಸ್ವನಿಧಿ ಯೋಜನೆ (ಪಿಎಂಸ್ವನಿಧಿ), ಕೃಷಿ ಮೂಲಸೌಕರ್ಯ ನಿಧಿ (ಎಐಎಫ್) -ಹೀಗೆ ಕೇಂದ್ರದ ಪ್ರಮುಖ ಯೋಜನೆಗಳಿಗೆ ನಿರ್ದಿಷ್ಟ ಗುರಿ ಗಿಂತಲೂ ಹೆಚ್ಚು ಅರ್ಜಿ ಬರುತ್ತಿರುವುದು ಮಾತ್ರವಲ್ಲದೆ, ವಿಲೇವಾರಿಯೂ ಅಷ್ಟೇ ವೇಗವಾಗಿ ನಡೆಯುತ್ತಿದೆ.

ಕೇಂದ್ರ ಪುರಸ್ಕೃತ‌ ಬಹುತೇಕ ಎಲ್ಲ ಯೋಜನೆಗಳಿಗೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅರ್ಜಿಗಳಲ್ಲಿ ಉದ್ಯಮ ಸ್ಥಾಪನೆಗೆ ಸಂಬಂಧಿಸಿದ್ದರೆ ಅದನ್ನು ಜಿಲ್ಲಾ ಕೈಗಾರಿಕೆ ಕೇಂದ್ರದ ಮೂಲಕ ಪರಿಶೀಲಿಸಿ, ಯೋಜನೆಯ ಸಂಪೂರ್ಣ ಮಾಹಿತಿ ಪಡೆಯಲಾಗುತ್ತದೆ.

ಅನಂತರ ಸಂಬಂಧಪಟ್ಟ ಬ್ಯಾಂಕ್‌ಗೆ ಅದನ್ನು ಕಳುಹಿಸಲಾಗುತ್ತದೆ. ಬೆಳೆ ವಿಮೆ ಸಹಿತ ಇಲಾಖೆಗೆ ಸಂಬಂಧಿಸಿದ ಯೋಜನೆಗಳಿಗೆ ಸಂಬಂಧಿಸಿದ್ದಾಗಿದ್ದರೆ ಅಧಿಕಾರಿಗಳು ಪರಿಶೀಲಿಸಿ ಮುಂದಿನ ಹಂತಕ್ಕೆ ಕಳುಹಿಸಲಾಗುತ್ತದೆ.

ಗುರಿ ಮೀರಿದ ಸಾಧನೆ
ಪಿಎಂ ಸ್ವನಿಧಿ ಯೋಜನೆ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ. ಇದರಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ 2,186 ಫ‌ಲಾನುಭವಿಗೆ ಯೋಜನೆ ಲಾಭ ಒದಗಿಸುವ ಗುರಿ ಹೊಂದಲಾಗಿತ್ತು. ಆದರೆ 6,798 ಅರ್ಜಿಗಳು ಬಂದಿದ್ದು, 5,125 ಮಂದಿಗೆ ಸಾಲಸೌಲಭ್ಯ ಕಲ್ಪಿಸಲಾಗಿದೆ. ಶೇ. 75ರಷ್ಟು ಮಂಜೂರಾತಿ ಪ್ರಮಾಣವಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಸಲ್ಲಿಕೆಯಾಗಿದ್ದ 5,339 ಅರ್ಜಿಗಳಲ್ಲಿ 5,101 ಅರ್ಜಿಗೆ ಮಂಜೂರಾತಿ ನೀಡಲಾಗಿದೆ. ಎರಡು ಮತ್ತು ಮೂರನೇ ಹಂತದಲ್ಲಿ 2,400 ಅರ್ಜಿಗಳಲ್ಲಿ 1,928 ಅರ್ಜಿಗಳಿಗೆ ಮಂಜೂರಾತಿ ಒದಗಿಸಲಾಗಿದೆ. ಹೀಗೆ ಬಹುತೇಕ ಎಲ್ಲ ಯೋಜನೆಗಳಲ್ಲೂ ಗುರಿ ಮೀರಿದ ಸಾಧನೆ ದಾಖಲಾಗಿದೆ.

Advertisement

ಬ್ಯಾಂಕ್‌ಗಳಲ್ಲಿ ಬಾಕಿ
ಕೆಲವು ತಾಂತ್ರಿಕ ಕಾರಣದಿಂದ ಹಲವು ಅರ್ಜಿಗಳು ಬ್ಯಾಂಕ್‌ ಹಂತದಲ್ಲೇ ಬಾಕಿ ಉಳಿದಿರುತ್ತವೆ. ಯೋಜನೆಯ ವೆಚ್ಚ ಮತ್ತು ಅನುಷ್ಠಾನದ ಬಗ್ಗೆ ಸರಿಯಾಗಿ ಮಾಹಿತಿ ಒದಗಿಸದೆ ಇರುವುದು, ದಾಖಲೆಗಳನ್ನು ಸಲ್ಲಿಸದೆ ಇರುವುದು, ಸಂಬಂಧಪಟ್ಟ ಪ್ರಾಧಿಕಾರಗಳ ಮೂಲಕ ಪರವಾನಿಗೆ ತೆಗೆದುಕೊಳ್ಳದೆ ಇದ್ದ ಸಂದರ್ಭಗಳಲ್ಲಿ ಅರ್ಜಿ ತಿರಸ್ಕೃತವಾಗುತ್ತದೆ. ಇದೆಲ್ಲವೂ ಸರಿಯಾಗಿದ್ದು ಯೋಜನಾ ವೆಚ್ಚ ಮತ್ತು ಸ್ಥಳದ ಕಾರಣಕ್ಕೆ ಬ್ಯಾಂಕ್‌ಗಳಲ್ಲಿ ವಿಳಂಬವಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸಬ್ಸಿಡಿ ಹೆಚ್ಚು
ಕೇಂದ್ರ ಸರಕಾರದ ಬಹುತೇಕ ಯೋಜನೆಗಳನ್ನು ಲೀಡ್‌ ಬ್ಯಾಂಕ್‌ ಅಥವಾ ಸಂಬಂಧಪಟ್ಟ ಇಲಾಖೆಯ ಮೂಲಕ ಅದರ ಪರಿಶೀಲನೆ ಕಾರ್ಯ ನಡೆಯುತ್ತಿರುತ್ತದೆ. ಕೇಂದ್ರ ಪುರಸ್ಕೃತ ಬಹುತೇಕ ಎಲ್ಲ ಯೋಜನೆಗಳಿಗೂ ಕೇಂದ್ರ ಸರಕಾರದಿಂದ ಸಬ್ಸಿಡಿ ಬರುತ್ತದೆ. ಅದರಲ್ಲೂ ಕಿರು ಆಹಾರ ಸಂಸ್ಕರಣ ಘಟಕಗಳಿಗೆ ಹೆಚ್ಚು ಸಬ್ಸಿಡಿ ನೀಡಲಾಗುತ್ತದೆ. ಶೇ. 10ರಿಂದ ಶೇ. 35ರಷ್ಟರ ವರೆಗೂ ವಿವಿಧ ಯೋಜನೆಗೆ ಸಬ್ಸಿಡಿಯಿದೆ.

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಗುರಿ ಮೀರಿದ ಸಾಧನೆ ದಾಖಲಾಗುತ್ತಿದೆ. ಕೇಂದ್ರ ಸರಕಾರ ಈಗ ಅರ್ಜಿ ಸಲ್ಲಿಸುವ ವಿಧಾನವನ್ನು ಸರಳಗೊಳಿಸಿದೆ. ಅಲ್ಲದೆ ಯೋಜನೆಗೆ ಸಂಬಂಧಿಸಿದ ದಾಖಲೆಗಳು ಸರಿಯಾಗಿದ್ದಲ್ಲಿ ಕೂಡಲೇ ಸಾಲ ಸೌಲಭ್ಯವೂ ದೊರಕುತ್ತದೆ ಮತ್ತು ಸಬ್ಸಿಡಿಯೂ ಬರುತ್ತದೆ.
 - ಪಿ.ಎಂ. ಪಿಂಜಾರ, ಪ್ರವೀಣ್‌ ಎಂ.ಪಿ., ಲೀಡ್‌ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕರು, ಉಡುಪಿ, ದ.ಕ.

–  ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next