Advertisement

ಮರೆಯಾಗುತ್ತಿರುವ ಕಡಲಾಮೆಗಳ ರಕ್ಷಣೆಗೆ ಸ್ವಯಂ ಜಾಗೃತಿ

09:07 PM Aug 23, 2021 | Team Udayavani |

ಕುಂದಾಪುರ:  ಕುಂದಾಪುರ, ಬೈಂದೂರು ಹಾಗೂ ಕಾರವಾರದ  ಹೊನ್ನಾವರ ತಾಲೂಕುಗಳಲ್ಲಿನ ಅರಬಿ ಕಡಲ ತೀರ ಪ್ರದೇಶದಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಆಗಾಗ ಕಾಣಿಸಿಕೊಂಡಿದ್ದ ಕಡಲಾಮೆ ಮೊಟ್ಟೆಗಳು ಸುದ್ದಿಯಾಗಿತ್ತು. ಹೀಗೆ ಪತ್ತೆಯಾಗಿದ್ದ ಮೊಟ್ಟೆಗಳ ಸಂರಕ್ಷಣೆ ಅನೇಕ ಸ್ವಯಂ ಸೇವಾ ಸಂಸ್ಥೆಗಳಿಂದ ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಕಡಲ ತೀರದಲ್ಲಿಯೇ ತಾತ್ಕಾಲಿಕ ಹ್ಯಾಚರಿಗಳನ್ನು ನಿರ್ಮಿಸಿ, ಮೊಟ್ಟೆಗಳ ರಕ್ಷಣೆ ಮಾಡಿ ಮರಿಗಳನ್ನು ಕಡಲು ಸೇರಿಸುವಲ್ಲಿಯವರೆಗೆ ನಡೆಯಿತು.

Advertisement

ರಕ್ಷಣೆ :

ಗೋಪಾಡಿಯ ಕರ್ಕಿಕಳಿ ಎಂಬಲ್ಲಿ ತೀರಕ್ಕೆ ಬಂದಿದ್ದ ಕಡಲಾಮೆಯನ್ನು ಸ್ಥಳೀಯರು ಎಫ್‌ಎಸ್‌ಎಲ್‌ ಇಂಡಿಯಾ ಹಾಗೂ ರೀಫ್‌ ವಾಚ್‌ ಸಂಘಟನೆ ಕಾರ್ಯಕರ್ತರ ಸಹಾಯದಿಂದ ಮತ್ತೆ ಕಡಲು ಸೇರಿಸಿದ್ದರು.  ಕಿರಿಮಂಜೇಶ್ವರ ಹಾಗೂ ಮರವಂತೆಯ ಕಡಲ ತೀರದಲ್ಲಿ ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿದ್ದ ಕಡಲಾಮೆಯನ್ನು ಸ್ಥಳೀಯರು ರಕ್ಷಿಸಿದ್ದರು. ಕೋಡಿ ಕಡಲ ಕಿನಾರೆಯಲ್ಲಿ ರೆಕ್ಕೆಗೆ ಪೆಟ್ಟು ಬಿದ್ದ ಸ್ಥಿತಿಯಲ್ಲಿ ಪತ್ತೆಯಾದ ಭಾರಿ ಗಾತ್ರದ ಕಡಲಾಮೆಗೆ ರೀಫ್ ವಾಚ್‌ ಸಂಸ್ಥೆಯ ಮತ್ಸ್ಯತಜ್ಞರು ಆರೈಕೆ ಮಾಡಿದ್ದರು. ಮಣೂರು ಪಡುಕೆರೆ ಕಡಲ ಕಿನಾರೆಯಲ್ಲಿ ಸಮುದ್ರದಲ್ಲಿನ ಬಳಸಿ ಬಿಸಾಡಿದ ಹಳೆ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಭಾರೀ ಗಾತ್ರದ 2 ಕಡಲಾಮೆಗಳನ್ನು, ಮಣೂರು ಪಡುಕೆರೆಯ ಶ್ರೀರಾಮ್‌ ಫ್ರೆಂಡ್ಸ್‌ನ ಕಾರ್ತಿಕ್‌ ಹಾಗೂ ನಾಗರಾಜ್‌ ರಕ್ಷಿಸಿದ್ದರು.

ತುರ್ತು ಸ್ಪಂದನ :

ಕಡಲಾಮೆಗಳು ಪತ್ತೆಯಾದ ಮಾಹಿತಿ ದೊರೆತ ತತ್‌ಕ್ಷಣವೇ  ಸ್ಪಂದಿಸುವ ಎಫ್‌ಎಸ್‌ಎಲ್‌ ಸ್ವಯಂಸೇವಾ ಸಂಸ್ಥೆಯ ಕಾರ್ಯಕರ್ತರು ರಕ್ಷಿಸಿ ಪ್ರಾಥಮಿಕ ಆರೈಕೆ ನೀಡಿಮರಳಿ ಕಡಲಿಗೆ ಸೇರಿಸುತ್ತಾರೆ. ಸಮುದ್ರದಲ್ಲಿನ ಒತ್ತಡ, ಬೋಟ್‌ಗಳ ಅಪಘಾತಗಳು ಹಾಗೂ ಉಪಯೋಗಿಸಿ ಬೀಸಾಡಿದ ಮೀನುಗಾರಿಕ ಬಲೆಗಳಲ್ಲಿ ಸಿಲುಕಿ ಗಾಯಗೊಳ್ಳುವ ಕಡಲಾಮೆಗಳಿಗೆ ಕೋಡಿಯ  ರೀಫ್ ವಾಚ್‌ ಸ್ವಯಂಸೇವಾ ಸಂಸ್ಥೆ ಮೂಲಕ ಚಿಕಿತ್ಸೆ ಹಾಗೂ ಆರೈಕೆ ಮಾಡಲಾಗುತ್ತಿದೆ.

Advertisement

ಕಡಲ ರಕ್ಷಣೆ  :

ಕಡಲಿನಲ್ಲಿ ಬೆಳೆಯುವ ಮೀನು ಸಂತತಿ ನಾಶಕ್ಕೆ ಕಾರಣವಾಗುವ ತ್ಯಾಜ್ಯಗಳ ಕಶ್ಮಲಗಳನ್ನು ನಿವಾರಿಸಿ ಕಡಲನ್ನು ಸ್ವತ್ಛವಾಗಿಡುವ ಕೆಲಸವನ್ನು ನಿಯಮಿತವಾಗಿ ಮಾಡುವ ಕಡಲಾಮೆಗಳು ಪ್ರಸ್ತುತ ವಿನಾಶದಂಚಿನ ಜೀವಿಗಳೆಂದು ಗುರುತಿಸಲಾಗಿದೆ. 130 ವರ್ಷಗಳ ಜೀವಿತಾವಧಿಯನ್ನು ಹೊಂದಿರುವ ಕಡಲಾಮೆಗಳು ಸಣ್ಣ ಗಾತ್ರದಿಂದ ಗಜ ಗಾತ್ರದವರೆಗೂ ತಮ್ಮ ಬೆಳವಣಿಗೆಯನ್ನು ಸಾಧಿಸುತ್ತದೆ. ಮೀನುಗಳ ಮರಿಗಳನ್ನು ಗುಂಪು ಗುಂಪಾಗಿ ಆಪೋಶನ ತೆಗೆದುಕೊಳ್ಳುವ ಜಲ್ಲಿ ಮೀನುಗಳನ್ನು ತಿನ್ನುವ ಕಡಲಾಮೆಗಳಿಂದಾಗಿ ಮತ್ಸ್ಯ ಸಂತತಿ ಅಭಿವೃದ್ಧಿಯಾಗುತ್ತದೆ. ಕಡಲಾಮೆ  ಸಂತತಿ ಮರೆಯಾಗುತ್ತಿರುವುದರಿಂದಾಗಿ ಮೀನುಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಸಮುದ್ರದಲ್ಲಿ ಹೇರಳವಾಗಿ ಬೆಳೆಯುವ ಪಾಚಿಗಳ ನಿರ್ಮೂಲನೆಯ ಕಾರ್ಯವೂ ಕಡಲಾಮೆಗಳಿಂದ ಆಗುತ್ತಿದೆ.

ಸ್ವಚ್ಛ ಬೀಚ್‌ :

ಕಡಲಾಮೆಗಳು ಸ್ವಚ್ಛ  ಹಾಗೂ ನಿರ್ಮಲವಾದ ಸಮುದ್ರ ತೀರ ಪ್ರದೇಶಗಳನ್ನು ಮಾತ್ರ ಮೊಟ್ಟೆ ಇಡಲು ಆಯ್ಕೆ ಮಾಡಿಕೊಳುತ್ತವೆ. ಕೋಡಿ ಪರಿಸರ ಸ್ವತ್ಛತೆಗೆ ಹೆಸರಾಗಿದ್ದು ಕಡಲಾಮೆ ಸಂತಾನ ಅಭಿವೃದ್ಧಿಗಾಗಿ ಆಯ್ಕೆ ಮಾಡಿಕೊಂಡಿದೆ. ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ತಂಡ 100 ವಾರಗಳಿಂದ ಬೀಚ್‌ ಸ್ವಚ್ಛ ಮಾಡುತ್ತಿದೆ.

ಸಂರಕ್ಷಣೆಯ  ಸಂಸ್ಥೆಗಳು :

ಕುಂದಾಪುರ ಕೇಂದ್ರಿತವಾಗಿರುವ ಎಫ್‌ಎಸ್‌ಎಲ್‌ ಸಂಸ್ಥೆ  ಹಲವು ವರ್ಷಗಳಿಂದ ಅಳಿವಿನಂಚಿನಲ್ಲಿ ಇರುವ ಕಡಲಾಮೆಗಳ ಸಂತತಿಯ ಉಳಿವಿಗಾಗಿ ನಿರಂತರ ಕಾರ್ಯಕ್ರಮವನ್ನು ರೂಪಿಸುತ್ತಾ ಬಂದಿದೆ. ಬೆಂಗಳೂರಿನ ಡಾ| ಶಂತನು ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ರೀಫ್‌ ವಾಚ್‌ ಸಂಸ್ಥೆ ವನ್ಯ ಜೀವಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದು, ಕಡಲ ಜೀವಿಗಳ ಸಂರಕ್ಷಣೆಗಾಗಿಯೂ  ಸೇವೆ ವಿಸ್ತರಿಸಿದೆ.  ಎಂ ಕೋಡಿಯಲ್ಲಿ ಆರೈಕೆ ಕೇಂದ್ರ ತೆರೆಯಲಾಗಿದ್ದು, ಮಂಗಳೂರಿನ ತೇಜಸ್ವಿನಿ ಹಾಗೂ ಫರ್ನಾಜ್‌ ಆರೈಕೆ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್‌ನವರು ತಮ್ಮ ಕೊಡುಗೆ ನೀಡುತ್ತಿದ್ದಾರೆ. ಸ್ಥಳೀಯ ಮೀನುಗಾರರಾದ ಬಾಬು ಮೊಗವೀರ, ಲಕ್ಷಣ, ಉದಯ್‌ ಹಾಗೂ ಅನಿಲ್‌ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮೀನುಗಳ ಸಂತಾನದ ಅಭಿವೃದ್ಧಿಯಲ್ಲಿ ದೊಡ್ಡ ಕೊಡುಗೆಯನ್ನು ನೀಡುತ್ತಿರುವ ಕಡಲಾಮೆಗಳ ಸಂರಕ್ಷಣೆಯ ಹೊಣೆ ನಮ್ಮೆಲ್ಲರ ಮೇಲಿದೆ. ಕಡಲ ಹಾಗೂ ಕಡಲ ತೀರವನ್ನು ತ್ಯಾಜ್ಯ ಮುಕ್ತವಾಗಿಸುವ ಮೂಲಕ ಈ ಅಪರೂಪದ ಜೀವಿಯನ್ನು ಮುಂದಿನ ತಲೆಮಾರಿಗೆ ಉಳಿಸಬೇಕಾದ ಕೆಲಸವನ್ನು ಮಾಡಬೇಕು.ದಿನೇಶ್‌ ಸಾರಂಗ್‌ ,ಎಫ್‌ಎಸ್‌ಎಲ್‌ ಇಂಡಿಯಾ ಕಾರ್ಯಕರ್ತ

ಬಳಸಿ ಎಸೆಯುವ ಬಲೆಗಳನ್ನು ಸಮುದ್ರಕ್ಕೆ ಎಸೆಯುವುದರಿಂದ ಅದರ ನಡುವೆ ಸಿಲುಕಿಕೊಳ್ಳುವ ಕಡಲಾಮೆಗಳು ಈಜಾಟ ನಡೆಸಲಾಗದೆ ಅಪಾಯಕ್ಕೆ ಸಿಲುಕಿಕೊಳ್ಳುತ್ತವೆ. ಕೆಲವೊಮ್ಮೆ ಚಿಕಿತ್ಸೆ ನೀಡಲಾಗದಷ್ಟು ಅಘಾತಕ್ಕೆ ಒಳಗಾಗಿರುತ್ತವೆ. ಬಳಸಿ ಬೀಸಾಡುವ ಬಲೆಗಳನ್ನು  ಕಡಲಿಗೆ ಎಸೆಯದಂತೆ ಸ್ವಯಂ ನಿರ್ಬಂಧ ವಿಧಿಸಿಕೊಳ್ಳಬೇಕು. ತೇಜಸ್ವಿನಿ, ರೀಫ್ ವಾಚ್‌ ಸಂಸ್ಥೆಯ ಕಾರ್ಯಕರ್ತೆ.

Advertisement

Udayavani is now on Telegram. Click here to join our channel and stay updated with the latest news.

Next