ಮುಂಬೈ: ಪ್ರಸ್ತುತ ಬರ್ಮಿಂಗಂ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ ನ ವನಿತಾ ಹಾಕಿ ಕೂಟದ ಸೆಮಿ ಫೈನಲ್ ನಲ್ಲಿ ಭಾರತ ತಂಡ ಸೋಲನುಭವಿಸಿದೆ. ಆದರೆ ಈ ಪಂದ್ಯದ ಪೆನಾಲ್ಟಿ ಶೂಟೌಟ್ ವೇಳೆ ನಡೆದ ಘಟನೆಗೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟ್ ಆಟಗಾರ ವೀರೆಂದ್ರ ಸೆಹವಾಗ್ ಗರಂ ಆಗಿದ್ದಾರೆ.
ಪೆನಾಲ್ಟಿ ಶೂಟೌಟ್ ವೇಳೆ ಆಸೀಸ್ ಆಟಗಾರ್ತಿಯ ಪೆನಾಲ್ಟಿ ಯತ್ನ ವಿಫಲವಾಗಿತ್ತು. ಆದರೆ ಈ ವೇಳೆ ಬಂದ ರೆಫ್ರಿ ಈ ಪೆನಾಲ್ಟಿ ವೇಳೆ ಗಡಿಯಾರದ ಟೈಮರ್ ಆರಂಭವಾಗಿರಲಿಲ್ಲ ಎಂದರು. ಹೀಗಾಗಿ ಆಸೀಸ್ ಗೆ ಮತ್ತೆ ಅವಕಾಶ ನೀಡಲಾಯಿತು. ಈ ವೇಳೆ ಆಸೀಸ್ ಆಟಗಾರ್ತಿ ಪೆನಾಲ್ಟಿ ಗೋಲು ಬಾರಿಸಿದರು. ಪಂದ್ಯವನ್ನು ಭಾರತ 0-3 ಅಂತರದಲ್ಲಿ ಸೋತಿತು.
ಇದನ್ನೂ ಓದಿ:ಬ್ರಿಟಿಷ್ ವಸಾಹತು ಶಾಹಿಗೆ ಸಿಂಹಸ್ವಪ್ನ…ಬುಡಕಟ್ಟು ಜನಾಂಗದ ರಾಣಿ ಗೈಡಿನ್ಲಿಯು ಬಗ್ಗೆ ಗೊತ್ತಾ?
ಈ ಘಟನೆಗೆ ಸಂಬಂಧಿಸಿದಂತೆ ಭಾರತದ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಇದು ಮೋಸದಾಟ ಎಂದು ಜರಿದಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ವೀರೆಂದ್ರ ಸೆಹವಾಗ್, “ಆಸ್ಟ್ರೇಲಿಯಾದಿಂದ ಪೆನಾಲ್ಟಿ ತಪ್ಪಿತು. ಅದಕ್ಕೆ ಅಂಪೈರ್ ಕ್ಷಮಿಸಿ ಟೈಮರ್ ಆರಂಭವಾಗಿಲ್ಲ ಎಂದರು. ನಾವು ಸೂಪರ್ ಪವರ್ ಆಗುವವರೆಗೂ ಕ್ರಿಕೆಟ್‌ನಲ್ಲಿ ಇಂತಹ ಪಕ್ಷಪಾತ ನಡೆಸುವ ಘಟನೆಗಳು ನಡೆಯುತ್ತಿದ್ದವು. ಹಾಕಿಯಲ್ಲೂ ನಾವು ಆದಷ್ಟು ಬೇಗ ಸೂಪರ್ ಪವರ್ ಆಗುತ್ತೇವೆ. ಆಗ ಎಲ್ಲಾ ಗಡಿಯಾರಗಳು ಸರಿಯಾದ ಸಮಯಕ್ಕೆ ಆರಂಭವಾಗುತ್ತದೆ. ಹುಡುಗಿಯರ ಬಗ್ಗೆ ಹೆಮ್ಮೆಯಿದೆ” ಎಂದಿದ್ದಾರೆ.
ಈ ಗಡಿಯಾರದ ವಿವಾದಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಕ್ಷಮೆಯಾಚಿಸಿದೆ. ಭಾರತದ ಸೆಮಿಫೈನಲ್ ಸೋಲಿಗೆ ಕಾರಣವಾದ ಘಟನೆಯನ್ನು “ಸಂಪೂರ್ಣವಾಗಿ ಪರಿಶೀಲಿಸುವುದಾಗಿ” ಹೇಳಿದೆ.
ಭಾರತ ತಂಡ ರವಿವಾರ ಕಂಚಿನ ಪದಕಕ್ಕಾಗಿ ನ್ಯೂಜಿಲ್ಯಾಂಡ್ ವಿರುದ್ಧ ಪಂದ್ಯವಾಡಲಿದೆ. ನ್ಯೂಜಿಲ್ಯಾಂಡ್ ತಂಡವು 2018ರ ಗೋಲ್ಡ್ ಕೋಸ್ಟ್ ಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿತ್ತು.