Advertisement

ಆತ್ಮ ವಂಚನೆ ಮತ್ತು ಆತ್ಮ ಶೋಧನೆ

12:30 AM Apr 08, 2018 | |

ಮಾಧ್ಯಮಗಳ ಜಾಲ ಈಗ ವಿಸ್ತಾರ ಗೊಂಡಿರುವುದರಿಂದ ಓದುಗ/ವೀಕ್ಷಕರ ಜಾಲವೂ ವಿಸ್ತಾರಗೊಂಡಿದೆ. ಮುದ್ರಣ ಮಾಧ್ಯಮವೊಂದೇ ಇದ್ದಾಗ ಮುದ್ರಣ ಮಾಧ್ಯಮದವರಿಗೆ ಅದರಲ್ಲೂ ಪತ್ರಕರ್ತರಾಗಿದ್ದವರಿಗೆ ಹೆಚ್ಚಿನ ಜವಾಬ್ದಾರಿಯಿತ್ತು ಮತ್ತು ಅಂಥ ಜವಾಬ್ದಾರಿಯುತ ವೃತ್ತಿಪರತೆಯನ್ನೇ ಓದುಗರು ಬಯಸುತ್ತಿದ್ದರು. 

Advertisement

ಯಾರೂ ತೆಗಳಿಕೆಯನ್ನು ಇಷ್ಟಪಡುವುದಿಲ್ಲ, ಹಾಗೊಂದು ವೇಳೆ ತೆಗಳಿಕೆಯನ್ನೇ ಬಯಸುತ್ತೇನೆ ಎಂದು ಹೇಳುವುದು ಆತ್ಮವಂಚನೆಯಾಗುತ್ತದೆ. ತೆಗಳಿಸಿ ಕೊಳ್ಳಲು ಹೆಚ್ಚು ಪರಿಶ್ರಮ ಬೇಕಾಗಿಲ್ಲ, ಹೊಗಳಿಸಿಕೊಳ್ಳಲು ಪರಿಶ್ರಮ ಹಾಗೂ ಕಾಲಾವಕಾಶ ಬೇಕಾಗುತ್ತದೆ. ನಾನು ಬರೆದ ಸಾಹಿತ್ಯವನ್ನು ಓದುಗರು ಮೆಚ್ಚಿ ಕೊಳ್ಳಬೇಕು ಎನ್ನುವ ತುಡಿತ ಸಹಜವಾಗಿ ಇರುತ್ತದೆ. ಆದರೆ ಹಾಗೆ ಮೆಚ್ಚಿ ಕೊಳ್ಳಬೇಕಾದರೆ ನಾನು ಬರೆದದ್ದು ಅವರ ಗ್ರಹಿಕೆಗೆ ಹತ್ತಿರವಾಗಿರಬೇಕು ಎನ್ನುವ ಕಾಳಜಿಯೂ ನನಗಿರಬೇಕಾಗುತ್ತದೆ. ಅಂಥ ಕಾಳಜಿಗೆ ಕೊರತೆಯಾದಾಗ ಬರವಣಿಗೆ ನನಗೆ ಮಾತ್ರ ಆಪ್ಯಾಯಮಾನವಾಗುತ್ತದೆ ಹೊರತು ಓದುಗರಿಗಲ್ಲ. ಅಂತೆಯೇ ಓದುಗ ಕೂಡಾ ಬರಹಗಾರನ ಮೇಲೆ ಕಾಳಜಿ ಹೊಂದಿರಬೇಕಾಗುತ್ತದೆ ಎನ್ನುವ ನಿರೀಕ್ಷೆ ಸಹಜವಾದುದೇ ಆದರೂ ಬರಹಗಾರ ನಿರೀಕ್ಷಿಸುವಷ್ಟರ ಮಟ್ಟಿಗೆ ಓದುಗ ಪ್ರತಿಕ್ರಿಯಿಸುವುದಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ಓದುಗನ ನಿರೀಕ್ಷೆಗೆ ವಿರುದ್ಧವಾಗಿ ಅಥವಾ ಬರಹಗಾರ ತಪ್ಪಾಗಿ ಬರೆದಿದ್ದರೆ ಅವನ ಪ್ರತಿಕ್ರಿಯೆ ಆ ಕ್ಷಣಕ್ಕೆ ವ್ಯಕ್ತವಾಗುತ್ತದೆ. ಒಂದು ವೇಳೆ ಓದುಗನ ಗ್ರಹಿಕೆಗೆ ಅದು ತಾಳೆಯಾಗುವಂತಿದ್ದರೆ ಅವನಿಗೆ ಪ್ರತಿಕ್ರಿಯಿಸಬೇಕು ಅನ್ನಿಸುವುದಿಲ್ಲ. ಆದ್ದರಿಂದಲೇ ಓದುಗನ ಪ್ರತಿಕ್ರಿಯೆ ಬಹುತೇಕ ಮೌನವಾಗಿರುತ್ತದೆ. ಹೀಗಾದರೆ ಅದು ಬರಹಗಾರನ ಪರವಾಗಿದೆ ಎಂದೇ ಅರ್ಥ.

ಮಾಧ್ಯಮಗಳ ಜಾಲ ಈಗ ವಿಸ್ತಾರಗೊಂಡಿರುವುದರಿಂದ ಓದುಗ ಅಥವಾ ವೀಕ್ಷಕರ ಜಾಲವೂ ವಿಸ್ತಾರಗೊಂಡಿದೆ. ಮುದ್ರಣ ಮಾಧ್ಯಮವೊಂದೇ ಇದ್ದಾಗ ಮುದ್ರಣ ಮಾಧ್ಯಮದವರಿಗೆ ಅದರಲ್ಲೂ ಪತ್ರಕರ್ತರಾಗಿದ್ದವರಿಗೆ ಹೆಚ್ಚಿನ ಜವಾಬ್ದಾರಿಯಿತ್ತು ಮತ್ತು ಅಂಥ ಜವಾಬ್ದಾರಿಯುತ ವೃತ್ತಿಪರತೆಯನ್ನೇ ಓದುಗರು ಬಯಸುತ್ತಿದ್ದರು. ಒಂದು ಸುದ್ದಿಯನ್ನು ಬರೆಯುವಾಗ ಬಳಸುವ ಪದಗಳ ಬಗ್ಗೆಯೂ ಅತ್ಯಂತ ಎಚ್ಚರಿಕೆವಹಿಸಬೇಕಾಗಿತ್ತು. ಪತ್ರಕರ್ತನಿಗೆ ಬರೆಯುವ ಪೂರ್ಣ ಸ್ವಾತಂತ್ರ್ಯವಿತ್ತಾದರೂ ಅದನ್ನು ಓದುಗರು ಪ್ರಶ್ನೆ ಮಾಡುತ್ತಾರೆ ಎನ್ನುವ ಎಚ್ಚರ ಅವನಲ್ಲಿ ಜಾಗೃತ ಸ್ಥಿತಿಯಲ್ಲಿತ್ತು. 

“ಪತ್ರಕರ್ತರನ್ನು ಅರಬ್ಬಿ ಸಮುದ್ರಕ್ಕೆ ಎಸೆಯಿರಿ’ ಎನ್ನುವ ಒಂದು ವಾಕ್ಯದಿಂದಾಗಿ ಅಂದಿನ ಮುಖ್ಯಮಂತ್ರಿ ಆರ್‌.ಗುಂಡೂರಾವ್‌ ತಮ್ಮ ಕುರ್ಚಿ ಕಳೆದುಕೊಂಡರು ಅಂದರೆ ಹೊಸ ತಲೆಮಾರಿನ ಪತ್ರಕರ್ತರು ನಂಬುವುದು ಕಷ್ಟ, ಆದರೆ ವಾಸ್ತವ. ಅಂದು ಪತ್ರಿಕೆಯ ಪ್ರಭಾವ ಅಷ್ಟಿತ್ತು ಮತ್ತು ಅಂಥ ಸುದ್ದಿ ಬರೆದ ಪತ್ರಕರ್ತನಿಗೆ ಅಂಥ ಕ್ರೆಡಿಬಿಲಿಟಿ ಇತ್ತು. ಓದುಗರೂ ಅಷ್ಟೇ ವಿಶ್ವಾಸವನ್ನು ಸುದ್ದಿ ಹಾಗೂ ಆ ಸುದ್ದಿ ಬರೆದ ಪತ್ರಕರ್ತನ ಮೇಲೆ ಇಟ್ಟಿರುತ್ತಿದ್ದರು. ಈ ಮಾತುಗಳು ಈಗಿನ ಪತ್ರಕರ್ತರಿಗೆ ರುಚಿಸದೇ ಹೋಗಬಹುದು ಅಥವಾ ಇದು ನಂಬುವಂಥದ್ದಲ್ಲ ಎನ್ನುವ ಅಭಿಪ್ರಾಯವೂ ಇರಬಹುದು, ಮೆಚ್ಚಲೇಬೇಕೆನ್ನುವ ಒತ್ತಾಸೆಯೂ ಇಲ್ಲ, ಅದಕ್ಕೆ ಕಾರಣಗಳೂ ಅನೇಕಾನೇಕ.

Advertisement

80ರ ದಶಕದಲ್ಲಿ ಪತ್ರಿಕೆಯೊಂದು ಒಬ್ಬ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಇಳಿಸುವಷ್ಟು ಸಾಮರ್ಥಯ ಹೊಂದಿದ್ದರೆ ಈಗ ನಿತ್ಯವೂ ಒಬ್ಬೊಬ್ಬರು ರಾಜೀನಾಮೆ ಕೊಡುತ್ತಿರಬೇಕಿತ್ತಲ್ಲ ಎನ್ನುವ ಪ್ರಶ್ನೆ ಮೂಡಿದರೆ ಅಚ್ಚರಿಯಿಲ್ಲ. 
ಈಗ ಪ್ರತ್ಯೇಕ ರಾಜ್ಯ ಕೇಳುತ್ತಾರೆ, ತಮಗಾಗಿಯೇ ಜಿಲ್ಲೆ ಬೇಕೆನ್ನುತ್ತಾರೆ. ಮನೆ ಮಂದಿಯ ಹೆಸರಲ್ಲಿ ಕೋಟಿ ಕೋಟಿ ಆಸ್ತಿ ಮಾಡುತ್ತಾರೆ. ಜಾತಿಯ ಹೆಸರಲ್ಲಿ ಮಠ-ಮಂದಿರ ಕಟ್ಟುತ್ತಾರೆ, ಸರಕಾರದ ಬೊಕ್ಕಸದಿಂದ ಕೋಟಿ ಕೋಟಿ ದಾನ ಮಾಡುತ್ತಾರೆ, ಧಾರಾವಾಹಿಗಳಾಗಿ ಇವೆಲ್ಲವುಗಳ ಬಗ್ಗೆ ಮುದ್ರಣ ಮಾಧ್ಯಮದಲ್ಲಿ ಲೇಖನಗಳು ಪ್ರಕಟವಾಗುತ್ತವೆ. ದೃಶ್ಯ ಮಾಧ್ಯಮಗಳಲ್ಲಿ ದಿನಪೂರ್ತಿ ಚರ್ಚೆ ಗಳಾಗುತ್ತವೆ, ಓದುಗ, ವೀಕ್ಷಕ ಇವೆಲ್ಲಕ್ಕೂ ಸಾಕ್ಷಿಯಾಗುತ್ತಾನೆೆ. ಇಂಥ ವಿವಾದಕ್ಕೆ ಕಾರಣರಾದವರು ದಿನ ಬೆಳಗಾಗುವುದರೊಳಗೆ ಹೀರೋ ಆಗಿಬಿಡುತ್ತಿದ್ದಾರೆ ಹೊರತು ಗುಂಡೂರಾವ್‌ ಅವರಂತೆ ಅಧಿಕಾರ ಕಳೆದುಕೊಂಡು ಮೂಲೆಗುಂಪಾ ಗುವುದಿಲ್ಲ. ಇಂಥ ಸುದ್ದಿಗಳನ್ನು ಬರೆದ ಪತ್ರಕರ್ತ ಹಿಂದೆ ಹೀರೋ ಆಗುತ್ತಿದ್ದ ಈಗ “ವಿಲನ್‌’ ಅನ್ನಿಸಿಕೊಳ್ಳುತ್ತಿದ್ದಾನೆ(ಈ ಮಾತಿಗೆ ಅಪವಾದಗಳಿರಬಹುದು).

ಶತಮಾನಗಳ ಇತಿಹಾಸವುಳ್ಳ, ಮಹಾಕಾವ್ಯ ಪರಂಪರೆಯಿರುವ ಕನ್ನಡ ಸಾಹಿತ್ಯವನ್ನು ಬಸವಲಿಂಗಪ್ಪ “ಬೂಸಾ’ ಅಂದದ್ದು ಹೊಸ ಸಾಹಿತ್ಯ ಚಳವಳಿಗೆ ಪ್ರೇರಣೆ ಯಾಯಿತು ಅಂದರೆ ಈಗ ನಂಬುವುದು ಕಷ್ಟ. ಇದು ಇತಿಹಾಸದಲ್ಲಿಡಗಿರುವ ಸತ್ಯ. ಆರ್ಥಿಕ ಪರಿಣತರಾಗಿದ್ದ ಅರುಣ್‌ ಶೌರಿ 1980ರಲ್ಲಿ ಬಾಗಲ್ಪುರ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಿಗೆ ಕೊಡುತ್ತಿದ್ದ ಹಿಂಸೆ, ಕಣ್ಣುಗಳಿಗೆ ಸೂಜಿಯಿಂದ ಚುಚ್ಚುವುದು, ಆ್ಯಸಿಡ್‌ ಹಾಕುವುದನ್ನು “ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಯಲ್ಲಿ ಸರಣಿ ಲೇಖನ ಬರೆದು ಜಗತ್ತಿನ ಗಮನ ಸೆಳೆದರು. ಸರಕಾರದ ವಿರುದ್ಧ ತನಿಖಾ ವರದಿ ಬರೆದು ಸುಮಾರು 300 ಕೇಸುಗಳನ್ನು “ಇಂಡಿಯನ್‌ ಎಕ್ಸ್‌ ಪ್ರಸ್‌’ ಮೇಲೆ ಜಡಿಯಲು ಕಾರಣರಾದರು. ಇದನ್ನು ಕೂಡಾ ಈಗ ನಿರಾಕರಿಸಲಾಗದು. ಆಗ ಸರಕಾರ, ರಾಜಕಾರಣಿಗಳು ನಡುಗಿದ್ದೂ ಕೂಡಾ ಸತ್ಯ. ಆದರೆ ಈಗ ಇಂಥ ಬರವಣಿಗೆಗಳಿಗೇನೂ ಕೊರತೆಯಾಗಿಲ್ಲ. ಅಂದಿಗಿಂತ ಇಂದು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಪ್ರಬಲವಾಗಿವೆಯಾದರೂ ಅಂದಿನಂತೆ ಫ‌ಲಿತಾಂಶಗಳು ಬರುತ್ತಿಲ್ಲ ಏಕೆ ಎನ್ನುವುದು ಪ್ರಶ್ನೆ.

ಇದಕ್ಕೆ ಉತ್ತರ ಹುಡುಕುವ ಅಗತ್ಯ ಮಾಧ್ಯಮಗಳು ಮತ್ತು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರೇ ಮಾಡಬೇಕಾಗಿದೆ, ಆತ್ಮಶೋಧನೆಯನ್ನು ನಾವೇ ಮಾಡಿಕೊಳ್ಳಬೇಕಾಗಿದೆ. ಪ್ರಾಮಾಣಿಕತೆಯನ್ನು ಸುದೀರ್ಘ‌ ಕಾಲದವರೆಗೆ ಉಳಿಸಿಕೊಳ್ಳುವುದು ಈಗ ಕಷ್ಟ ಎಂದು ಮಾಧ್ಯಮಗಳಿಗೆ ಮತ್ತು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅನ್ನಿಸುತ್ತಿದೆ. ಚುನಾವಣೆ ಕಾಲದಲ್ಲಿ ಮಾಧ್ಯಮಗಳು ಕಂಡುಕೊಂಡಿರುವ “ಪೆಯ್ಡ ನ್ಯೂಸ್‌’ ತಂತ್ರ  ಮಾಡುವ ಅವಾಂತರಗಳ ಗಂಭೀರತೆಯ ಅರಿವು ಇರಬೇಕಾಗುತ್ತದೆ. ಲೋಕಾಯುಕ್ತರು ಅಧಿಕಾರಿಗಳ, ರಾಜಕಾರಣಿಗಳ ಮನೆಗಳ ಮೇಲೆ ದಾಳಿ ಮಾಡಿ ಕೋಟಿ ಕೋಟಿ ಅಕ್ರಮ ಆಸ್ತಿ ಜಪ್ತಿ ಮಾಡಿದಾಗ ಆ ಸುದ್ದಿಯನ್ನು ಬರೆಯುವ ನಾವು, ನಮ್ಮ ಮಾಧ್ಯಮಗಳು ನಾವಿರುವ ಸ್ಥಿತಿಯ ಬಗ್ಗೆಯೂ ಎದೆಮುಟ್ಟಿ ನೋಡಿಕೊಳ್ಳಬೇಕೆನಿಸುವುದಿಲ್ಲವೆ? 

ಮಾಧ್ಯಮ ಪ್ರಬಲವಾಗಿದ್ದರೆ, ಅದರ ಜಾಲ ವಿಸ್ತಾರವಾಗಿದ್ದರೆ ಅದರ ಪತ್ರಕರ್ತನೂ ಪ್ರಭಾವಿಯಾಗಿತ್ತಾನೆ. ಅವನು ಹೇಳಿದ್ದೇ ನೀತಿಯಾಗುತ್ತದೆ. ಮಾಧ್ಯಮ ದುರ್ಬಲವಾಗಿದ್ದರೆ ಪ್ರಬಲ ಪತ್ರಕರ್ತನಾಗಿದ್ದರೂ ಅವನು ಅಭಿಪ್ರಾಯ ರೂಪಿಸಲು ಸಾಧ್ಯವಿಲ್ಲ. ಮಾಧ್ಯಮದಿಂದ ಪತ್ರಕರ್ತ ಬೆಳೆಯು ವಷ್ಟರ ಮಟ್ಟಿಗೆ ಮಾಧ್ಯಮವನ್ನು ಒಬ್ಬ ಪತ್ರಕರ್ತ ಬೆಳೆಸುವುದು ಸಾಧ್ಯವಿಲ್ಲ, ತಾನು ಮಾತ್ರ ಮಾಧ್ಯಮದ ಪ್ರಭಾವದಲ್ಲಿ ಬೆಳೆಯಬಲ್ಲ. ತಾನು ಬೆಳೆಯಬೇಕೆನ್ನುವ ತಹತಹಿಕೆಯಲ್ಲಿ ಬೆಳೆದ ಹಿನ್ನೆಲೆಯನ್ನು ಮರೆತುಬಿಟ್ಟರೆ ಒಂದು ಸುದ್ದಿ ಮುಖ್ಯಮಂತ್ರಿಯ ಕುರ್ಚಿ ಕಸಿಯಲಾರದು ಅಥವಾ ಒಂದು ಚಳವಳಿಯನ್ನು ಹುಟ್ಟು ಹಾಕಲಾರದು.

ಚಿದಂಬರ ಬೈಕಂಪಾಡಿ

Advertisement

Udayavani is now on Telegram. Click here to join our channel and stay updated with the latest news.

Next