ಹೊಸದಿಲ್ಲಿ: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯಕ್ಕೆಂದು ಆರಿಸಲಾದ ಭಾರತ ತಂಡದಲ್ಲಿ ತಮಿಳುನಾಡಿನ ಆರಂಭಕಾರ ಅಭಿನವ್ ಮುಕುಂದ್ 6 ವರ್ಷಗಳ ಬಳಿಕ ಅಚ್ಚರಿಯ ಕರೆ ಪಡೆದಿದ್ದಾರೆ. ಹಾಗೆಯೇ ಇಂಗ್ಲೆಂಡ್ ವಿರುದ್ಧ ಮಿಂಚಿದ ಪಾರ್ಥಿವ್ ಪಟೇಲ್ ಅವರನ್ನು ಹೊರಗಿರಿಸಿ ಮತ್ತೆ ವೃದ್ಧಿಮಾನ್ ಸಾಹಾ ಅವರನ್ನೇ ಪ್ರಧಾನ ಹಾಗೂ ಏಕೈಕ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ.
ಮುಕುಂದ್ 2011ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಪ್ರವಾಸದ ವೇಳೆ 5 ಟೆಸ್ಟ್‌ಗಳನ್ನಾಡಿದ್ದರು. ಒಂದು ಅರ್ಧ ಶತಕ ಸಹಿತ 10 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು 211 ರನ್ ಮಾತ್ರ. ಪ್ರಸಕ್ತ ರಣಜಿ ಋತುವಿನಲ್ಲಿ 849 ರನ್ ಮಾಡಿದ ಕಾರಣಕ್ಕಾಗಿ ಮುಕುಂದ್ ಅವರ ಆಯ್ಕೆ ನಡೆದಿದೆ ಎನ್ನಲಾಗಿದೆ.
ಗಾಯಾಳಾಗಿ ಹೊರಗುಳಿದಿದ್ದ ಅಜಿಂಕ್ಯ ರಹಾನೆ, ಜಯಂತ್ ಯಾದವ್, ಹಾರ್ದಿಕ್ ಪಾಂಡ್ಯ ಅವರೆಲ್ಲ ಟೆಸ್ಟ್ ತಂಡಕ್ಕೆ ಮರಳಿದ್ದಾರೆ.
ಈ ಏಕೈಕ ಟೆಸ್ಟ್ ಪಂದ್ಯ ಫೆ. 9ರಿಂದ ಹೈದರಾಬಾದ್‌ನಲ್ಲಿ ಆರಂಭವಾಗಲಿದೆ.
ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್ ರಾಹುಲ್, ಮುರಳಿ ವಿಜಯ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಕರುಣ್ ನಾಯರ್, ಹಾರ್ದಿಕ್ ಪಾಂಡ್ಯ, ವೃದ್ಧಿಮಾನ್ ಸಾಹಾ, ಆರ್. ಅಶ್ವಿನ್, ರವೀಂದ್ರ ಜಡೇಜ, ಅಮಿತ್ ಮಿಶ್ರಾ, ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಅಭಿನವ್ ಮುಕುಂದ್.