ಬೆಂಗಳೂರು:ವಿಧಾನ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಕಾಂಗ್ರೆಸ್‌ನಲ್ಲಿ ಅಸಮಾಧಾನ ಮುಂದುವರಿದಿದ್ದು, ಯಾವ ಮಾನದಂಡ ಅನುರಿಸಲಾಗಿದೆ ಎಂದು ಪ್ರಶ್ನಿಸಿ ಮುಖಂಡ ಎಂ.ಡಿ.ಲಕ್ಷ್ಮೀನಾರಾಯಣ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಮತ್ತೊಂದೆಡೆ ರಾಜ್ಯಸಭೆ ಅಭ್ಯರ್ಥಿ ಜೈರಾಂ ರಮೇಶ್ ಆಯ್ಕೆ ವಿರುದ್ಧ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಆಕ್ರೋಶ ಹೊರಹಾಕಿದ್ದು, ರಾಜ್ಯಕ್ಕೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.
ಅಭ್ಯರ್ಥಿ ಆಯ್ಕೆಯನ್ನು ಎಐಸಿಸಿ ಮಾಡಬಾರದು. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಸುರ್ಜೆವಾಲಾ ಅವರಿಗೆ ಬಿಡಬೇಕು. ರಾಜ್ಯದಲ್ಲಿ ಪಕ್ಷಕ್ಕೆ ಕೆಲಸ ಮಾಡಿದವರು ಸಾಕಷ್ಟಿದ್ದು, ದಿಲ್ಲಿಯಿಂದ ಅಭ್ಯರ್ಥಿಗಳನ್ನು ಹೇರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿರುವ ಎಂ.ಡಿ. ಲಕ್ಷಿ$¾à ನಾರಾಯಣ ಚಿಂತನ- ಮಂಥನ ಸಭೆ ಕರೆದು ಚರ್ಚೆಗೆ ಅವಕಾಶ ಕೋರಿದ್ದಾರೆ.
ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಚುನಾವಣೆ ಸಮಿತಿ ಇದೆಯೇ? ಇದ್ದಲ್ಲಿ ವಿಧಾನ ಪರಿಷತ್ ಚುನಾವಣೆಗೆ ಎಷ್ಟು ಸಭೆಗಳನ್ನು ನಡೆಸಲಾಯಿತು? ಯಾವ ಮಾನದಂಡವನ್ನು ಅನು ಸರಿಸಿ ಆಯ್ಕೆ ಮಾಡಲಾಗಿದೆ? ಅಪೇಕ್ಷೀತರ ಪಟ್ಟಿಯಲ್ಲಿ ಎಷ್ಟು ಜನರ ಹೆಸರನ್ನು ಎಐಸಿಸಿಗೆ ಶಿಪಾರಸು ಮಾಡಲಾಯಿತು? ಕೆಪಿಸಿಸಿ ಅಧ್ಯಕ್ಷರು, ಸಿದ್ದರಾಮಯ್ಯ ಶಿಫಾರಸು ಮಾಡಿದ ಹೆಸರುಗಳನ್ನು ತಿರಸ್ಕರಿಸಲು ಕಾರಣವೇನು? ತಿರಸ್ಕರಿಸಿದ ಬಳಿಕ ಯಾವ ಹೆಸರುಗಳನ್ನು ನೀಡಲಾ ಯಿತು? ಕೊನೆ ಗಳಿಗೆಯಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷರು ಹಾಗೂ ವಿಪಕ್ಷ ನಾಯಕರು ನೀಡಿದ ಹೆಸರುಗಳನ್ನು ಕೈಬಿಟ್ಟು ಬೇರೆಯವರು ಸೂಚಿಸಿದ ಹೆಸರುಗಳಿಗೆ ಅನುಮೋದನೆ ನೀಡಿದ್ದು ಯಾಕೆ ಮುಂತಾದವುಗಳ ಬಗ್ಗೆ ಚರ್ಚೆಯಾಗಲಿ ಎಂದಿದ್ದಾರೆ.
ಮತ್ತೊಂದೆಡೆ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅವರು ಆಕ್ಷೇಪ ವ್ಯಕ್ತಪಡಿಸಿ, ಜೈರಾಂ ರಮೇಶ್ ರಾಜ್ಯದ ಮೂಲ ದವರು ಇರಬಹುದು. ಆದರೆ, ನೆಲ-ಜಲ, ಜಿಎಸ್‌ಟಿ ವಿಚಾರದಲ್ಲಿ ಅವರ ಹೋರಾಟ ಏನು ಎಂದು ಪ್ರಶ್ನಿಸಿದ್ದಾರೆ.
ಪರಿಷತ್ ಚುನಾವಣೆಗೆ ಸಂಬಂಧಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕವಿತಾ ರೆಡ್ಡಿ ಹಾಗೂ ಸಾಮಾಜಿಕ ಜಾಲತಾಣದ ಮಾಜಿ ಮುಖ್ಯಸ್ಥ ನಟರಾಜ ಗೌಡ ಕೂಡಆಕ್ಷೇಪ ವ್ಯಕ್ತಪಡಿಸಿದ್ದರು. ಕವಿತಾ ರೆಡ್ಡಿಗೆ ನೋಟಿಸ್ ಜಾರಿ ಮಾಡಲಾಗಿತ್ತು.