Advertisement

Seethakka ; ಅಂದು ನಕ್ಸಲೈಟ್,ಇಂದು ತೆಲಂಗಾಣ ಸರಕಾರದಲ್ಲಿ ಸಚಿವೆ!!

04:28 PM Dec 07, 2023 | Team Udayavani |

ಹೈದರಾಬಾದ್ : ತೆಲಂಗಾಣದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಮೊದಲ ಬಾರಿ ಸರಕಾರ ರಚಿಸಿದ್ದು ರೇವಂತ್ ರೆಡ್ಡಿ ಅವರಿಗೆ ಸಿಎಂ ಹುದ್ದೆ ನೀಡಿದ್ದು, ಇಬ್ಬರು ಮಹಿಳೆಯರಿಗೂ ಸಚಿವ ಸ್ಥಾನ ನೀಡಿದೆ. ಈ ಪೈಕಿ ‘ಸೀತಕ್ಕ’ ಎಂಬ ಹೆಸರಿನಿಂದ ಜನಪ್ರಿಯವಾಗಿ ಗುರುವಾರ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿ ದೇಶದ ಗಮನ ಸೆಳೆದಿರುವ ದನ್ಸಾರಿ ಅನಸೂಯಾ ಅವರದ್ದು ಹೋರಾಟದ ಹಾದಿ ಸಿನಿಮಾ ಕಥೆಗೆ ಸ್ಪೂರ್ತಿಯಾಗುವಂತಹದ್ದು.

Advertisement

52 ರ ಹರೆಯದ ಸೀತಕ್ಕ ಅವರು ಅಖಂಡ ಆಂಧ್ರದ ಜಗ್ಗನಗುಡೆಂ ಗ್ರಾಮದಲ್ಲಿ ಆದಿವಾಸಿ ಕೋಯಾ ಬುಡಕಟ್ಟು ಕುಟುಂಬದಲ್ಲಿ ಜನಿಸಿದರು. 14 ವರ್ಷದ ಬಾಲಕಿಯಾಗಿದ್ದಾಗಲೇ ಜನಶಕ್ತಿ ನಕ್ಸಲ್ ಗುಂಪಿಗೆ ಸೇರಿದರು. ಅವರು ಚಳವಳಿಯಿಂದ ಭ್ರಮನಿರಸನಗೊಂಡು ಹನ್ನೊಂದು ವರ್ಷಗಳ ನಂತರ 1997 ರಲ್ಲಿ ಸಾಮಾನ್ಯ ಕ್ಷಮಾದಾನ ಯೋಜನೆಯಡಿ ಪೊಲೀಸರಿಗೆ ಶರಣಾದರು. ನಂತರ ಓದನ್ನು ಮುಂದುವರೆಸಿದ ವಕೀಲರಾದರು. 2022 ರಲ್ಲಿ, ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಪಿಎಚ್‌ಡಿಯನ್ನೂ ಪೂರ್ಣಗೊಳಿಸಿದರು.ರಾಜಕೀಯ ಸೇರುವ ಮುನ್ನ ಅನಸೂಯಾ ನಕ್ಸಲೈಟ್ ಆಗಿದ್ದರು ಎನ್ನುವುದೇ ಈಗ ಬಹು ಚರ್ಚಿತ ವಿಷಯವಾಗಿದೆ.

2004 ರಲ್ಲಿ ತೆಲುಗು ದೇಶಂ ಪಕ್ಷ(ಟಿಡಿಪಿ) ಸೇರಿ ರಾಜಕೀಯ ಜೀವನ ಆರಂಭಿಸಿದರು ಮತ್ತು ಮುಲುಗು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವಿಫಲರಾದರು. 2009 ರಲ್ಲಿ ಮತ್ತೆ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಪೊದೆಂ ವೀರಯ್ಯ ಅವರನ್ನು ಭಾರಿ ಅಂತರದಿಂದ ಸೋಲಿಸಿದರು. 2014 ರಲ್ಲಿ ಬಿಆರ್‌ಎಸ್ ಅಭ್ಯರ್ಥಿ ಅಜ್ಮೀರಾ ಚಂದುಲಾಲ್ ವಿರುದ್ಧ ಸೋತರು. 2017 ರಲ್ಲಿ ಟಿಡಿಪಿ ತೊರೆದು ಕಾಂಗ್ರೆಸ್‌ಗೆ ಸೇರಿ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾದರು ಮತ್ತು ನಂತರ ಛತ್ತೀಸ್‌ಗಢ ಮಹಿಳಾ ಕಾಂಗ್ರೆಸ್‌ಗೆ ರಾಜ್ಯ ಉಸ್ತುವಾರಿಯಾಗಿದ್ದರು. 2018 ಮತ್ತು 2023ರಲ್ಲಿ ಮುಲುಗು ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಭರ್ಜರಿ ಜಯ ಸಾಧಿಸಿ ಈಗ ಸಚಿವೆ ಯಾಗಿದ್ದಾರೆ.

2020 ರಲ್ಲಿ ಲಾಕ್‌ಡೌನ್ ಸಮಯದಲ್ಲಿ ತೆಲಂಗಾಣ-ಛತ್ತೀಸ್‌ಗಢದ ಗಡಿ ಭಾಗದಲ್ಲಿರುವ 400 ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿ ಜನ ಸೇವೆ ಮಾಡಿದ್ದರು, ಸ್ಥಳೀಯರಿಗೆ ಪರಿಹಾರ ಆಹಾರ ಧಾನ್ಯ ಮತ್ತು ಇತರ ನೆರವನ್ನು ವಿತರಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next